ಶಿರಸಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಳ್ಳತನದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಕಳ್ಳತನವಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅರೋಪಿತರ ಪೈಕಿ ಇಬ್ಬರು ಅದೇ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ವಿನಯ್ ಗೌಳಿ, ಪವನ್ ಕುಮಾರ್ ಹಾಗೂ ಒಬ್ಬ ಬಾಲಕ ಸೇರಿ ಮೂವರು ಆರೋಪಿಗಳಾಗಿದ್ದಾರೆ. ಪಿಎಸ್ಐ ದಯಾನಂದ ಜೋಗಳೆಕರ್ ಹಾಗೂ ಸಿಬ್ಬಂದಿ ಗಣಪತಿ ನಾಯಕ್, ಮಹಾದೇವ ನಾಯಕ್, ಅರುಣ್ ಕುಮಾರ್, ಜಾವೇದ್ ಶೇಕ್, ಶ್ರೀಧರ್ ನಾಯಕ್, ರಾವ್ ಸಾಹೇಬ್ ಹಾಗೂ ಮನೋಜ್ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ | Gadag News: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಯತ್ನ; 3 ಮಹಿಳೆಯರು ಸೇರಿ ಹಲವರು ವಶಕ್ಕೆ
ಶಿರಸಿ-ಬನವಾಸಿ ಮಾರ್ಗದ ಟಿಪ್ಪು ನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 38-39 ನೇ ಕೊಠಡಿಯಲ್ಲಿ ಅಳವಡಿಸಿದ್ದ ಪ್ರೊಜೆಕ್ಟರ್, ಎರಡು ಆ್ಯಂಡ್ರಾಯ್ಡ್ ಬೊಕ್ ಮತ್ತು ನಾಲ್ಕು ಸ್ಪೀಕರ್‌ಗಳನ್ನು ಕಳ್ಳತನ ಮಾಡಲಾಗಿತ್ತು. ಸಿ.ಸಿ ಕ್ಯಾಮರಾಕ್ಕೆ ಚ್ಯೂಯಿಂಗ್ ಗಮ್ ಹಚ್ಚಿ ಕ್ಯಾಮೆರಾ ಮರೆ ಮಾಚಿ ಕಳ್ಳರು ಕೈಚಳಕ ತೋರಿದ್ದರು. ಈ ಕುರಿತು ಕಾಲೇಜಿನ ಪ್ರಾಂಶುಪಾಲ ಡಾ. ದಾಕ್ಷಾಯಿಣಿ ಹೆಗಡೆ, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.