ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟಿದೆ. ಮುಂಗಾರು ತಡವಾದುದು ಮಾತ್ರವಲ್ಲದೆ, ತಡವಾಗಿ ಬಂದರೂ ಸರಿಯಾಗಿ ಸುರಿದಿಲ್ಲ. ಆಗಸ್ಟ್ ತಿಂಗಳಿಡೀ ಮಳೆಯೇ ಆಗಿಲ್ಲ. ಮಳೆ ಇಲ್ಲದೆ ಹಲವು ಕಡೆ ಬರ ಆವರಿಸಿದೆ. ಕೆಲವೆಡೆ ಕುಡಿಯುವುದಕ್ಕೂ ನೀರಿಲ್ಲ. ಇನ್ನ ಕೆಲವೆಡೆ ನೀರಾವರಿಗೆ ಸಮಸ್ಯೆ. ಈ ನಿಟ್ಟಿನಲ್ಲಿ ಬರಪೀಡಿತ ತಾಲೂಕುಗಳ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಎದುರಾಗಿದ್ದು, ಬರ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸರಣಿ ಸಭೆಗಳನ್ನು ನಡೆಸುತ್ತಿದೆ. ಸದ್ಯ 114 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದ್ದು, ಈ ಎಲ್ಲ ತಾಲೂಕುಗಳಿಗೆ ಅನ್ನ ಭಾಗ್ಯ ಯೋಜನೆ (Anna Bhagya Scheme) ಅಡಿ ಹಣದ ಬದಲು 10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರದಿಂದ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಮುಂಗಾರು ಈ ವರ್ಷ ತೀವ್ರವಾಗಿ ದುರ್ಬಲಗೊಂಡಿದೆ. ಮಳೆಯನ್ನೇ ನೆಚ್ಚಿಕೊಂಡು ಉಳುಮೆ ಮಾಡಿದ್ದವರು ಕಂಗಾಲಾಗಿದ್ದಾರೆ. ಬೀಜ, ಗೊಬ್ಬರಕ್ಕೆಲ್ಲ ಖರ್ಚು ಮಾಡಿದ ಹಣ ವ್ಯರ್ಥವಾಗಿದೆ. ರೈತರು ಪರಿಹಾರದ ಹಣಕ್ಕಾಗಿ ಸರ್ಕಾರತದತ್ತ ನೋಡುತ್ತಿದ್ದಾರೆ. ಮಳೆ ನಂಬಿದ ರೈತರಿಗೆ ಮೋಸವಾಗಿದ್ದು, ರಾಜ್ಯ ಸರ್ಕಾರ ತಾಲೂಕುಗಳಲ್ಲಿ ಸರ್ವೆ ನಡೆಸಿದೆ. ಈ ಸಮೀಕ್ಷೆಯ ವರದಿ ಆಧರಿಸಿ ಸಚಿವ ಸಂಪುಟ ಮುಂದಿನ ಕ್ರಮಗಳ ಬಗ್ಗೆ ಸಮಾಲೋಚಿಸುತ್ತಿದೆ. 10 ಕೆಜಿ ಅಕ್ಕಿ ಕೊಡುವುದು ಅವುಗಳಲ್ಲಿ ಒಂದು. ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಜತೆಗೆ ರಾಜ್ಯದಿಂದ 5 ಕೆಜಿ ಅಕ್ಕಿಯನ್ನು ಸೇರಿಸಿ ಕೊಡಲಾಗುತ್ತದೆ. ಈ ವರೆಗೆ 5 ಕೆಜಿ ಅಕ್ಕಿಯ ಬದಲು ಹಣವನ್ನು ಖಾತೆಗೆ ಹಾಕಲಾಗುತ್ತಿತ್ತು. ಆದರೆ, ಬರಪೀಡಿತ ತಾಲೂಕುಗಳ ಪರಿಸ್ಥಿತಿ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಹಣದ ಬದಲು 10 ಕೆಜೆ ಅಕ್ಕಿಯನ್ನೇ ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಇದು ಅಕ್ಕಿಯ ಮಾತಾಯಿತು. ಆದರೆ ಜೋಳ, ರಾಗಿ ಬೆಳೆಯುವ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಅವರಿಗೂ ಸೂಕ್ತ ಆಹಾರ ಧಾನ್ಯ ವ್ಯವಸ್ಥೆ ಆಗಬೇಕಿದೆ.
