ಸೊರಬ: ಕಾನಗೋಡು ಗ್ರಾಮದ ಕೆರೆ ಬೇಟೆ (ಮೀನು ಬೇಟೆ ) ಸಂದರ್ಭದಲ್ಲಿ ಸಂಭವಿಸಿದ ಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಪೊಲೀಸರು ಬಂಧಿಸದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಕಾಂಗ್ರೆಸ್ ಮುಖಂಡರು ಸೋಮವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡರು, ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೆರೆಬೇಟೆ ಗಲಭೆಯಲ್ಲಿ ಅಲ್ಲಿನ ಪೊಲೀಸರು ಸೊರಬ, ಸಾಗರ ಹಾಗೂ ಶಿಕಾರಿಪುರ ತಾಲೂಕಿನ ಅಮಾಯಕರನ್ನು ಹಿಡಿದು ಬಂಧಿಸುತ್ತಿದ್ದಾರೆ. ಇದರಿಂದ ಅಮಾಯಕರು ತೊಂದರೆ ಪಡುವಂತಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಅಕ್ರಮವಾಗಿ ಬಂಧಿಸಿದವರನ್ನು ಪೊಲೀಸರು ಬಿಡುಗಡೆ ಮಾಡಬೇಕು. ಮುಂಗಾರು ಪ್ರಾರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುವ ಈ ಸಮಯದಲ್ಲಿ ಗಲಭೆಗೆ ಸಂಬಂಧಪಡದ ಅಮಾಯಕರನ್ನು ಬಂಧಿಸುತ್ತಿದ್ದಾರೆ. ಅವರನ್ನೇ ನಂಬಿಕೊಂಡ ಕೃಷಿ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಆದ್ದರಿಂದ ಗಲಭೆಗೆ ಸಂಬಂಧಿಸದೇ ಇರುವವರನ್ನು ಕೂಡಲೇ ಬಿಡುಗಡೆ ಮಾಡಲು ಅಲ್ಲಿನ ಪೊಲೀಸರಿಗೆ ಸೂಚಿಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಮ್ಮ ಮನವಿಗೆ ಸ್ಪಂದಿಸಿ ಸ್ಥಳದಲ್ಲಿಯೇ ದೂರವಾಣಿಯ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆಲೋಕ್ ಕುಮಾರ ಅವರೊಂದಿಗೆ ಮಾತನಾಡಿ ಅಮಾಯಕರನ್ನು ಬಂಧಿಸಬಾರದು ಹಾಗೂ ಈಗ ಠಾಣೆಯಲ್ಲಿ ಇರುವವರನ್ನು ಬಿಡುಗಡೆ ಮಾಡಲು ಉತ್ತರ ಕನ್ನಡ ಜಿಲ್ಲಾ ರಕ್ಷಣಾಧಿಕಾರಿಗೆ ಸೂಚಿಸುವಂತೆ ತಿಳಿಸಿದ್ದಾರೆ. ಹೀಗಾಗಿ ಅಮಾಯಕರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದರು.
ಮುಖಂಡರಾದ ರಾಜು ಅಂದವಳ್ಳಿ, ಗುರುಸ್ವಾಮಿ ಗುಡವಿ, ಮಹಾಬಲೇಶ್ ತಡಗಳಲೆ, ಗಂಗಾಧರ ಹೊಸೂರು, ವಿಜಯ ನಾಯ್ಕ್, ಗಣಪತಿ, ದಿವಾಕರ, ಅಣ್ಣಪ್ಪ ಇದ್ದರು.
ಇದನ್ನೂ ಓದಿ | Video: ಪ್ರತಿಭಟಿಸಲು ದೆಹಲಿಗೆ ಹೋಗಿದ್ದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಹೀಗೆ ಪೇರಿ ಕಿತ್ತಿದ್ಯಾಕೆ?