Site icon Vistara News

ಧಾರ್ಮಿಕ ಸಂಸ್ಥೆಗಳ ತಿದ್ದುಪಡಿ ವಿಧೇಯಕ ರದ್ದುಗೊಳಿಸಿ; ರಾಜ್ಯಪಾಲರಿಗೆ ದೇವಸ್ಥಾನಗಳ ಮಹಾಸಂಘ ಮನವಿ

Appeal to Governor

ನೆಲಮಂಗಲ: ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2024 ಅನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ನೆಲಮಂಗಲದಲ್ಲಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.

ಈ ವೇಳೆ ಹಿಂದು ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕ ಶರತ್ ಕುಮಾರ್ ಮಾತನಾಡಿ, ಈ ತಿದ್ದುಪಡಿ ವಿಧೇಯಕದಲ್ಲಿ ಹಲವಾರು ದೋಷಗಳಿದ್ದು, ಅವುಗಳು ದೇವಸ್ಥಾನಗಳ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿವೆ. ಹಾಗಾಗಿ ಈ ಕಲಂಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಕಲಂ 69 ಇ ನಲ್ಲಿ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಉನ್ನತ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಜಿಲ್ಲಾ ಮಟ್ಟದ ಸಮಿತಿಗೆ 9 ಜನರ ಸದಸ್ಯರ ನೇಮಕಾತಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ 9 ಜನರಲ್ಲಿ ಪದನಿಮಿತ್ತ ಜಿಲ್ಲಾಧಿಕಾರಿ, ಪೋಲಿಸ್ ಅಧಿಕಾರಿ, ಅರಣ್ಯ ಸಂರಕ್ಷಣಾ ಅಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಲೋಕೊಪಯೋಗಿ ಅಭಿಯಂತರ ಹೀಗೆ 9 ಜನರ ಸಮಿತಿ ರಚನೆ ಮಾಡಲಾಗಿದೆ. ಇದೇ ರೀತಿಯಲ್ಲಿ 16 ಜನರ ರಾಜ್ಯ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದ್ದು, ಅದರಲ್ಲಿ ಸ್ಥಳೀಯ ಶಾಸಕರು, ಸಂಸದರು ಸೇರಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಇದರಲ್ಲಿ ಹಿಂದುಗಳಲ್ಲದವರು ಇರುವ ಸಾಧ್ಯತೆ ಇರುವ ಕಾರಣದಿಂದ ಇದು ಅತ್ಯಂತ ಅಪಾಯಕಾರಿಯಾಗಿದೆ ಮತ್ತು ಅಲ್ಲಿಯೂ ಭ್ರಷ್ಟಚಾರವು ತಾಂಡವಾಡಲಿದೆ ಕಿಡಿಕಾರಿದರು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಭಾರತೀಯ ಸೈನ್ಯದ ಸ್ವರೂಪ, ಪ್ರಸ್ತುತಿಗಳಲ್ಲಿ ಬದಲಾವಣೆ ಬೇಕಿದೆ

ವಿಧೇಯಕದ ಕಲಂ 19 ರಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯ ಉಲ್ಲೇಖ ಮಾಡಲಾಗಿದೆ. ಈ ನಿಧಿಯನ್ನು ‘ಇತರ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಅನ್ಯಮತೀಯರಿಗೂ ಸಹ ಅನ್ವಯ ಮಾಡಲಾಗುವ ಸಾದ್ಯತೆ ಇದೆ. ಇದು ಮುಂದಿನ ದಿನಗಳಲ್ಲಿ ಅನ್ಯ ಸಮುದಾಯದವರಿಗೂ ಸಹ ಹಿಂದು ದೇವಸ್ಥಾನಗಳ ಹಣ ನೀಡುವ ಸಾಧ್ಯತೆ ಇದೆ. ಕಲಂ 25 ರಲ್ಲಿ ಸಂಯೋಜಿತ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ರಚನೆ ಸಂದರ್ಭದಲ್ಲಿ ಹಿಂದುಗಳಲ್ಲದವರನ್ನು ನೇಮಕ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಪರಂಪರೆ ರಕ್ಷಣೆಯ ವಿಷಯದಲ್ಲಿ ಅತ್ಯಂತ ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಲಂ 17 ರಲ್ಲಿ ಯಾವ ಸಂಸ್ಥೆಗಳ ಆದಾಯ 1 ಕೋಟಿ ಮೀರಿರುವುದೋ ಅವುಗಳ 10% ನಿವ್ವಳ ಆದಾಯದ ಪ್ರತಿಶತ ಹಣವನ್ನು 5 ರಿಂದ 10 ಲಕ್ಷ ಇರುವ ಆದಾಯ ಇರುವ ದೇವಸ್ಥಾನಗಳ 5 ಶೇ ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ವರ್ಗಾವಣೆ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಹಣವನ್ನು ದೋಚುವ ಹುನ್ನಾರವಾಗಿದೆ. ಈ ಎಲ್ಲ ಕಲಂಗಳು ದೇವಸ್ಥಾನಗಳ ಸಂರಕ್ಷಣೆ ದೃಷ್ಟಿಯಿಂದ ಅತ್ಯಂತ ಮಾರಕವಿರುವುದರಿಂದ ಇದಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ಇದನ್ನೂ ಓದಿ | Hindu-Muslim : ರಾಜ್ಯದ ಈ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್ ; ಎಲ್ಲಿ?

ಮನವಿ ಸಲ್ಲಿಕೆ ಸಂದರ್ಭದಲ್ಲಿ ನಗರಸಭೆ ಸದಸ್ಯ ರವಿ, ಕಚೇನಹಳ್ಳಿ ಆಂಜನೇಯ ದೇವಸ್ಥಾನದ ಅಣ್ಣಯ್ಯ ಸ್ವಾಮಿ, ದಾಸನಪುರದ ರಾಮಾನುಜಂ ಪೀಠದ ಉಪಾಧ್ಯಕ್ಷ ಜಯರಾಮ್, ಮೇಗಲಪೇಟೆ ಶ್ರೀ ಆಂಜನೇಯ ದೇವಸ್ಥಾನದ ಟ್ರಸ್ಟಿಗಳಾದ ಎನ್.ಸಿ ಜಗದೀಶ್, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ವೆಂಕಟೇಶಮೂರ್ತಿ, ಗಂಗರಪಳ್ಳಿ ಮಾರಮ್ಮ ದೇವಸ್ಥಾನದ ಟ್ರಸ್ಟಿ ಜಿ.ಕೆ ರಂಗಸ್ವಾಮಿ, ಆದರ್ಶ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮಮೂರ್ತಿ ರಾವ್ ಹಾಗೂ ಶ್ರೀ ವಿಶ್ವ ಶಾಂತಿ ಆಶ್ರಮದ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.

Exit mobile version