ಬನವಾಸಿ: ಉತ್ತರ ಕನ್ನಡ ಜಿಲ್ಲೆ ಬನವಾಸಿಯ ನಿವೃತ್ತ ಶಿಕ್ಷಕ ದ.ರಾ.ಭಟ್ಟ (94) ಅವರು ಶುಕ್ರವಾರ (ಮಾರ್ಚ್ 14) ರಾತ್ರಿ 9 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಬನವಾಸಿಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಶನಿವಾರ (ಮಾರ್ಚ್ 15) ಬೆಳಗ್ಗೆ 9 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಶಾಂತಿ, ಸಂಯಮದಿಂದ ಪಾಠ ಹೇಳಿಕೊಡುತ್ತಿದ್ದ ಅವರು, ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ. ಮೌಲ್ಯಯುತ ಶಿಕ್ಷಣದಲ್ಲಿ ಅಪಾರ ನಂಬಿಕೆ ಇರಿಸಿದ್ದ ಅವರು, ವಿದ್ಯಾರ್ಥಿಗಳಿಗೆ ಅಂತ ಮೌಲ್ಯಯುತ ಶಿಕ್ಷಣವನ್ನು ಧಾರೆಯೆರೆದಿದ್ದರು. ಇದಕ್ಕಾಗಿಯೇ ಅವರು ಅಪಾರ ಶಿಷ್ಯವೃಂದವನ್ನು ಸಂಪಾದಿಸಿದ್ದರು. ಗುರುವಿನ ಅಗಲಿಕೆಗೆ ಅಸಂಖ್ಯ ಶಿಷ್ಯವೃಂದವು ಕಂಬನಿ ಮಿಡಿದಿದೆ. ಭಟ್ಟರು ತಮ್ಮ ಪಿಂಚಣಿ ಹಣವನ್ನು ದಾನ ಮಾಡುತ್ತಾ ಬಂದಿದ್ದರು. ಮಾಸಿಕ 30 ಸಾವಿರ ಬರುತ್ತಿದ್ದ ಆ ಹಣದಲ್ಲಿ ನನ್ನ ಶ್ರಮವಿಲ್ಲ , ಹೀಗಾಗಿ ನನಗೆ ಬೇಡ ಎಂದು ಅವರು ದಾನದಲ್ಲಿ ತೊಡಗಿಸಿದ್ದರು.
“ದ. ರಾ. ಭಟ್ ಗುರುಗಳ ನಿಧನದ ಸುದ್ದಿ ಕೇಳಿ ಒಂದು ಕ್ಷಣ ದಿಗ್ಬ್ರಾಂತನಾದೆ. ಸದಾಕಾಲ ಬಿಳಿಯ ವಸ್ತ್ರದಲ್ಲೇ ಶಾಲೆಗೆ ಬರುತ್ತಿದ್ದ ಗುರುಗಳು ಶಿಸ್ತಿಗೆ ಇನ್ನೊಂದು ಹೆಸರಾಗಿದ್ದರು. ದ.ರಾ. ಭಟ್ ಗುರುಗಳೆಂದರೆ ಮಕ್ಕಳ ಪಾಲಿನ ಪ್ರೀತಿಯ ಬುಗ್ಗೆ. ಅವರೊಂದು ತಾಳ್ಮೆಯ ಗಣಿ. ನಮ್ಮ ವಿದ್ಯಾರ್ಜನೆಯ ಆರಂಭದ ದಿನಗಳಲ್ಲಿ ಭದ್ರಬುನಾದಿಯನ್ನ ಹಾಕಿದಂತಹ ವ್ಯಕ್ತಿಗಳಲ್ಲಿ ಶ್ರೀ ದ.ರಾ.ಭಟ್ ಗುರುಗಳು ಅಗ್ರಗಣ್ಯರು. ಇಂತಹ ಒಬ್ಬ ಒಳ್ಳೆಯ ಶಿಕ್ಷಕ, ಮೇರು ವ್ಯಕ್ತಿತ್ವವನ್ನು ಕಳೆದುಕೊಂಡ ಬನವಾಸಿಗೆ ಇದೊಂದು ತುಂಬಲಾರದ ನಷ್ಟ. ಭಗವಂತನು ಗುರುಗಳ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬಕ್ಕೆ ಹಾಗೂ ಸಾವಿರಾರು ಶಿಷ್ಯ ವೃಂದಕ್ಕೆ ದುಃಖವನ್ನು ಸಹಿಸುವಂತಹ ಶಕ್ತಿಯನ್ನು ದಯಪಾಲಿಸಲಿ” ಎಂದು ಶಿಷ್ಯರೊಬ್ಬರು ಕಂಬನಿ ಮಿಡಿದಿದ್ದಾರೆ.
ಕಂಬನಿ ಮಿಡಿದ ಬಿ. ಶಿವಾಜಿ
ದ.ರಾ.ಭಟ್ಟರ ನಿಧನಕ್ಕೆ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಜವಾಬ್ದಾರಿ ಹೊಂದಿರುವ ಬಿ.ಶಿವಾಜಿ ಅವರು ಕಂಬನಿ ಮಿಡಿದಿದ್ದಾರೆ. ಬನವಾಸಿಯವರೇ ಆದ ಬಿ.ಶಿವಾಜಿ ಅವರು ಗುರುವಿನ ಜತೆ ಹೊಂದಿರುವ ನಂಟನ್ನು ಸ್ಮರಿಸಿದ್ದಾರೆ. “ಅಂಬೇಡ್ಕರ್ ಅವರಿಗೆ ಒಬ್ಬ ಬ್ರಾಹ್ಮಣ ಸಮುದಾಯದವರು ಶಿಕ್ಷಣವನ್ನು ನೀಡಿ ಮುಂದೆ ಬರುವಂತೆ ಮಾಡಿದ ಹಾಗೆ, ಬನವಾಸಿಯಲ್ಲಿ ಒಬ್ಬ ಬ್ರಾಹ್ಮಣ ಸಮುದಾಯದ ದ.ರಾ. ಭಟ್ ಗುರುಗಳು ನನಗೆ ಪಾಠ ಕಲಿಸಿದ್ದಾರೆ. ಹಾಗೆಯೇ, ನನ್ನ ಎಲ್ಲ ಚಟುವಟಿಕೆಗಳಿಗೆ ಉತ್ತೇಜನ ನೀಡಿ ಕನ್ನಡ ಶಾಲೆಯಲ್ಲಿ ಮೇಲ್ವರ್ಗದ ವಿದ್ಯಾರ್ಥಿಗಳಿಗಿಂತ ಹೆಚ್ಚಿಗೆ ನನಗೆ ಆಶೀರ್ವಚನ ನೀಡಿದ್ದರು. ಗುರುಗಳ ನಿಧನದಿಂದ ನನಗೆ ತುಂಬ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ದುಃಖ ಬರಿಸುವಂತಹ ಶಕ್ತಿಯನ್ನು ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: Sudhir Naik: ಮಾಜಿ ಕ್ರಿಕೆಟಿಗ ಸುಧೀರ್ ನಾಯ್ಕ್ ಇನ್ನಿಲ್ಲ