Site icon Vistara News

Karnataka Election 2023: ವಿಧಾನಸಭಾ ಚುನಾವಣೆಗೆ ಸಿದ್ಧ; ಉ.ಕ. ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ ತಂಡ ನಿಯೋಜನೆ: ಎಡಿಜಿಪಿ ಅಲೋಕ್‌ ಕುಮಾರ್‌

#image_title

ಕಾರವಾರ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ 4 ಸಿಆರ್‌ಪಿಎಫ್‌ ತಂಡವನ್ನು ಉತ್ತರ ಕನ್ನಡ ಜಿಲ್ಲೆಗೆ ನಿಯೋಜನೆ ಮಾಡಲಾಗುತ್ತಿದ್ದು, ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆ ಕಲ್ಪಿಸಲಾಗುವುದು ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಚುನಾವಣಾ ಸಿದ್ಧತೆ ಕುರಿತು ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಸೂಕ್ಷ್ಮ ಚೆಕ್‌ಪೋಸ್ಟ್‌ಗಳು ಇರುವ ಪ್ರದೇಶಗಳಲ್ಲೂ ಸಹ ಸಿಆರ್‌ಪಿಎಫ್‌ ತುಕಡಿಯನ್ನು ನಿಯೋಜನೆ ಮಾಡಲಾಗುತ್ತಿದ್ದು, ಇನ್ನು ಒಂದೆರಡು ದಿನಗಳಲ್ಲಿ ಆಗಮಿಸುವ ನಿರೀಕ್ಷೆಯಿದೆ. ಪೊಲೀಸ್ ಸಿಬ್ಬಂದಿಯೊಂದಿಗೆ ಚೆಕ್‌ಪೋಸ್ಟ್‌ಗಳಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಸಂಚಾರಿ ವಿಚಕ್ಷಣ ದಳದೊಂದಿಗೂ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗುವುದು” ಎಂದರು.

ಇದನ್ನೂ ಓದಿ: Karnataka Election 2023: ಇದು ನನ್ನ ಕೊನೆಯ ಚುನಾವಣೆ: ಸಚಿವ ಬಿ.ಸಿ. ಪಾಟೀಲ್‌

“ಇನ್ನು ಜಿಲ್ಲೆಯಾದ್ಯಂತ ಈಗಾಗಲೇ ರೌಡಿಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಕ್ರಮ ಜರುಗಿಸಲಾಗಿದೆ. 33 ರೌಡಿಶೀಟರ್‌ಗಳನ್ನು ಪಟ್ಟಿ ಮಾಡಿ ಗಡಿಪಾರು ಮಾಡುವಂತೆ ಕೇಳಲಾಗಿದ್ದು, ಇಬ್ಬರನ್ನು ಹೊರತುಪಡಿಸಿ 31 ಮಂದಿಗೆ ಗಡಿಪಾರು ಮಾಡುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿದ ಬಳಿಕ ಗಡಿಪಾರು ಆದೇಶ ಜಾರಿಯಾಗಲಿದೆ. ಇದಾದ ಬಳಿಕ ಗಡಿಪಾರುಗೊಂಡವರು ಯಾವ ಜಿಲ್ಲೆಗೆ ಸೂಚಿಸುತ್ತಾರೋ ಆ ಪ್ರದೇಶಗಳಿಗೆ ತೆರಳಬೇಕು” ಎಂದು ತಿಳಿಸಿದರು.

ಇದನ್ನೂ ಓದಿ: Congress Ticket: ಉತ್ತರ ಕನ್ನಡದ ಇಬ್ಬರು ಮಾಜಿ ಶಾಸಕ, ಒಬ್ಬರು ಮಾಜಿ ಸಚಿವರಿಗೆ ಟಿಕೆಟ್ ಘೋಷಣೆ

ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದ ಕೆಡಿಸುವಂತಹ ಪೋಸ್ಟ್‌ಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಇಂತಹ ಕೃತ್ಯಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ಇಲ್ಲ. ಇಂತಹ ಸಂದರ್ಭದಲ್ಲಿ ಕೋಮು ಸೌಹಾರ್ದತೆ ಕೆಡಿಸಲು ಮುಂದಾದರೆ ಪೊಲೀಸ್ ಇಲಾಖೆ ಸರಿಯಾದ ಕ್ರಮ ಕೈಗೊಳ್ಳಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ಈ ವಿಚಾರದಲ್ಲಿ ಯಾವ ಕಾರಣಕ್ಕೂ ಮುಲಾಜಿಲ್ಲದೆ ಕ್ರಮವನ್ನು ಜರುಗಿಸುತ್ತೇವೆ. ಕೇವಲ ರೌಡಿಗಳಷ್ಟೇ ಅಲ್ಲ ಎಲ್ಲರ ಮೇಲೂ ನಿಗಾ ಇರಿಸಿದ್ದು, ಯಾರೇ ಅತಿರೇಕವಾಗಿ ವರ್ತಿಸಿದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು” ಎಂದರು.

ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ವರದಿಯಾಗುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, “ಗಾಂಜಾ ಸಾಗಾಟದ ವಿರುದ್ಧವೂ ನಿಗಾ ಇರಿಸಲಾಗಿದೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಪೊಲೀಸರಿಗೆ ತಿಳಿಸಿ” ಎಂದು ಅಲೋಕ್‌ ಕುಮಾರ್‌ ಮನವಿ ಮಾಡಿದರು.

Exit mobile version