ಬೆಂಗಳೂರು: ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ (Gokarna Temple) ಉಪಾಧಿವಂತರು ಮತ್ತು ವಿದ್ವಾಂಸರ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ (Karnataka Government order) ಆದೇಶಕ್ಕೆ ರಾಜ್ಯ ಹೈಕೋರ್ಟ್ (Karnataka High court) ತಡೆ ನೀಡಿದೆ. ದೇವಾಲಯದ ಆಡಳಿತ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಾಮ ನಿರ್ದೇಶನಗೊಂಡಿದ್ದ ಇಬ್ಬರು ಉಪಾಧಿವಂತರು ಮತ್ತು ಇಬ್ಬರು ವಿದ್ವಾಂಸರನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಬದಲಾಯಿಸಿ ಆದೇಶಿಸಿತ್ತು.
ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೊಸನಗರದ ರಾಮಚಂದ್ರಾಪುರ ಮಠದ (Sri Ramachandrapura Mutt) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ಹೆಗಡೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ತಡೆಯಾಜ್ಞೆಯನ್ನು ನೀಡಿದೆ.
ಬದಲಾವಣೆ ಮಾಡಬೇಕು ಎಂಬ ನಿಯಮ ಎಲ್ಲಿದೆ?
ಅರ್ಜಿದಾರರ ಪರ ವಕೀಲ ಪಿ ಎನ್ ಮನಮೋಹನ್ ಅವರು ರಾಜ್ಯ ಸರ್ಕಾರದ ಆದೇಶಕ್ಕೆ ಆಕ್ಷೇಪಿಸಿದರು. ಇದಕ್ಕೆ ಪ್ರತಿಯಾಗಿ ಪೀಠವು, ‘ಯಾವ ಆಧಾರದಲ್ಲಿ ಈ ಆದೇಶ ಹೊರಡಿಸಿದ್ದೀರಿ‘ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.
‘ಯಾವ ತಪ್ಪಾಗಿದೆ ಎಂದು ಈ ತಿದ್ದುಪಡಿ ಮಾಡಿದ್ದೀರಿ, ಕಾಲಕಾಲಕ್ಕೆ ಈ ರೀತಿಯ ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್ ಆದೇಶದಲ್ಲಿ ಎಲ್ಲಿ ವಿವರಿಸಲಾಗಿದೆ. ಇಂತಹ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂಬುದು ಮೇಲ್ನೋಟಕ್ಕೇ ತಿಳಿದು ಬರುತ್ತದೆಯಲ್ಲವೇ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತು.
ಏನಿದು ಉಪಾಧಿವಂತರು, ವಿದ್ವಾಂಸರ ನೇಮಕ ವಿವಾದ
ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಡಿನೋಟಿಫೈ ಪ್ರಕರಣದ ಸಿವಿಲ್ ದಾವೆಯಲ್ಲಿ ಸುಪ್ರೀಂ ಕೋರ್ಟ್ 2021ರ ಏಪ್ರಿಲ್ 19ರಂದು ಮಧ್ಯಂತರ ಆದೇಶ ನೀಡಿತ್ತು. ಈ ಆದೇಶದ ಅನುಸಾರ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ 2021ರ ಮೇ 4ರಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್ ಕೃಷ್ಣ ನೇತೃತ್ವದಲ್ಲಿ ಅಧ್ಯಕ್ಷರನ್ನೂ ಒಳಗೊಂಡಂತೆ 8 ಸದಸ್ಯರ ಮೇಲ್ವಿಚಾರಣಾ ಸಮಿತಿ ರಚಿಸಲಾಗಿತ್ತು.
ಈ ಸಮಿತಿಯಲ್ಲಿದ್ದ ಉಪಾಧಿವಂತರಾದ ಮಹಾಬಲ ಉಪಾಧ್ಯೆ, ದತ್ತಾತ್ರೇಯ ಹಿರೇಗಂಗೆ ಮತ್ತು ವಿದ್ವಾಂಸರಾದ ಪರಮೇಶ್ವರ ಮಾರ್ಕಾಂಡೆ ಹಾಗೂ ಮುರಳೀಧರ ಪ್ರಭು ಅವರನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಕೈಬಿಟ್ಟಿತ್ತು. ಅವರ ಸ್ಥಾನಕ್ಕೆ ಉಪಾಧಿವಂತರಾಗಿ ಗಣಪತಿ ಶಿವರಾಮ ಹಿರೇಭಟ್ಟ, ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ವಿದ್ವಾಂಸರಾಗಿ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಹಾಗೂ ಮಹೇಶ್ ಗಣೇಶ್ ಹಿರೇಗಂಗೆ ಅವರನ್ನು ನಾಮ ನಿರ್ದೇಶನ ಮಾಡಿತ್ತು.
ಇದನ್ನೂ ಓದಿ: OM Beach : ಗೋಕರ್ಣದಲ್ಲಿ ಮಿಸ್ ಮಾಡದೆ ನೋಡಬೇಕಾದ ಬೀಚ್ ಇದು
ದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಕಳೆದ ತಿಂಗಳ 12ರಂದು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಇದೀಗ ಅದಕ್ಕೆ ತಡೆಯಾಜ್ಞೆ ಸಿಕ್ಕಿದೆ. ರಾಜ್ಯ ಸರ್ಕಾರ ತನ್ನ ಉತ್ತರವನ್ನು ನೀಡಿದ ಬಳಿಕ ವಿಚಾರಣೆ ಮುಂದುವರಿಯಲಿದೆ.