ಜೂನ್‌ನಲ್ಲಿ ಬರಬೇಕಿದ್ದ ಮಳೆ ಬಾರದೆ, ಜುಲೈನಲ್ಲಿ ಸ್ವಲ್ಪ ಬಂದು, ಆಗಸ್ಟ್‌ನಲ್ಲಿ ಪೂರ್ತಿ ಮರೆಯಾಗಿ ಬಿಟ್ಟಿತ್ತು. ಹೀಗಾಗಿ ಬೆಳೆಗಳು ನೀರಿಲ್ಲದೇ ನಾಶವಾಗಿವೆ. ಅನೇಕ ಕಡೆ ರೈತರು ಒಣಗಿದ ಪೈರನ್ನು ನಾಶಪಡಿಸಿದ್ದಾರೆ. ಈ ಹಿಂದಿನ ಮೂರು ವರ್ಷವೂ ಸಮಸ್ಯೆ ಉಂಟಾಗಿತ್ತು. ಮುಂಗಾರು ಹಂಗಾಮಿನಲ್ಲಿ ರೈತರು ಪ್ರಹಾಹ, ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಕೆಲವೊಮ್ಮೆ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿತ್ತು. ಎಲ್ಲೆಡೆ ಅಂತರ್ಜಲ ಹೆಚ್ಚಾಗಿತ್ತು. ಕೆರೆ ಕಟ್ಟೆಗಳು ತುಂಬಿದ್ದವು. ಕಾವೇರಿ ನೀರು ಸಹ ಭರ್ತಿಯಾಗಿತ್ತು. ಆದರೆ ಇದನ್ನು ಮುಂದಿನ ವರ್ಷಕ್ಕೆ ಉಳಿಸಿಕೊಳ್ಳುವ, ದೀರ್ಘಾವಧಿ ಮಳೆಕೊಯ್ಲು ಮುಂತಾದ ಸುಸ್ಥಿರ ಪದ್ಧತಿಗಳು ನಮ್ಮ ರೈತರಲ್ಲಿ ಇಲ್ಲ. ಹೆಚ್ಚಿನವರು ಮಳೆಯನ್ನೇ ನೆಚ್ಚಿಕೊಂಡವರು. ಮಳೆ ಕೈಕೊಟ್ಟರೆ ಬದುಕಿನ ರಥವೇ ಮುಂದೆ ಸಾಗುವುದಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ ಗುಳೆ ಆರಂಭವಾಗುತ್ತಿದೆ. ಚೆನ್ನಾಗಿ ಮಳೆಯಾಗಿದ್ದರೆ ಸುಗ್ಗಿಯ ವೇಳೆಗೆ ರೈತರು ಮನೆಯಲ್ಲಿರುತ್ತಿದ್ದರು. ಆದರೆ ಈಗ ದುಡಿಮೆಗಾಗಿ ಪಟ್ಟಣಗಳತ್ತ ವಲಸೆ ಹೊರಡಲು ಮುಂದಾಗಿದ್ದಾರೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ಖಂಡನೀಯ
ಸರ್ಕಾರ ಈ ಸಂಕಷ್ಟ ಪರಿಸ್ಥಿತಿಯನ್ನು ದಾಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ನರೇಗಾ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಕೃಷಿ ಪತ್ತಿನ ಸಹಕಾರ ಸಂಘಗಳು, ಸ್ವಸಹಾಯ ಸಂಘಗಳ ಮೂಲಕ ರೈತರ ನೆರವಿಗೆ ಧಾವಿಸಬಹುದು. ಕೆರೆಕಟ್ಟೆಗಳ ಹೂಳೆತ್ತುವುದರಿಂದ ಸ್ವಲ್ಪ ಮಟ್ಟಿಗೆ ನೀರಿಗೆ ಸಹಾಯವಾಗಬಹುದು. ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಆಯಾ ಪ್ರದೇಶಕ್ಕೇ ವಿಶಿಷ್ಟವಾದ ಬರ ಸಮಸ್ಯೆಗನಳನ್ನು ಕಂಡುಕೊಂಡು ಉತ್ತರ ಒದಗಿಸುವ ಪ್ರಯತ್ನ ಆಗಬೇಕಿದೆ.