ಬೆಂಗಳೂರು: ಟಿಪ್ಪು ಸುಲ್ತಾನ್‌ನ್ನು ಕೊಂದ ಚಾರಿತ್ರಿಕ ಪುರುಷರು ಎಂದು ಬಿಜೆಪಿ ಬಿಂಬಿಸುತ್ತಿರುವ ಉರಿ ಗೌಡ ಮತ್ತು ನಂಜೇಗೌಡ ಅವರ ಕುರಿತ ಸಿನಿಮಾ ಮೇ 18ರಂದು ಸೆಟ್ಟೇರಲಿದೆ! ಎರಡು ದಿನಗಳ ಹಿಂದಷ್ಟೇ ಸಚಿವ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್ ಮೂಲಕ ‘ಉರೀಗೌಡ, ನಂಜೇಗೌಡ’ ಎಂಬ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಮಾತ್ರವಲ್ಲ ಸಿನಿಮಾ ಶೀರ್ಷಿಕೆಯನ್ನೂ ನೋಂದಾಯಿಸಿದ್ದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಇದರ ಬಗ್ಗೆ ಲೇವಡಿ ಮಾಡಿದ್ದರು. ತಗಾದೆ ತೆಗೆದಿದ್ದರು. ಇದೀಗ ಈ ಸಿನಿಮಾದ ಚಿತ್ರೀಕರಣ ಆರಂಭದ ದಿನಾಂಕವನ್ನೇ ಮುನಿರತ್ನ ಪ್ರಕಟಿಸುವ ಮೂಲಕ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಟಿಪ್ಪುವನ್ನು ಸಾಯಿಸಿದ್ದು ಉರಿಗೌಡ ಮತ್ತು ನಂಜೇಗೌಡ ಎಂದು ಬಿಜೆಪಿ ಹೇಳಿತ್ತು. ಆಗ ಇತಿಹಾಸ ಎಲ್ಲಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಕೇಳಿದ್ದವು. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಂತೂ ಕಥೆ ಯಾರು ಬರೀತಾರೆ ಸಿ.ಟಿ. ರವಿ ಅವರಾ ಎಂದು ಕೇಳಿದ್ದರು. ಈ ಥರ ಭಾರಿ ಚರ್ಚೆಗಳ ನಡುವೆಯೇ ಸಿನಿಮಾಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಮುನಿರತ್ನ. ಈ ಸಿನಿಮಾಕ್ಕೆ ಕಥೆ ಬರೆಯುತ್ತಿರುವುದು ಉನ್ನತ ಶಿಕ್ಷಣ ಖಾತೆ ಸಚಿವರಾಗಿರುವ ಡಾ. ಸಿ.ಎನ್. ಅಶ್ವತ್ಥನಾರಾಯಣ!
ಇದು ಪ್ಯಾನ್ ಇಂಡಿಯಾ ಸಿನಿಮಾ
ಇದು ಕೇವಲ ಕನ್ನಡಕ್ಕೆ ಸೀಮಿತವಾದ ಸಿನಿಮಾವಲ್ಲ, ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತೇವೆ ಎಂದು ಮುನಿರತ್ನ ಘೋಷಣೆ ಮಾಡಿದ್ದಾರೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಳೆದ ಗುರುವಾರ ವೃಷಭಾದ್ರಿ ಪ್ರೊಡಕ್ಷನ್ಸ್ ‘ಉರೀಗೌಡ, ನಂಜೇಗೌಡ’ ಮತ್ತು ‘ನಂಜೇಗೌಡ ಉರೀಗೌಡ’ ಎಂಬ ಟೈಟಲ್‌ಗಳನ್ನು ನೋಂದಾಯಿಸಲಾಗಿತ್ತು. ಪತ್ರಿಕೆಗಳಿಗೆ ಜಾಹೀರಾತು ಕೊಡುವಾಗ ಎಲ್ಲ ಕನ್ನಡದಲ್ಲಿಯೇ ಪ್ರಕಟಣೆ ಮಾಡಬೇಕು ಹಾಗೂ ಈ ಶೀರ್ಷಿಕೆ ಅನುಮೋದನೆಯಾಗದೆ ಯಾವ ರೀತಿಯ ಪ್ರಚಾರವನ್ನೂ ಮಾಡಬಾರದು ಎಂಬ ಮುದ್ರಿತ ಸೂಚನೆಯು ರಶೀದಿಯ ಮೇಲಿದೆ.
ಗುರುವಾರ ಸಿನಿಮಾ ಘೋಷಣೆ ಮಾಡಿದ ವೇಳೆ ಸುಳ್ಳನ್ನೇ ಸಿನಿಮಾ ಮಾಡುವ ಮೂಲಕ ಒಕ್ಕಲಿಗರನ್ನು ಇತಿಹಾಸದಲ್ಲಿ ಖಳನಾಯಕರನ್ನಾಗಿ ಶಾಶ್ವತಗೊಳಿಸುವ ಹುನ್ನಾರ ನಡೆಸಿರುವುದಾಗಿ ಎಚ್.ಡಿ.ಕುಮಾರಸ್ವಾಮಿ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್‌ಗಳ ಮೂಲಕ ಕಿಡಿಕಾರಿದ್ದರು.
ಸುವರ್ಣ ಮಂಡ್ಯ ಪುಸ್ತಕದಲ್ಲಿ ಸಿಕ್ಕಿತಾ ದಾಖಲೆ?
ಈ ನಡುವೆ, ಉರಿ ಗೌಡ ಮತ್ತು ನಂಜೇ ಗೌಡರ ಬಗ್ಗೆ ಖ್ಯಾತ ಸಾಹಿತಿ ದೇ ಜವರೇಗೌಡ ಅವರು ಬರೆದಿರುವ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖವಿರುವುದು ಪತ್ತೆಯಾಗಿದೆ. ಹೀಗಾಗಿ ಇದನ್ನೇ ಬಳಸಿಕೊಂಡು ಸಿನಿಮಾ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ : Karnataka Elections: ದಾಖಲೆ ಸಿಕ್ಕಿದೆ, ಮಂಡ್ಯದಲ್ಲಿ ಉರಿ ಗೌಡ-ನಂಜೇಗೌಡ ಪ್ರತಿಮೆ ಸ್ಥಾಪನೆ ಮಾಡ್ತೇವೆ ಎಂದ ಶೋಭಾ ಕರಂದ್ಲಾಜೆ