ಬೆಂಗಳೂರು: ರಾಜಧಾನಿಯ ಯಲಹಂಕ ಬಳಿ ಲಾರಿಯ ಬ್ರೇಕ್ ಫೈಲ್ಯೂರ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಮರದ ದಿಮ್ಮಿಗಳ ಸಾಗಾಟ ಮಾಡುತ್ತಿದ್ದ ಲಾರಿಯ ಬ್ರೇಕ್ ಫೈಲ್ಯೂರ್ ಆದ ಕಾರಣ ಚಾಲಕನ ನಿಯಂತ್ರಣ ಕಳೆದುಕೊಂಡು ಐದಾರು ಕಾರು ಹಾಗೂ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸಲು ಚಾಲಕ ಸಫಲನಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ಮರ ಧರೆಗುರುಳಿದೆ.
ಯಲಹಂಕದ ಗ್ಯಾಲರಿಯ ಮಾಲ್ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆಯುವ ಮುನ್ನ ಲಾರಿ ಸುಮಾರು ಐದು ಕಾರುಗಳನ್ನು ಜಖಂಗೊಳಿಸಿದೆ. ಬೆಂಗಳೂರು ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೆಲವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಟಿಪ್ಪರ್‌ಗೆ ಕಾರು ಡಿಕ್ಕಿ, ಮೂವರು ಗಂಭೀರ
ಶಿರಸಿ: ಶಿರಸಿಯ ಸಿರ್ಸಿಮಕ್ಕಿ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬಳಿಯ ಶಿರಸಿಮಕ್ಕಿಯಲ್ಲಿ, ನಿಂತಿದ್ದ ಟಿಪ್ಪರಿಗೆ ಇಕೊ ಕಾರು ಬಂದು ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಒಬ್ಬರ ಕೈ ತುಂಡಾಗಿ ಕೆಳಗೆ ಬಿದ್ದಿದೆ. ಗಾಯಗೊಂಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರೆಲ್ಲರೂ ರೇವಣಕಟ್ಟದವರೆಂದು ತಿಳಿದುಬಂದಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಬಸ್ ನಜ್ಜುಗುಜ್ಜು, ನಾಲ್ವರ ದುರ್ಮರಣ