ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು, ಅಮೆರಿಕವು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲಿದ್ದು, ಭಾರತವು ಸಿಯಾಟಲ್‌ನಲ್ಲಿ ಮಿಷನ್ ಸ್ಥಾಪಿಸಲಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ಮೋದಿ ಸರ್ಕಾರಕ್ಕೆ ಸಂಸದರು ಧನ್ಯವಾದ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ಆರಂಭವಾದರೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ವೃದ್ಧಿಸುತ್ತದೆ. ಅದೇ ರೀತಿ ಬೆಂಗಳೂರಿನ ಹಿತಾಸಕ್ತಿಗಳನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಸ್ಥಾಪಿಸಲು 2019ರಲ್ಲಿ ತೇಜಸ್ವಿ ಸೂರ್ಯ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರ ಬಳಿ ಮನವಿ ಮಾಡಿದ್ದರು. ಆಗ, ಜೈಶಂಕರ್ ಅವರು, ಅಮೆರಿಕ ರಾಯಭಾರ ಕಚೇರಿ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ನಂತರ ಆ ಬಗ್ಗೆ ಪತ್ರ ಕೂಡ ಬರೆದಿದ್ದರು.
ಇದನ್ನೂ ಓದಿ | PM Modi US Visit: ಶ್ವೇತಭವನದಲ್ಲಿ ಮೋದಿಗೆ ಭವ್ಯ ಸ್ವಾಗತ; ವಿಶ್ವ ಶಾಂತಿಗೆ ಅಮೆರಿಕ-ಭಾರತ ಜತೆಗೂಡಿ ಕಾರ್ಯ ಅಂದ್ರು ಪಿಎಂ
ಸಂತಸದ ಸಂಗತಿ ಎಂದ ಪಿ.ಸಿ.ಮೋಹನ್
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿರುವ ವೇಳೆ ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಅಮೆರಿಕ ಹೊಸ ಕಾನ್ಸುಲೇಟ್ ಕಚೇರಿಗಳನ್ನು ತೆರೆಯಲಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದು ಇಡೀ ಸಂತಸದ ಸಂಗತಿ ಎಂದು ತಿಳಿಸಿದ್ದಾರೆ.
ಇದುವರೆಗೂ ಕರ್ನಾಟಕದ ಜನತೆ ಅಮೆರಿಕ ಪ್ರವಾಸ ಕೈಗೊಳ್ಳಲು ವೀಸಾ ಪಡೆಯಲು ಚೆನ್ನೈ ಅಥವಾ ಹೈದರಾಬಾದ್ ತೆರಳುವುದು ಅನಿವಾರ್ಯವಾಗಿತ್ತು. ಇದೀಗ ಬೆಂಗಳೂರಿನಲ್ಲೂ ಅಮೆರಿಕದ ಕಾನ್ಸುಲೇಟ್ ಕಚೇರಿ ತೆರೆದರೆ ಪ್ರಯಾಣಿಕರು ಇತರ ರಾಜ್ಯಗಳಿಗೆ ಹೋಗುವ ಅನಿವಾರ್ಯತೆ ಇರುವುದಿಲ್ಲ. ಈ ಮಹತ್ವದ ಕಾರ್ಯ ಸಾಕಾರಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.