ಉತ್ತರ ಕನ್ನಡ: ಅರಣ್ಯ ಸಿಬ್ಬಂದಿಗಳಿಂದ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅರಣ್ಯವಾಸಿಗಳು ಆರೋಪಿಸಿದ್ದಾರೆ. ಏಪ್ರಿಲ್ 25ರಂದು ಉಮ್ಮರಶೇಟ್, ಜಾಲಿ ಮುಂತಾದ ಪ್ರದೇಗಳಲ್ಲಿ ಭಟ್ಕಳ ತಾಲ್ಲೂಕಿನ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯವಾಸಿಗಳಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಇದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ.
ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯು ಏಪ್ರಿಲ್ 30ರಂದು ಭಟ್ಕಳ ಅರಣ್ಯಾಧಿಕಾರಿಯೊಂದಿಗೆ ಮುಕ್ತ ಚರ್ಚೆ ಹಮ್ಮಿಕೊಂಡಿದ್ದಾರೆ. ಅರಣ್ಯ ಸಿಬ್ಬಂದಿಯಿಂದ ದೌರ್ಜನ್ಯ ಭಟ್ಕಳ ತಾಲ್ಲೂಕಿನಲ್ಲಿ ಮುಂದುವರೆದಿದ್ದು, ಈ ಬಗ್ಗೆ ಚರ್ಚೆ ಜರುಗಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶಗಳು ಅರಣ್ಯವಾಸಿಗಳ ಪರ ಇದೆ. ಆದರೂ ಅರಣ್ಯ ಸಿಬ್ಬಂದಿ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಕಾರ್ಯ ಜರುಗಿಸುತ್ತಿರುವುದು ವಿಷಾದಕರ ಎಂದು ರವೀಂದ್ರ ನಾಯ್ಕ ಹೇಳಿದರು. ಅಲ್ಲದೆ, ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಯು ಅರಣ್ಯ ವಾಸಿಗಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಲ್ಲಿ ಅತೀ ಹೇಚ್ಚು ಪ್ರಕರಣ ಕಂಡಿದ್ದು ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಎಂಬುದು ಖೇದ ಉಂಟುಮಾಡಿದೆ ಎಂದು ತಿಳಿಸಿದರು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯು ಏಪ್ರಿಲ್ 30ರಂದು ಭಟ್ಕಳ ಅರಣ್ಯಾಧಿಕಾರಿಯೊಂದಿಗೆ ಮುಕ್ತ ಚರ್ಚೆ ಹಮ್ಮಿಕೊಳ್ಳುತ್ತಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.
ಇದನ್ನೂ ಓದಿ | Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!