ಕಾರವಾರ: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಸ್ತೆ ಅಪಘಾತಗಳಿಂದಾಗಿ ಸಾರ್ವಜನಿಕರು ಅಪಾರ ಸಾವು-ನೋವುಗಳಿಗೆ ತುತ್ತಾಗುತ್ತಿದ್ದಾರೆ. ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಅವುಗಳಲ್ಲಿ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದೇ (helmet awareness campaign) ತಲೆಗೆ ಪೆಟ್ಟಾಗಿ ಮರಣ ಹೊಂದುವವರ ಸಂಖ್ಯೆಯೇ ಹೆಚ್ಚಾಗಿದೆ.
ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಹಾಗೂ ವಾಹನ ಸವಾರರಿಗೆ ರಸ್ತೆ ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸಲು ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಶನಿವಾರ (ಡಿ.೧೦) ಕಾರವಾರ ನಗರ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ನಗರದ ಸುಭಾಷ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹೂವಿನ ಚೌಕ, ಪಿಕಳೆ ರಸ್ತೆ ಸೇರಿದಂತೆ ವಿವಿಧ ವೃತ್ತಗಳಲ್ಲಿ ” ನನ್ನನ್ನು ಕ್ಷಮಿಸಿ” ಎಂಬ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಸವಾರರ ಕೈಗೆ “ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದೇನೆ. ನನ್ನ ಜೀವ ಸುರಕ್ಷತೆಯ ಹಿತದೃಷ್ಟಿಯಿಂದ ನಾನು ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂಬ ಶೀರ್ಷಿಕೆಯುಳ್ಳ ಭಿತ್ತಿಫಲಕ ನೀಡಿ ಸಾರ್ವಜನಿಕರಿಗೆ ವಿನೂತನವಾಗಿ ಜಾಗೃತಿಯನ್ನು ಮೂಡಿಸಲಾಯಿತು.
ಅಭಿಯಾನದಲ್ಲಿ ಕಾರವಾರ ನಗರ ಸಂಚಾರ ಠಾಣೆಯ ಪಿಎಸ್ಐ ನಾಗಪ್ಪ ಬಿ.ಹಾಗೂ ಸಿಬ್ಬಂದಿಗಳಾದ ಗಣಪತಿ ಬೆನಕಟ್ಟಿ, ಮೌಲಾಲಿ, ಗದಿಗೆಪ್ಪ ಚಕ್ರಸಾಲಿ, ನಾಗರಾಜ ಹರಪನಹಳ್ಳಿ, ಪ್ರವೀಣ ಭಾಗವಹಿಸಿದ್ದರು.
ಇದನ್ನೂ ಓದಿ | ಟಿಪ್ಪು ವಿವಾದ | ದೇವರಿಗೆ ಮಾಡುವ ಆರತಿ ರದ್ದಾಗಲ್ಲ, ಹೆಸರು ಬದಲಾಗುತ್ತದೆ ಎಂದ ಸಚಿವೆ ಶಶಿಕಲಾ ಜೊಲ್ಲೆ