ಶಿರಸಿ: ಮತಾಂತರ ಮಾಡಲು ಬಂದಿದ್ದ (Forced Conversion) ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಗಳಮನೆ ಗ್ರಾಮದ ಆದರ್ಶ ನಾಯ್ಕ ಎಂಬುವವರ ಮನೆಗೆ ಆರು ಜನರ ತಂಡವೊಂದು ಬಂದಿತ್ತು. ನಿಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸರಿ ಆಗಬೇಕಾದರೆ ಕ್ರೈಸ್ತ್ ಧರ್ಮ ಸ್ವೀಕಾರ ಮಾಡಿ ಎಂದು ಈ ಗುಂಪು ಮನವೊಲಿಸುತ್ತಿದ್ದರು ಎನ್ನಲಾಗಿದೆ.
ಏಸು ಕ್ರಿಸ್ತ ನಿಮಗೆ ಎಲ್ಲವನ್ನೂ ಕೊಡುತ್ತಾನೆ. ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತೆ ನಾವು ಕೂಡ ಮತಾಂತರ ಆಗಿದ್ದೇವೆ ಎಂದು ಹೇಳುತ್ತಾ ಪ್ರಚೋದನೆ ನೀಡುತ್ತಾ ಮನವೊಲಿಸುತ್ತಿದ್ದರು. ಆದರ್ಶ ನಾಯ್ಕ ಎಂಬುವವರು ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಆರು ಜನರಲ್ಲಿ ಪರಮೇಶ್ವ ನಾಯ್ಕ್, ಸುನೀತಾ ನಾಯ್ಕ್, ಧನಂಜಯ್ ಶಿವಣ್ಣ, ಶಾಲಿನಿ ರಾಣಿ ಈ ನಾಲ್ವರು ಹಾವೇರಿ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಕುಮಾರ ಲಮ್ಮಾಣಿ, ತಾರಾ ಲಮ್ಮಾಣಿ ಇಬ್ಬರು ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನವರಾಗಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Delhi Crime: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಸ್ನೇಹಿತನನ್ನು ಕೊಂದ 20 ವರ್ಷದ ಯುವಕ
ಭದ್ರಾವತಿಯಲ್ಲೂ ಮತಾಂತರಕ್ಕೆ ಪ್ರಚೋದನೆ
ಶಿವಮೊಗ್ಗದ ಭದ್ರಾವತಿ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್ ಎಂಬ ಹೆಸರಿನಲ್ಲಿ ಅನಧಿಕೃತ ಪ್ರಾರ್ಥನಾ ಮಂದಿರವನ್ನು (Forced Conversion) ನಿರ್ಮಿಸಲಾಗಿತ್ತು. ವಸತಿ ಯೋಜನೆಯಲ್ಲಿ ಮಂಜೂರಾದ ಸ್ವತ್ತನ್ನು ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಿ, ಮತಾಂತರ ಆಗುವಂತೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಹಿಂದು ಜಾಗರಣ ವೇದಿಕೆ ಆರೋಪ ಕೇಳಿ ಬಂದಿತ್ತು.
ಇಂಡಿಯಾ ಚರ್ಚ್ ಆಫ್ ಗಾಡ್ ಎಂಬ ಹೆಸರಿನಡಿ ಮತಾಂತರ ಮಾಡಲಾಗುತ್ತಿದೆ. ವಿನೋದ್ ಚಾಕು ಎಂಬಾತನ ನೇತೃತ್ವದಲ್ಲಿ ಕ್ರೈಸ್ತ ಜನಾಂಗದವರು ಇಲ್ಲದಿದ್ದರೂ ಸ್ಥಳೀಯ ಹಿಂದು ಜನರನ್ನು ಮತಾಂತರ ಮಾಡುವ ಉದ್ದೇಶದಿಂದಲೇ ಅನಧಿಕೃತವಾಗಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಗಿದೆ ಎನ್ನಲಾಗಿತ್ತು.
ಆ ಮೂಲಕ ಧ್ವನಿವರ್ಧಕದಲ್ಲಿ ಪ್ರಾರ್ಥನೆ ಸಲ್ಲಿಸುವುದು. ಮನೆ ಮನೆಗೆ ಭೇಟಿ ನೀಡಿ ಮತಾಂತರಕ್ಕೆ ಪ್ರಚೋದನೆ ನೀಡುವುದು. ಪ್ರಾರ್ಥನೆಗೆ ಬರದಿದ್ದರೆ ಬೆದರಿಕೆ ಹಾಕಿ ಗ್ರಾಮದಲ್ಲಿ ಶಾಂತಿಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದರು.
ಪೊಲೀಸರ ನಿರ್ಲಕ್ಷ್ಯಕ್ಕೆ ಕಿಡಿ
ಕಾನೂನು ಬಾಹಿರವಾಗಿ ಅನಧಿಕೃತ ಚರ್ಚ್ ನಿರ್ಮಿಸಿ, ಮತೀಯ ಪ್ರಚೋದನೆಯಿಂದಾಗಿ ಗ್ರಾಮವು ಸೂಕ್ಷ್ಮ ಪ್ರದೇಶವಾಗಿ ಪರಿವರ್ತನೆ ಆಗುತ್ತಿದೆ. ಗಲಭೆಯಾಗುವ ಮುನ್ಸೂಚನೆ ಇದ್ದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದರು.
ತಮ್ಮಡಿಹಳ್ಳಿ ಗ್ರಾಮದಲ್ಲಿ ಅನಧಿಕೃತ ಚರ್ಚ್ ನಿರ್ಮಾಣ ಮಾಡಿರುವುದರಿಂದ ಕೂಡಲೇ ತೆರವುಗೊಳಿಸಬೇಕು. ಚರ್ಚ್ ನಡೆಸಲು ಯಾವುದೇ ದಾಖಲಾತಿ ಪಡೆದಿಲ್ಲ. ವ್ಯಕ್ತಿಯೊಬ್ಬರಿಗೆ ಕೊಟ್ಟಿದ್ದ ಮನೆಯಲ್ಲಿ ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್ ಎಂಬ ಹೆಸರಿನಲ್ಲಿ ಪ್ರಾರ್ಥನಾ ಮಂದಿರ ನಡೆಸಲಾಗುತ್ತಿದೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ, ಸಿಇಓ, ಎಸ್‌ಪಿಗೆ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮನವಿ ಸಲ್ಲಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