Site icon Vistara News

Mining fund : ಗಣಿ ನಿಧಿ ಬಳಕೆಗೆ OA ಹದ್ದಿನ ಕಣ್ಣು; ಪ್ರತಿ ಕಾಮಗಾರಿ ಮೇಲೆ ಡಿಸಿ ನಿಗಾ

Ballary Mines

ಶಶಿಧರ ಮೇಟಿ, ವಿಸ್ತಾರ ನ್ಯೂಸ್ ಬಳ್ಳಾರಿ
ಕಬ್ಬಿಣದ ಅದಿರು ಮಾರಾಟದಿಂದ (Iron ore trade) ಗಣಿ ಬಾಧಿತರ ಅಭಿವೃದ್ಧಿಗೆ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣ (Mining Fund) ಬಳಕೆಯ ಮೇಲೆ ಸುಪ್ರೀಂಕೋರ್ಟ್‌ನಿಂದ ನೇಮಕವಾಗಿರುವ ನಿವೃತ್ತ ನ್ಯಾ. ಬಿ. ಸುದರ್ಶನರೆಡ್ಡಿ ನೇತೃತ್ವದ ಓವರ್ ಸೈಟ್ ಅಥಾರಿಟಿ (Oversight Authority-OA) ಹದ್ದಿನ ಕಣ್ಣಿಟ್ಟಿದೆ. ಜಿಲ್ಲೆಗಳಿಗೆ ಸಾವಿರಾರು ಕೋಟಿ ರೂ ಹಣ ಹರಿದು ಬರಲಿದ್ದು, ನಮಗೆ ಕಮಿಷನ್ ಹಣ ಬರಬಹುದೆಂಬ ಕೆಲವೊಬ್ಬರ ಲೆಕ್ಕಾಚಾರಕ್ಕೆ ಓವರ್ ಸೈಟ್ ಅಥಾರಿಟಿಯ ನಿರ್ಧಾರ ಎಳ್ಳುನೀರು ಬಿಟ್ಟಿದೆ‌.

ಆಯಾ ಜಿಲ್ಲೆಯ ಪ್ರತಿಯೊಂದು ಕಾಮಗಾರಿಯನ್ನು ಅಲ್ಲಿನ ಜಿಲ್ಲಾಧಿಕಾರಿಯೇ ಖುದ್ದಾಗಿ ಭೇಟಿ ಗ್ರೌಂಡ್ ರಿಯಾಲಿಟಿ‌ ಚೆಕ್ (Ground Reality Check) ಮಾಡಬೇಕೆಂದು ಸೂಚಿಸಿದೆ. ನಾವು ಖರ್ಚು ಮಾಡುವ ಪ್ರತಿಯೊಂದು ಹಣಕ್ಕೆ ಲೆಕ್ಕಾಚಾರ ಇರುತ್ತದೆ ಮತ್ತು ಕೈಗೊಳ್ಳುವ ಕಾಮಗಾರಿಗೆ ನಾವೆಲ್ಲ ಸುಪ್ರೀಂಕೋರ್ಟ್‌ಗೆ ಉತ್ತರಾದಾಯಿಗಳೆಂದು ಕಾಮಗಾರಿ ಕೈಗೊಳ್ಳುವ ಇಲಾಖೆ ಮತ್ತು ಅಧಿಕಾರಿಗಳಿಗೆ ಓವರ್ ಸೈಟ್ ಅಥಾರಿಟಿ(ಓಎ) ಕಟ್ಟುನಿಟ್ಟಿನ‌ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿಗಳ ಆದೇಶ ಮತ್ತು ಸಿಇಸಿ ಗೈಡ್ ಲೈನ್ಸ್ ಪಾಲನೆ ಕಡ್ಡಾಯ

