ಕಾರವಾರ: ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಅಂಕೋಲಾ- ಶಿರೂರು ಗುಡ್ಡ ಕುಸಿತದ (Ankola landslide) ಮಣ್ಣು ತೆರವು ಕಾರ್ಯಾಚರಣೆಯು ಶುಕ್ರವಾರ ಹನ್ನೊಂದನೆಯ ದಿನಕ್ಕೆ ಕಾಲಿಟ್ಟಿದೆ. ಈ ದುರಂತದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 7 ಮಂದಿಯ ಶವ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ.
ಅಂಕೋಲಾ- ಶಿರೂರು ಗುಡ್ಡಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಮಾಹಿತಿ ನೀಡಿದರು. ಗುಡ್ಡ ಕುಸಿದ ಸ್ಥಳದಲ್ಲಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧ್ಯಯನ ನಡೆಸಿತ್ತು. ಗುಡ್ಡಕುಸಿದ ಪ್ರದೇಶದಲ್ಲಿ ಕೆಲವೊಂದು ಅಗತ್ಯಕ್ರಮ ಕೈಗೊಳ್ಳಲು ವರದಿಯಲ್ಲಿ ಸೂಚಿಸಿತ್ತು. ಅದರಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಕ್ರಮಕ್ಕೆ ಸೂಚನೆ ನೀಡಲಾಗಿತ್ತು.
ಮತ್ತೆ ಅವಘಡಗಳಾಗದಂತೆ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳ ಪಾಲನೆಗೆ ಸೂಚಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಳಿಕ ಹಾಗೂ ಹೆದ್ದಾರಿ ಪ್ರಾಧಿಕಾರದಿಂದ ವಾಹನಗಳ ಸಂಚಾರಕ್ಕೆ ಸುರಕ್ಷಿತವಾಗಿದೆ ಎಂದು ವರದಿ ಬಂದ ಮೇಲೆ ಸಂಚಾರಕ್ಕೆ ಅವಕಾಶ ನೀಡುತ್ತೇವೆ ಎಂದರು.
ಡ್ರೋನ್ ಸ್ಕ್ಯಾನಿಂಗ್ ಮುಕ್ತಾಯ
ನದಿಯಲ್ಲಿ ಅತ್ಯಾಧುನಿಕ ಡ್ರೋನ್ ಸ್ಕ್ಯಾನಿಂಗ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ನಿನ್ನೆ ಗುರುವಾರ ರಾತ್ರಿ ಮಳೆಯಿಂದಾಗಿ ಸ್ಕ್ಯಾನಿಂಗ್ ಕಾರ್ಯಕ್ಕೆ ಅಡ್ಡಿಯಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದ್ದು, ನದಿಯಲ್ಲಿ ಹುಡುಕಬೇಕಾದ ಜಾಗಗಳನ್ನು ಡೈವಿಂಗ್ ಮಾಡಿಯೇ ಗುರುತಿಸುವ ಕೆಲಸವಾಗಿದೆ.
ನೌಕಾನೆಲೆಯ ತಂಡ 2-3 ಗಂಟೆಗೊಮ್ಮೆ ನದಿಯ ಹರಿವಿನ ವೇಗವನ್ನು ಪರಿಶೀಲಿಸುತ್ತಿದ್ದಾರೆ. ಮಧ್ಯಾಹ್ನದವರೆಗೂ 6 ನಾಟ್ಸ್‌ಗಿಂತ ಅಧಿಕ ವೇಗದಲ್ಲಿ ನದಿ ಹರಿಯುತ್ತಿದೆ. ಹೀಗಾಗಿ ಶಾಸಕರು ಸೂಚಿಸಿದಂತೆ ಪ್ಲೋಟಿಂಗ್ ಪ್ಲಾಟ್‌ಫಾರಂ ತಂದು ಪ್ರಯತ್ನಿಸಲಾಗುವುದು. ಶನಿವಾರ ಪ್ಲೋಟಿಂಗ್ ಪ್ಲಾಟ್‌ಫಾರಂ ಬರುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ತಿಳಿಸಿದರು.
