ಕಾರವಾರ: ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯಕ್ಕೆ ಗೌರವ ನೀಡುವ ಕಾರ್ಯವನ್ನು ಕಸಾಪ ( ಜಿಲ್ಲಾ ಸಾಹಿತ್ಯ ಸಮ್ಮೇಳನ ) ಮಾಡುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜೋಯಿಡಾ ತಾಲೂಕಿನ ಉಳವಿಯಲ್ಲಿ ಶನಿವಾರ (ಡಿ.೧೭) ನಡೆದ ಉತ್ತರ ಕನ್ನಡ ಜಿಲ್ಲಾ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಉದ್ಘಾಟಕರಾಗಿ ಮಾತನಾಡಿ, ಜೋಯಿಡಾದ ಆದಿವಾಸಿಗಳ ಬಡತನ ನಿವಾರಣೆ ಮಾಡುವ ಕಾರ್ಯವನ್ನು ಕೂಡ ಮಾಡಬೇಕು ಎಂದರು.
ಬಹುತೇಕ ಕಾನೂನುಗಳು ಇಂಗ್ಲಿಷ್‌ನಲ್ಲಿವೆ. ಇದರ ಕನ್ನಡೀಕರಣ ಮಾಡಿ ಸಾಮಾನ್ಯ ಜನರಿಗೆ ಕಾನೂನು ಅರಿವು ತಿಳಿಯಪಡಿಸುವ ಕೆಲಸ ಅಗಬೇಕು. ಸರಕಾರ ಹೆಚ್ಚು ಹೆಚ್ಚು ಪುಸ್ತಕಗಳನ್ನು ಖರೀದಿಸುವ ಮೂಲಕ ಲೇಖಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಸಂವಿಧಾನದ ಭಾಷಾ ಸೂತ್ರದಂತೆ ರಾಜ್ಯ ಭಾಷೆಗಳಿಗೆ ಧಕ್ಕೆಯಾಗದಂತೆ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಆದಿ ಕವಿ ಪಂಪ ಕಂಡ ನಾಡು ನಮ್ಮ ಕನ್ನಡ ನಾಡು. ಶಾಂತಾರಾಮ ನಾಯ್ಕ ಅವರನ್ನು ಜಿಲ್ಲಾ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದು ಕನ್ನಡ ನಾಡಿಗೆ ನೀಡಿದ ಗೌರವ. ಸಾಹಿತ್ಯಕ್ಕೆ, ಕನ್ನಡ ಭಾಷೆಗೆ ಚಿಲುಮೆ ಕೊಟ್ಟ ಧೀಮಂತ ವ್ಯಕ್ತಿ ಇವರು. ಕನ್ನಡ ನಾಡನ್ನು ಒಡೆಯುವ ದುಷ್ಟ ಶಕ್ತಿಗಳಿಗೆ ದಿಟ್ಟ ಉತ್ತರ ನೀಡುವ ನಿರ್ಣಯ ಸಮ್ಮೇಳನದಲ್ಲಾಗಲಿ. ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಆಗಮಿಸಿ ಎಂದರು.
ಉಳವಿಯನ್ನು ನೋಡಬೇಕೆಂಬ ಬಹುದಿನಗಳ ಹಂಬಲ ಇಂದು ಇಡೇರಿದೆ. ಶಿವಶರಣ ಚೆನ್ನಬಸವಣ್ಣ ನೆಲೆ ನಿಂತ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರ, ವಚನ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಈ ಉಳವಿ ಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣವಾದ ಚಾರಿತ್ರಿಕ ಘಟನೆಯಾಗಿದೆ. ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಸುವರ್ಣ ಅವಕಾಶ ದೊರೆತುದಕ್ಕಾಗಿ ನಿಮ್ಮೆಲ್ಲರಿಗೆ ಶರಣು, ಶರಣು ಎಂದು ಸಮ್ಮೇಳನದ ಅಧ್ಯಕ್ಷ ಶಾಂತಾರಾಮ ನಾಯಕ ಹಿಚಕಡ ಹೇಳಿದರು.
ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿ, ಉಳವಿ ಬಸವಣ್ಣನ ಕ್ಷೇತ್ರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡಿರುವುದು ಸಂತಸದ ವಿಷಯ. ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಉಳವಿ ಕ್ಷೇತ್ರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡದ ಭಾಷೆ ಅನ್ನದ ಭಾಷೆ, ಬದುಕಿನ ಭಾಷೆ ಆಗಬೇಕು. ವಚನ ಸಾಹಿತ್ಯವನ್ನು ಭಾರತದ ತುಂಬೆಲ್ಲ ಪಸರಿಸುವ ಕಾರ್ಯ ಆಗಬೇಕು ಎಂದರು.
ಇದನ್ನೂ ಓದಿ | Avatar 2 | ಅವತಾರ್ ಸಿನಿಮಾ ನೋಡುವಾಗಲೇ ವ್ಯಕ್ತಿಗೆ ಹೃದಯಾಘಾತ, ಸಾವು
ವಿಷ್ಣು ಪಟಗಾರ ಮತ್ತು ಸುಧೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್ ನಾಯ್ಕ ಸ್ವಾಗತಿಸಿದರು. ಪಾಂಡುರಂಗ ಪಟಗಾರ ವಂದಿಸಿದರು.
ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್ ವಾಸರೆ, ಉಳವಿ ಟ್ರಸ್ಟ್ ಉಪಾಧ್ಯಕ್ಷ ಸಂಜಯ ಕಿತ್ತೂರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೈಯದ್ ಝಮೀರುಲ್ಲಾ ಷರೀಫ್, ಎನ್.ಆರ್ ನಾಯ್ಕ, ವಿಷ್ಣು ನಾಯ್ಕ, ರೋಹಿದಾಸ ನಾಯ್ಕ , ಭಾಗೀರಥಿ ಹೆಗಡೆ, ಉಳವಿ ಗ್ರಾ.ಪಂ ಅಧ್ಯಕ್ಷೆ ಮಂಗಲಾ ಮಿರಾಶಿ, ಉಪಾಧ್ಯಕ್ಷ ಮಂಜುನಾಥ ಮೊಖಾಶಿ ಉಪಸ್ಥಿತರಿದ್ದರು.
ಇದನ್ನೂ ಓದಿ | Grama vastavya | ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ ಹೂಳಬೇಕು; ಶಿಗ್ಗಾಂವಿಯಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