ಗಣಿ ಹಣವನ್ನು ಬಳಸಲು ಡಿಪಿಆರ್ ಸಲ್ಲಿಸುವಾಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ರಂಜನ್‌ ಗೋಗಾಯ್, ಅಲ್ತಾಫ್ ಅಲುಮ್ಸ್ ಮತ್ತು ಎನ್.ವಿ. ರಮಣ ಅವರು ಗಣಿ ಹಣದ ವಿಚಾರವಾಗಿರುವ ಹೊರಡಿಸಿರುವ ಆದೇಶವನ್ನು ಓದಿಕೊಳ್ಳಿ ಮತ್ತು ಸಿಇಸಿ ಅ.22, 2018 ವರದಿಯಲ್ಲಿನ ಮಾರ್ಗಸೂಚಿಗಳನ್ನು ಪಾಲಿಸಿ, ಇವುಗಳನ್ನು ಸುಪ್ರೀಂಕೋರ್ಟ್ ಕೋರ್ಟ್ ಅನುಮೋಧಿಸಿದೆ ಎಂದು ಓಎ ಸೂಚಿಸುವ ಮೂಲಕ ಬಳಕೆಯ ಪ್ರತಿ ಹಣಕ್ಕೂ ಲೆಕ್ಕ ಕೇಳುವ ಸಂದೇಶವನ್ನು ಇಲಾಖೆಗಳಿಗೆ ರವಾನಿಸಿದೆ.

ಇಲಾಖೆಗಳ ಕಾರ್ಯದರ್ಶಿಗಳ ಸಹಿ‌ ಕಡ್ಡಾಯ

ಪ್ರತಿಯೊಂದು ಕಾಮಗಾರಿ ಪ್ರಸ್ತಾವನೆ ಕಾಟಾಚಾರಕ್ಕೆ‌ ಸಲ್ಲಿಸಬಾರದು, ಪ್ರತಿಯೊಂದು ಕಾಮಗಾರಿಯ ಪ್ರಸ್ತಾವನೆ ಮತ್ತು ಡಿಪಿಆರ್ ಗೆ ಆಯಾ ಇಲಾಖೆಯ ಕಾರ್ಯದರ್ಶಿಯ ಸಹಿ ಇರಬೇಕು, ಕೈಗೆತ್ತಿಕೊಳ್ಳುವ ಕಾಮಗಾರಿ ಗಣಿಬಾಧಿತ ಪ್ರದೇಶದ ಪರಿಸರ ಪುನಶ್ಚೇತನ ಮತ್ತು ಗಣಿಬಾಧಿತರ ಬದುಕು ಸುಧಾರಿಸುವಂತಿರಬೇಕು, ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ನಿಗಾವಹಿಸ ಬೇಕೆಂಬ ನಿಯಮವು ಹಣ ಬಳಕೆಯ ವಿಚಾರದಲ್ಲಿ ಪಾರದರ್ಶಕತೆಗೆ ಹಿಡಿದ ಕೈ ಗನ್ನಡಿಯಾಗಿದೆ.

ಹಣದ ಲೆಕ್ಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ

ಕೇವಲ ಕಾಮಗಾರಿಯ ಪ್ರಸ್ತಾವನೆ ಅರ್ಥಪೂರ್ಣ ವಾಗಿದ್ದರೆ ಸಾಲದು ಕಾಮಗಾರಿಯು ಗುಣಾತ್ಮಕತೆಯಿಂದ ಕೂಡಿರಬೇಕು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು, ಕಾಮಗಾರಿಗಳ ಗುಣಾತ್ಮತೆ ಮತ್ತು ಹಣ ಪ್ರತಿಯೊಂದು ದೂರಿಗೆ ಅವಕಾಶ ಕೊಡದಂತೆ ನೋಡಿಕೊಳ್ಳಬೇಕು, ಈ ವಿಚಾರದಲ್ಲಿ ಪ್ರತಿಯೊಂದು ಪೈಸೆಗೂ ಲೆಕ್ಕ ಇರುತ್ತದೆ, ನಾವೆಲ್ಲ ಸುಪ್ರೀಂಕೋರ್ಟ್‌ಗೆ ಉತ್ತರಿಸಬೇಕೆಂಬ ಓಎ ಮಾತು, ಅಧಿಕಾರಿಗಳು ಗಣಿಹಣ ಬಳಕೆಯಲ್ಲಿ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡುವಂತಾಗಿದೆ.

317 ಕಾಮಗಾರಿಗೆ ಓಎ ಅನುಮೋದನೆ

ಗಣಿಬಾಧಿತ ಪ್ರದೇಶ ಮತ್ತು ಜನರ ಅಭಿವೃದ್ಧಿಗೆ ಈವರೆಗೆ ಅಂದಾಜು 25 ಸಾವಿರ ಕೋಟಿ‌ ರೂ.ಗಳ ಹಣವು ಅದಿರು ಮಾರಾಟದಿಂದ ಸಂಗ್ರಹವಾಗಿದೆ. ಈ ಹಣವನ್ನು ಗಣಿ ಬಾಧಿತ ಜಿಲ್ಲೆಗಳಾದ ಬಳ್ಳಾರಿ, ವಿಜಯ ನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಸೀಮಿತವಾಗಿ ಬಳಕೆ ಮಾಡಬೇಕಾಗಿದೆ. ಈ ನಾಲ್ಕು ಜಿಲ್ಲೆಗಳ ಇಲ್ಲಿಯವರೆಗೆ 317 ಕಾಮಗಾರಿಗಳ ಪ್ರಸ್ತಾವನೆಗೆ ಓಎ ಮತ್ತು ಕೆಎಂಇಆರ್ ಸಿ ಅನುಮೋದನೆ ನೀಡಿದೆ. ಕೆಲವೊಂದು ಕಾಮಗಾರಿಗಳಿಗೆ ಅಯಾ ಜಿಲ್ಲೆಯ‌ ಇಲಾಖೆಗಳು ಡಿಪಿಆರ್ ಸಿದ್ಧಪಡಿಸಿ ಓಎ ಮತ್ತು ಕೆಎಂಇಆರ್ ಸಿಗೆ ಸಲ್ಲಿಸಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ.

ಅವಳಿ ಜಿಲ್ಲೆಗೆ 13 ಸಾವಿರ ಕೋಟಿ ಹಂಚಿಕೆ

25 ಸಾವಿರ ಕೋಟಿ ರೂ.ಗಳಲ್ಲಿ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಿಗೆ 13000 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯಿಂದ ಸುಮಾರು 6 ಸಾವಿರ ಕೋಟಿ ರೂ.ಗಳಿಗೆ‌ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ಸಿಕ್ಕಿದೆ. ಬಹುತೇಕ ಕಾಮಗಾರಿಗೆ ಡಿಪಿಆರ್ ಸಲ್ಲಿಸಲಾಗಿದೆ. ಇದಕ್ಕೆ ಓಎ ಮತ್ತು ಕೆಎಂಇಆರ್ ಸಿ ಅಬಿಮೋದನೆ ಸಲ್ಲಿಸಿದರೆ ಕಾಮಗಾರಿಗಳು ಆರಂಭವಾಗಲಿವೆ.

ಈ ಕೆಳಗಿನ ಕಾಮಗಾರಿಗಳಿಗೆ ಗಣಿ ಹಣ ಬಳಕೆಯ ಆದ್ಯತೆ

ಗಣಿ ಹಣದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಆರೋಗ್ಯ, ನೀರು, ಶಿಕ್ಷಣ, ವಸತಿ ಸೇರಿದಂತೆ ಮೂಲಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ. ಮನೆ ರಹಿತರಿಗೆ ವಸತಿ ಸೌಲಭ್ಯ, ಅಂಗನವಾಡಿ ಕೇಂದ್ರಗಳ ನಿರ್ಮಾಣ, ರಸ್ತೆ, ರೈಲ್ವೆ ಸೈಡಿಂಗ್ ನಿರ್ಮಾಣ, ಕೌಶಲ್ಯ ಅಭಿವೃದ್ಧಿಗೆ ಆದ್ಯತೆ, ಆರೋಗ್ಯ ಕೇಂದ್ರಗಳ ವ್ಯವಸ್ಥೆ, ಕುಡಿಯುವ ನೀರಿನ ಕಾಮಗಾರಿಗೆ ಆದ್ಯತೆ ನೀಡಲಾಗಿದೆ‌