ಇದನ್ನೂ ಓದಿ: Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು
ಅರ್ಜುನಗಾಗಿ ಇಡೀ ಕೇರಳ ಪ್ರಾರ್ಥತಿಸುತ್ತಿದೆ- ಶಾಸಕ ಕೆ.ಎಂ.ಆಶ್ರಫ್
ಒಂದು ವಾರ ಕಳೆದರು ಅಲ್ಲಿದ್ದ ಹೋಟೆಲ್ ಆಗಲಿ ಅಥವಾ ಲಾರಿ ಡ್ರೈವರ್ ಅರ್ಜುನ್‌ನ ಸುಳಿವು ಸಿಕ್ಕಿರಲಿಲ್ಲ, ನಿನ್ನೆ (ಗುರುವಾರ) ದೆಹಲಿ ತಂಡ ನಡೆಸಿದ ಡ್ರೋನ್ ಕಾರ್ಯಚರಣೆಯಲ್ಲಿ ನದಿಯಲ್ಲಿ ಲಾರಿ ಹಾಗೂ ಕ್ಯಾಬಿನ್ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ ನದಿಯ ಹರಿವು ಹೆಚ್ಚಾಗಿದ್ದ ಕಾರಣ ಶೋಧ ಕಾರ್ಯವನ್ನು ಮುಂದುವರೆಸಲು ಆಗಲಿಲ್ಲ. ಹೀಗಾಗಿ ಶುಕ್ರವಾರ ಎರಡು ಬೃಹತ್ ಹಿಟಾಚಿಗಳ ಮೂಲಕ ದಡದಲ್ಲಿನ ಮಣ್ಣು ತೆರವು ಕೆಲಸ ಮುಂದುವರಿಸಲಾಯಿತು. ಜತೆಗೆ ಇನ್ನುಳಿದ ಮೂವರಿಗಾಗಿ ಹೋಟೆಲ್ ಇದ್ದ ಜಾಗದಲ್ಲೇ ಪುನಃ ಹುಡುಕಾಟ ನಡೆದಿದೆ. ಸ್ಥಳೀಯ ಶಾಸಕ ಸತೀಶ್ ಸೈಲ್ ತಡರಾತ್ರಿಯವರೆಗೂ ಸ್ಥಳದಲ್ಲೇ ಹಾಜರಿದ್ದರು.
ಇನ್ನು ಮಂಜೇಶ್ವರದ ಶಾಸಕ ಕೆ.ಎಂ. ಆಶ್ರಫ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮದೊಂದಿಗೆ ಮಾತಾನಾಡಿದ ಅವರು, ಚಾಲಕ ಅರ್ಜುನಗಾಗಿ ಇಡೀ ಕೇರಳ ಜನತೆ ಪ್ರಾರ್ಥನೆ ಮಾಡುತ್ತಿದೆ. ಪ್ರತಿಕ್ಷಣವೂ ಅರ್ಜುನ ಜೀವಂತವಾಗಿ ಸಿಕ್ಕೇ ಸಿಗುತ್ತಾನೆ ಎನ್ನುವ ಭರವಸೆಯಲ್ಲಿದ್ದಾರೆ. ದೇಶವು ಇದಕ್ಕೂ ದೊಡ್ಡ ಸಮಸ್ಯೆಗಳನ್ನು ಎದುರಿಸಿದೆ, ನಾವು ಹಿಂಜರಿಯದೆ ಆದಷ್ಟು ಬೇಗ ಅರ್ಜುನ ಬಳಿಗೆ ತಲುಪಿ ಅವನನ್ನು ಮೇಲೇತ್ತುವ ಕೆಲಸ ಆಗಬೇಕು. ಇವತ್ತಿನ ಕಾರ್ಯಾಚರಣೆಯಲ್ಲಿ ಲಾರಿ ಸಿಗುವ ಭರವಸೆ ಇದೆ, ಇಲ್ಲವಾದರೆ ನಮ್ಮ ಹನ್ನೊಂದು ದಿನದ ಶ್ರಮ ವ್ಯರ್ಥವಾಗುತ್ತದೆ. ಹಾಗಾಗಿ ಶುಕ್ರವಾರ ಫಲಿತಾಂಶ ಬಂದೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.
ಇದರ ಮಧ್ಯೆ ಕೇರಳ ಲೋಕಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವ ರಿಯಾಜ್ ಅಹ್ಮದ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ದೆಹಲಿ ತಜ್ಞರ ತಂಡದಿಂದ ಲಾರಿ ಇರುಬಹುದಾಗಿದೆ ಎನ್ನುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾಡಳಿತ ಜತೆಗೆ ಸಭೆ ನಡೆಸಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಸಚಿವರ ಜತೆಗೆ ಕೇರಳದ ಶಾಸಕರಾದ ಸಚ್ಚಿನ್ ದೇವ್, ಅಶ್ರಫ್ ಉಪಸ್ಥಿತರಿದ್ದು, ಶಾಸಕ ಸತೀಶ್ ಸೈಲ್ ಸಮ್ಮುಖದಲ್ಲೆ ಸಭೆ ನಡೆಯಿತು. ಇದೇ ವೇಳೆ ಜಿಲ್ಲಾಡಳಿತ ಮೃತ ಗ್ಯಾಸ್ ಟ್ಯಾಂಕರ್ ಚಾಲಕ ಶರವಣ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಕೇರಳ ಸಚಿವರ ಕೈಯಲ್ಲೇ ವಿತ್ತರಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