-ಎಸ್.ಎಸ್.ಸಂದೀಪ ಸಾಗರ, ವಿಸ್ತಾರ ನ್ಯೂಸ್
ಕಾರವಾರ: ಕಾರವಾರ ಎಂದಾಕ್ಷಣ ಮೊದಲು ನೆನಪಾಗುವುದೇ ಇಲ್ಲಿನ ವಿಶಾಲವಾದ ರವೀಂದ್ರನಾಥ ಟ್ಯಾಗೋರ್ ಕಡಲತೀರ (Rabindranath Tagore Beach). ಪ್ರತಿನಿತ್ಯ ನೂರಾರು ಪ್ರವಾಸಿಗರು (Tourists) ಇಲ್ಲಿನ ಕಡಲತೀರ ವೀಕ್ಷಣೆಗೆ ಎಂದೇ ಕಡಲನಗರಿಗೆ ಆಗಮಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಡಲತೀರದಲ್ಲಿ ಬಿದ್ದಿರುವ ಕಸವು (Garbage) ಬರುವಂತಹ ಪ್ರವಾಸಿಗರಿಗೆ ಬೇಸರ ಮೂಡಿಸುತ್ತಿದ್ದು, ಬೀಚ್ ಸೌಂದರ್ಯಕ್ಕೆ ಮಾರಕ ಎನ್ನುವಂತೆ ಅಲ್ಲಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತಿದೆ.
ಕಾರವಾರದ ಹೆದ್ದಾರಿಗೆ ಹೊಂದಿಕೊಂಡೇ ವಿಶಾಲವಾದ ಸಮುದ್ರ ತೀರದೊಂದಿಗೆ ಸುಂದರ ಪರಿಸರ ಹೊಂದಿರುವ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಹೀಗಾಗಿಯೇ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗೋವಾ, ಮಂಗಳೂರು ಭಾಗಗಳಿಗೆ ತೆರಳುವ ಪ್ರವಾಸಿಗರು ಕಾರವಾರ ಕಡಲತೀರಕ್ಕೊಮ್ಮೆ ಭೇಟಿ ನೀಡಿಯೇ ತೆರಳುತ್ತಾರೆ. ಇಲ್ಲಿನ ವಿಶಾಲವಾದ ಕಡಲತೀರದಲ್ಲಿ ಓಡಾಡುವ ಜತೆಗೆ ಸಮುದ್ರದ ನೀರಿನಲ್ಲಿ ಈಜಾಡಿ ಆನಂದಿಸುತ್ತಾರೆ. ಜತೆಗೆ ಕಡಲತೀರದಲ್ಲಿನ ಜಲಸಾಹಸ ಕ್ರೀಡೆಗಳೂ ಸಹ ಪ್ರವಾಸಿರನ್ನು ಮನರಂಜಿಸುತ್ತವೆ.
ಇದನ್ನೂ ಓದಿ: Job Alert: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ
ಕಡಲತೀರದಲ್ಲಿ ಎದ್ದು ಕಾಣುತ್ತಿದೆ ಕಸದರಾಶಿ
ಇತ್ತೀಚಿನ ದಿನಗಳಲ್ಲಿ ಇಲ್ಲಿನ ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ, ಕಸದ ರಾಶಿಯೇ ಎದ್ದು ಕಾಣುವಂತಿದೆ. ಕಡಲತೀರದಲ್ಲಿ, ಪ್ರವಾಸಿಗರು ಕೂರುವ ವಿಶ್ರಾಂತಿ ಬೆಂಚ್‌ಗಳಲ್ಲಿ ತಿಂಡಿ ತಿನಿಸುಗಳ ಪೊಟ್ಟಣಗಳು, ನೀರಿನ ಬಾಟಲ್‌ಗಳೇ ಬಿದ್ದಿವೆ. ಅಷ್ಟೇ ಅಲ್ಲದೇ ಮದ್ಯದ ಬಾಟಲ್‌ಗಳೂ ಸಹ ಕಡಲತೀರದಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದು ಬಂದಂತಹ ಪ್ರವಾಸಿಗರಿಗೆ ಅಸಹ್ಯ ಹುಟ್ಟಿಸುವಂತಿದೆ.
ಕಡಲತೀರದಲ್ಲಿ ಮಳೆಗಾಲದ ಬಳಿಕ ಸ್ವಚ್ಛತಾ ಕಾರ್ಯವೇ ಸ್ಥಗಿತಗೊಂಡಂತಾಗಿದ್ದು, ಕಳೆದೊಂದು ವರ್ಷದಿಂದ ಕಡಲತೀರದ ಸ್ವಚ್ಛತೆಗಿದ್ದ ಬೀಚ್ ಕ್ಲೀನಿಂಗ್ ಯಂತ್ರ ಸಹ ಹಾಳಾಗಿ ಮೂಲೆ ಸೇರಿದೆ. ಹೀಗಾಗಿ ಕಡಲತೀರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಿದ್ದು ಬೀಚ್ ವೀಕ್ಷಣೆಗೆ ಬರುವಂತಹ ಪ್ರವಾಸಿಗರಿಗೆ, ವಾಯುವಿಹಾರಕ್ಕೆಂದು ಬರುವ ಸ್ಥಳೀಯರಿಗೂ ಬೇಸರ ಮೂಡಿಸುವಂತಾಗಿದೆ.
