ಶಿರಸಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಎದ್ದಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೆಂಕಟೇಶ್ ಹೆಗಡೆ ಹೊಸಬಾಳೆ ಇದೀಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: Sirsi News : ಶಿರಸಿಯಲ್ಲಿ ಪ್ರಜ್ವಲೋತ್ಸವ, ಸಾಂಸ್ಕೃತಿಕ ಸಂಜೆ ಯಶಸ್ವಿ
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ, “2008-09ರಿಂದ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆ ಕೇಳದೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎನ್ನುವ ಒತ್ತಡ ಇತ್ತು. ಅದರ ಬಿಟ್ಟರೆ ಯಾವುದೇ ಆಕಾಂಕ್ಷೆ ಇರಲಿಲ್ಲ. 2000-05ರವರೆಗೆ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದ್ದೆ. 2004ರಲ್ಲಿ ಜೆಡಿಎಸ್‌ನಿಂದ ಅಂಕೋಲಾ ಕ್ಷೇತ್ರದಿಂದ ಸ್ಪರ್ಧಿಸಿ ಉತ್ತಮ ಮತಗಳನ್ನು ಪಡೆದಿದ್ದೆ. ಈಗ ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿಯಾಗಿದ್ದೆ. ನಾಲ್ಕು ಸಲ ಸೋತ ಅಭ್ಯರ್ಥಿಯನ್ನು ಐದನೇ ಸಲ ಅಭ್ಯರ್ಥಿ ಮಾಡಿರುವುದು ಆಘಾತ ತಂದಿದೆ” ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಿರುದ್ದ ಕಿಡಿಕಾರಿದ್ದಾರೆ.
“ಭೀಮಣ್ಣ ಅವರು ಕಳೆದ ಅನೇಕ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ನಿಂತಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಎಲ್ಲ ರೀತಿಯ ಜನರು ಇದ್ದಾರೆ. ಸೋತ ಅಭ್ಯರ್ಥಿಯೇ ಏಕೆ ಬೇಕೆ? ಕಾಂಗ್ರೆಸ್‌ಗೆ ಇನ್ನೊಂದು ಅಭ್ಯರ್ಥಿ ಕಾಣುವುದಿಲ್ಲವೇ? ಹೊಸ ಮುಖಕ್ಕೆ ಟಿಕೆಟ್ ನೀಡಬೇಕು ಎನ್ನುವ ಜನಾಭಿಪ್ರಾಯ ಬಂದಿದೆ. ಈ ಕ್ಷೇತ್ರದ ಜನರಿಗೆ ಪಕ್ಷ ಮಾಡುತ್ತಿರುವುದು ಅನ್ಯಾಯ. ಬಿಜೆಪಿ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆಯಾ ಎಂಬ ಅನುಮಾನ ಕಾಡುತ್ತಿದೆ. ಒಂದೇ ವ್ಯಕ್ತಿ ಬಿಜೆಪಿಯಿಂದ ಆರಿಸಿ ಬರುತ್ತಾರೆ. ಇಲ್ಲಿ ಈಗ ಘೋಷಣೆಯಾದ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಿ ಸೋಲುತ್ತಾರೆ. ಕಾಂಗ್ರೆಸ್ ಸಿದ್ಧಾಂತ ಎತ್ತಿ ಹಿಡಿಯಬೇಕು ಎನ್ನುವುದು ನನ್ನ ಉದ್ದೇಶ. ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಅಭಿಪ್ರಾಯ. ನಮ್ಮ ಏಳು ಜನರಲ್ಲಿ ಯಾರಿಗಾದರೂ ಟಿಕೆಟ್ ನೀಡಬಹುದಿತ್ತು. ನಾನು ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಎರಡು ಲಕ್ಷ ನೀಡಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆ. ಹಾಗಾಗಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ” ಎಂದರು.
ಇದನ್ನೂ ಓದಿ: Documents Digitalization: ಶ್ರೀನಿವಾಸ್ ಹೆಬ್ಬಾರ್ ಮತ್ತೊಂದು ಸಾಹಸ; ಶಿರಸಿ ಉಪ ವಿಭಾಗದ ದಾಖಲೆ ಸಂಪೂರ್ಣ ಡಿಜಿಟಲೀಕರಣ
“ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತೇನೆ. 25 ಸಾವಿರ ಮತಗಳಿಂದ ಗೆಲ್ಲುತ್ತೇನೆ. ಇಲ್ಲಿನ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದೆ. ಎಲ್ಲವನ್ನೂ ಜನತೆಯ ಮುಂದೆ ಇಡುತ್ತೇನೆ. ಜನರು ಆಶೀರ್ವಾದ ಮಾಡಲಿದ್ದಾರೆ ಎನ್ನುವ ಭರವಸೆ ಇದೆ” ಎಂದು ಹೇಳಿದ್ದಾರೆ.