ಯಲ್ಲಾಪುರ: ತಾಂತ್ರಿಕವಾಗಿ ನಮ್ಮ ಪಕ್ಷದ ಶಾಸಕರಾದ ಶಿವರಾಮ ಹೆಬ್ಬಾರ್, ನಮ್ಮ ಸಂಸದರಾದ ಸಜ್ಜನ ರಾಜಕಾರಣಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿರುವುದನ್ನು ಯಲ್ಲಾಪುರ-ಮುಂಡಗೋಡ ಬಿಜೆಪಿ ಮಂಡಲದಿಂದ ಕಟುವಾಗಿ ಖಂಡಿಸುತ್ತೇವೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ (Uttara Kannada News) ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅದಕ್ಕಾಗಿ ಅನುದಾನ ತರುವಲ್ಲಿ ಜಿಲ್ಲೆಯ ಮಂತ್ರಿ, ಸಂಸದರನ್ನು ಒಟ್ಟಿಗೆ ಸೇರಿಸಿಕೊಂಡು ಜನರಿಗೆ ಸ್ಪಂದಿಸಬೇಕಾಗಿದ್ದ ಮಾಜಿ ಮಂತ್ರಿಗಳು ಹಾಗೂ ಹಾಲಿ ಶಾಸಕರು ತತ್ವನಿಷ್ಠೆಯ ರಾಜಕಾರಣಿಯಾದ ಕಾಗೇರಿ ಅವರ ಮೇಲೆ ಯಾವುದೇ ಕಾರಣವಿಲ್ಲದೆ ವರ್ಚಸ್ಸಿಗೆ ಧಕ್ಕೆ ತರುವ ಹಾಗೆ ಅಹಂಕಾರದ ಪರಕಾಷ್ಠೆಯ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ ಎಂದರು.
ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಕಾಗೇರಿ ಅವರು ಇದೀಗ ಸಂಸದರಾಗಿದ್ದರೂ ಕೂಡ, ರಾಜಕೀಯಕ್ಕೆ ನಿನ್ನೆ ಮೊನ್ನೆ ಬಂದವರಲ್ಲ. 30 ವರ್ಷಗಳಿಂದ ಜನಪ್ರಿಯ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂತಹವರ ಮೇಲೆ ಶಾಸಕರು ಹೀಗೆ ಇಲ್ಲಸಲ್ಲದ ಮಾತುಗಳನ್ನಾಡುವುದನ್ನು ಮುಂದುವರಿಸಿದರೆ ನಾವು ಜನರ ಮುಂದೆ ಸತ್ಯಾಸತ್ಯತೆ ಬಿಚ್ಚಿಡುತ್ತೇವೆ. ಹೆಬ್ಬಾರರನ್ನು ನಮ್ಮ ಪಕ್ಷದ ಶಾಸಕರೆಂದೇ ಭಾವಿಸಿದ್ದೇವೆ. ಆದರೆ ಅವರು ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಅವರೇ ತಿಳಿಸಲಿ. ಚುನಾವಣೆ ಎದುರಿಸಿ ಯಾವ ಪಕ್ಷ ಅಥವಾ ತಮ್ಮ ವೈಯಕ್ತಿಕ ಸಾಮರ್ಥ್ಯ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷಕ್ಕೆ ನಾವೇನು ಕರೆದಿರಲಿಲ್ಲ. ಅವರಿಗೆ ಮಂತ್ರಿಯಾಗುವ ಹಂಬಲದಿಂದ, ವೈಯಕ್ತಿಕ ಹಿತಾಸಕ್ತಿಗಾಗಿ ಬಂದಿದ್ದರೇ ಹೊರತು ಬೇರೆ ಉದ್ದೇಶದಿಂದಲ್ಲ. ಒಳ್ಳೆಯ ಉದ್ದೇಶವಿದ್ದರೆ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಅವರು, ಮೋದಿಯವರ ಹಾಗೂ ಪಕ್ಷದ ಮೇಲಿದ್ದ ಗೌರವವನ್ನು ಉಳಿಸಬೇಕಾಗಿತ್ತು. ಹಾಗೆ ಮಾಡದೇ ಸೋಗಲಾಡಿತನದಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಹೆಬ್ಬಾರ್ ಅವರು ರಾಜೀನಾಮೆ ಕೊಟ್ಟು ಪುನಃ ಚುನಾವಣೆ ಎದುರಿಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: Raghu Dixit : ಪ್ಯಾರಿಸ್ ಒಲಿಂಪಿಕ್ಸ್ಗೆ ಕನ್ನಡ ಹಾಡುಗಳ ಮೆರುಗು ; ರಘು ದೀಕ್ಷಿತ್ ತಂಡದಿಂದ ವಿಶೇಷ ಕಾರ್ಯಕ್ರಮ
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮೇಶ ಭಾಗ್ವತ್, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಮುಂಡಗೋಡ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ, ತಾಪಂ ಮಾಜಿ ಸದಸ್ಯ ಸುಬ್ಬಣ್ಣ ಬೋಳ್ಮನೆ, ಪ್ರಮುಖರಾದ ಗಣಪತಿ ಬೋಳುಗುಡ್ಡೆ ಇದ್ದರು.