ಬೆಂಗಳೂರು: ಜೂನ್ ತಿಂಗಳು ಕಳೆದರೂ ಮಳೆ ಇಲ್ಲ, ಮಳೆ ಇಲ್ಲ ಎಂದು ಹೇಳಲಾಗುತ್ತಿತ್ತು. ಈಗ ಎಲ್ಲವೂ ಒಟ್ಟಿಗೆ ಸೇರಿ ಬರುತ್ತಿರುವಂತೆ ಭಾಸವಾಗುತ್ತಿದೆ. ರಾಜ್ಯದಲ್ಲೀಗ ನೈರುತ್ಯ ಮುಂಗಾರು (Rain News) ಚುರುಕುಗೊಂಡಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದೆ. ಇನ್ನು ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಧಾರಾಕಾರ ಮಳೆಯಾಗಿದ್ದು, ದಾಖಲೆ ಪ್ರಮಾಣದಲ್ಲಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಮೂರು ಕಡೆ 18 ಸೆಂ.ಮೀ. ನಷ್ಟು ಮಳೆಯಾಗಿದ್ದರೆ, ದಕ್ಷಿಣದ ಮೂಲ್ಕಿಯಲ್ಲಿ 17 ಸೆಂ.ಮೀ. ಮಳೆ ಸುರಿದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಶಿರಾಲಿಯಲ್ಲಿ ತಲಾ 18 ಸೆಂ.ಮೀ ಮಳೆಯಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 17 ಸೆಂ.ಮೀ, ಬೆಳ್ತಂಗಡಿಯಲ್ಲಿ 16 ಸೆಂ.ಮೀ, ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳದಲ್ಲಿ ತಲಾ 15 ಸೆಂ.ಮೀ, ಕೊಲ್ಲೂರಿನಲ್ಲಿ 13 ಸೆಂ.ಮೀ ಮಳೆಯಾಗಿದೆ.
ಗೇರುಸೊಪ್ಪ, ಕುಮ್ಟಾ (ಉತ್ತರ ಕನ್ನಡ ಜಿಲ್ಲೆ), ಮಂಗಳೂರು, ಮಾಣಿ, ಮಂಗಳೂರು ವಿಮಾನ ನಿಲ್ದಾಣ (ದಕ್ಷಿಣ ಕನ್ನಡ ಜಿಲ್ಲೆ) ತಲಾ 12 ಸೆಂ.ಮೀ, ಪಣಂಬೂರು, ಪುತ್ತೂರು, ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ಸಿದ್ದಾಪುರ, ಕೋಟಾ (ಉಡುಪಿ ಜಿಲ್ಲೆ), ಮುಧೋಳ (ಕಲಬುರಗಿ ಜಿಲ್ಲೆ) ತಲಾ 11 ಸೆಂ.ಮೀ, ಮಂಕಿ, ಗೋಕರ್ಣ (ಉತ್ತರ ಕನ್ನಡ ಜಿಲ್ಲೆ), ನಿರ್ನಾ (ಬೀದರ್ ಜಿಲ್ಲೆ) 10; ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಕುಂದಾಪುರ (ಉಡುಪಿ ಜಿಲ್ಲೆ), ಬೇಲಿಕೇರಿ, ಕದ್ರಾ (ಉತ್ತರ ಕನ್ನಡ ಜಿಲ್ಲೆ), ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ) ತಲಾ 9 ಸೆಂ.ಮೀ, ಅಡಕಿ (ಕಲಬರಗಿ ಜಿಲ್ಲೆ), ಭಾಗಮಂಡಲ (ಕೊಡಗು ಜಿಲ್ಲೆ) 8 ಸೆಂ.ಮೀ, ಅಂಕೋಲಾ, ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ), ಕಮ್ಮರಡಿಯಲ್ಲಿ (ಚಿಕ್ಕಮಗಳೂರು ಜಿಲ್ಲೆ) ತಲಾ 7 ಸೆಂ.ಮೀ ಮಳೆಯಾದ ವರದಿಯಾಗಿದೆ.
ಸಮುದ್ರ ತೀರದಲ್ಲಿ 80 ಕಿ.ಮೀ. ಗಾಳಿ ವೇಗ
ಬುಧವಾರ ಒಂದೇ ದಿನ ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲ, ಬಟ್ಟಂಪಾಡಿ ಸಮುದ್ರ ತೀರದಲ್ಲಿ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ. ಸಮುದ್ರ ತೀರದಲ್ಲಿ ನಿಲ್ಲಲೂ ಕಷ್ಟಪಡಬೇಕಿದೆ. ಭಾರಿ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ದೊಡ್ಡ ದೊಡ್ಡ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.
ಇದನ್ನೂ ಓದಿ: Rain News : ಮಳೆಯಬ್ಬರಕ್ಕೆ ಹಲವೆಡೆ ಗುಡ್ಡ, ಮನೆ ಕುಸಿತ; ಅವಘಡಕ್ಕೆ ಮೂವರ ಸಾವು
ಸಮುದ್ರಮಟ್ಟದಲ್ಲಿ ಟ್ರಫ್
ಗುಜರಾತಿನಿಂದ ಕೇರಳ ಕರಾವಳಿಗೆ ಸೇರುವ ಭಾಗದ ಸಮುದ್ರ ಮಟ್ಟದಲ್ಲಿ ಟ್ರಫ್ ಗೋಚರವಾಗಿದೆ. ಈ ಎರಡೂ ಕಾರಣಗಳಿಂದ ಮುಂದಿನ ಐದು ದಿನಗಳವರೆಗೆ ಕರ್ನಾಟಕದಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.