ಪ್ರಮುಖ ಮತ್ತು ನೂರು ಕೋಟಿ ಮೇಲ್ಪಟ್ಟ ಕಾಮಗಾರಿಗಳು

  1. ಬಳ್ಳಾರಿಯ ವಿಮ್ಸ್ ನಲ್ಲಿ 121.83 ಕೋಟಿ ರೂ.ವೆಚ್ಚದಲ್ಲಿ 550 ಬೆಡ್ ವ್ಯವಸ್ಥೆಯ ಆಸ್ಪತ್ರೆ
  2. ಬಳ್ಳಾರಿ ನಗರಕ್ಕೆ 270 ಕೋಟಿ ರೂ‌.ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯ(ಈ ಕಾಮಗಾರಿಗೆ ಓಎ ಮುಂದೆ ಕೆಲವರು ತಕರಾರು ಅರ್ಜಿ‌ ಸಲ್ಲಿಸಿದ್ದಾರೆ).
  3. ಸಂಡೂರಿನ ಸುಶೀಲ್ ನಗರ ಸಮೀಪದಲ್ಲಿ 258.72 ಕೋಟಿ ವೆಚ್ಚದಲ್ಲಿ ರೈಲ್ವೆ ಸೈಡಿಂಗ್ ಮತ್ತು ಸಬ್ ಲೈನ್ ವ್ಯವಸ್ಥೆ
  4. ಧರ್ಮಾಪುರದಲ್ಲಿ 276.99 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಸೈಡಿಂಗ್ ಮತ್ತು ಸಬ್ ಲೈನ್ ನಿರ್ಮಾಣ
  5. ಬಳ್ಳಾರಿ ಜಿಲ್ಲೆಯ ಗಣಿಬಾಧಿತ ಹಳ್ಳಿ ಪ್ರದೇಶದಲ್ಲಿ ಚೆಕ್ ಡ್ಯಾಂ ಸೇರಿದಂತೆ ನೀರಿನ ಕಾಮಗಾರಿಗೆ 126.40 ಕೋಟಿ‌ ರೂ.
  6. ಚಿತ್ರದುರ್ಗ ಜಿಲ್ಲೆಯ ಸೇಸಗೋವಾ ಮೈನಿಂಗ್ ಗೇಟ್‌ನಿಂದ ಲಕ್ಷ್ಮಿಸಾಗರದವರೆಗೆ 209 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ
  7. ಬಳ್ಳಾರಿ ಜಿಲ್ಲೆಯಿಂದ ಹೊಸ ದರೋಜಿವರೆಗೆ 145 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ 317 ಕಾಮಗಾರಿಗಳ ಪ್ರಸ್ತಾವನೆಗೆ ಓವರ್ ಸೈಟ್ ಅಥಾರಿಟಿ ಮತ್ತು ಕೆಎಂಇಆರ್ ಸಿ ಅನುಮೋದನೆ ನೀಡಿದೆ‌.‌

ಇದನ್ನೂ ಓದಿ: ಕರ್ನಾಟಕದ ‘ಅಕ್ರಮ’ ಅದಿರು ಗಣಿಗಳಿಗೆ ಹೊಸ ಲೀಸ್! ಒಪ್ಪಿಗೆ ನೀಡಿದ ಕೇಂದ್ರ ಅರಣ್ಯ ಸಲಹಾ ಸಮಿತಿ

ಜಿಲ್ಲಾಧಿಕಾರಿ ಗ್ರೌಂಡ್‌ ರಿಯಾಲಿಟಿ ಚೆಕ್‌ ಮಾಡಬೇಕು

ಪ್ರತಿಯೊಂದು ಕಾಮಗಾರಿಯ ಪ್ರಸ್ತಾವನೆ ಪೂರ್ವದಲ್ಲಿ ಖುದ್ದಾಗಿ‌ ಡಿಸಿಯವರೆ ಭೇಟಿ ನೀಡಿ ಗ್ರೌಂಡ್ ರಿಯಾಲಿಟಿ ತಿಳಿದುಕೊಳ್ಳಬೇಕೆಂದು ಓವರ್ ಸೈಟ್ ಅಥಾರಿಟಿ ತಿಳಿಸಿದೆ, ಈಗಾಗಲೆ ನಮ್ಮ ಜಿಲ್ಲೆಯ ಕಾಮಗಾರಿಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಕೆಲವೊಂದು ಕಾಮಗಾರಿಗಳ ಡಿಪಿಆರ್ ಅನ್ನು ಸಿದ್ದಪಡಿಸಿ ಓಎ, ಕೆಎಂಇಆರ್ ಸಿಗೆ ಸಲ್ಲಿಸಲಾಗಿದೆ ಎಂದು ಬಳ್ಳಾರಿಯ ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

Exit mobile version