ಸದ್ಯ ಇನ್ನೇನು ಕೆಲ ದಿನಗಳಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಆಗಮಿಸುತ್ತಿದ್ದು, ವಿವಿಧೆಡೆಗಳ ಪ್ರವಾಸಿಗರು ಗೋವಾ, ಗೋಕರ್ಣ, ಮುರ್ಡೇಶ್ವರ ಸೇರಿದಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ತೆರಳುವ ವೇಳೆ ಕಾರವಾರದ ಟ್ಯಾಗೋರ್ ಕಡಲತೀರಕ್ಕೂ ಆಗಮಿಸುತ್ತಾರೆ. ಆದರೆ ಕಡಲತೀರದಲ್ಲಿ ಸ್ವಚ್ಛತೆಯ ಕೊರತೆ ಎದ್ದುಕಾಣುತ್ತಿದ್ದು, ವರ್ಷಾಂತ್ಯಕ್ಕೆ ಮತ್ತಷ್ಟು ಪ್ರವಾಸಿಗರು ಜಿಲ್ಲೆಯತ್ತ ಆಗಮಿಸುವುದರಿಂದ ಕಡಲತೀರದ ಸ್ವಚ್ಛತೆ ಕೈಗೊಳ್ಳುವಂತೆ ಸ್ಥಳೀಯರಾದ ಪ್ರವೀಣ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಶೆಡ್ ಸೇರಿದ ಬೀಚ್ ಕ್ಲೀನಿಂಗ್ ಯಂತ್ರ
ಈ ಹಿಂದೆ 2017ರಲ್ಲಿ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸ್ವಚ್ಛತೆಗಾಗಿಯೇ ಸುಮಾರು 65 ಲಕ್ಷ ವೆಚ್ಚದಲ್ಲಿ ಬೀಚ್ ಕ್ಲೀನಿಂಗ್ ಯಂತ್ರವನ್ನು ತರಲಾಗಿತ್ತು. ಪ್ರತಿನಿತ್ಯ ಕಡಲತೀರದಲ್ಲಿ ಸಂಚರಿಸಿ ಮರಳಿನಲ್ಲಿ ಸೇರಿಕೊಂಡ ಕಸ, ಪ್ಲಾಸ್ಟಿಕ್ ಸೇರಿದಂತೆ ಸಮುದ್ರದ ತ್ಯಾಜ್ಯವನ್ನೂ ಒಂದೇ ಯಂತ್ರದ ಸಹಾಯದಿಂದಲೇ ಸಂಗ್ರಹಿಸಲಾಗುತ್ತಿತ್ತು. ಆದರೆ ಈ ಯಂತ್ರ ಸುಮಾರು ಕಳೆದೊಂದು ವರ್ಷದಿಂದ ಹಾಳಾಗಿ ಶೆಡ್ ಸೇರಿದ್ದು, ಕೆಲ ಸಂಘ, ಸಂಸ್ಥೆಗಳು ಕಡಲತೀರದಲ್ಲಿ ಕಸ ಸಂಗ್ರಹಿಸಿ ಸ್ವಚ್ಛಗೊಳಿಸಿದ್ದನ್ನು ಹೊರತುಪಡಿಸಿ ಯಾವುದೇ ಸ್ವಚ್ಛತೆ ನಡೆದಿಲ್ಲ.
ಕಡಲತೀರದಲ್ಲಿ ನಗರಸಭೆಯಿಂದ ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಇರಿಸಲಾಗಿದೆಯಾದರೂ ಬೀಚ್‌ಗೆ ಬಂದವರು ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದು, ಇದರಿಂದ ಕಡಲತೀರದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಹೀಗಾಗಿ ಕಡಲತೀರಕ್ಕೆ ಬರುವವರೂ ಸಹ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Walmart: ವಾಲ್‌ಮಾರ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ ಸೈಕಲ್ ಲಾಂಚ್!
ಇನ್ನು ಕಡಲತೀರದ ಸ್ವಚ್ಛತೆ ಕುರಿತು ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಬೀಚ್‌ನಲ್ಲಿ ಸ್ವಚ್ಚತೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬೀಚ್ ಕ್ಲೀನಿಂಗ್ ಯಂತ್ರದ ರಿಪೇರಿಗಾಗಿ ಈಗಾಗಲೇ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಪುಣೆಯಿಂದ ಎಂಜಿನಿಯರ್ ಆಗಮಿಸಿ ಸರಿಪಡಿಸಿದ ಬಳಿಕ ಮೊದಲಿನಂತೆ ಸ್ವಚ್ಛತಾ ಕಾರ್ಯ ನಿರ್ವಹಿಸಲಿದೆ. ಇದಲ್ಲದೇ ಸ್ಥಳೀಯರೊಂದಿಗೆ ಸೇರಿ ಜಿಲ್ಲಾಡಳಿತದಿಂದಲೂ ಸಹ ಕಡಲತೀರದ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದ್ದಾರೆ.