ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡುವ ಒಂದು ದಿನ ಮೊದಲೇ, ಅಂದರೆ ಗುರುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ೧೧.೩೦ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ನೆಲಮಂಗಲಕ್ಕೆ ಬರುವ ಅವರು, ಅಲ್ಲಿನ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ & ಯೋಗಿಕ್ ಸೈನ್ಸ್ ಕ್ಯಾಂಪಸ್‌ಗೆ ಭೇಟಿ ನೀಡಲಿದ್ದಾರೆ. ಆದರೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಅವರು ಭಾಗವಹಿಸುವುದಿಲ್ಲ.
ಈಗ ರಾಜ್ಯಸಭೆ ಸದಸ್ಯರಾಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಮನವಿ ಮೇರೆಗೆ ಯೋಗಿ ಆಗಮಿಸುತ್ತಿದ್ದಾರೆ. ಬೆಳಗ್ಗೆ ೧೧.೪೫ಕ್ಕೆ ನೆಲಮಂಗಲಕ್ಕೆ ಬಂದು, ಅಲ್ಲಿಂದ 11.55ಕ್ಕೆ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ & ಯೋಗಿಕ್ ಸೈನ್ಸ್ ಕ್ಯಾಂಪಸ್‌ಅನ್ನು ವೀಕ್ಷಿಸಲಿದ್ದಾರೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜತೆ “ಕ್ಷೇಮವನ”ದ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಜತೆ ನಿರ್ಮಲಾನಂದನಾಥ ಶ್ರೀ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ಕೆ ಸುಧಾಕರ್, ಆನಂದ್ ಸಿಂಗ್, ಸಂಸದ ಬಿ.ಎನ್.ಬಚ್ಚೇಗೌಡ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | ರಕ್ಷಾ ಬಂಧನ ವಿಶೇಷ; ಮಹಿಳೆಯರಿಗೆ ಬಂಪರ್ ಉಡುಗೊರೆ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ್