ಯಲ್ಲಾಪುರ: ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳುವ ಮೂಲಕ ತಮ್ಮ ಶಕ್ತಿ ಪ್ರದರ್ಶನ (Karnataka Election) ಮಾಡಿದರು.
ಮುಂಜಾನೆ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ಅವರು, ನಂತರ ಅಲ್ಲಿಂದ ತೆರದ ವಾಹನದಲ್ಲಿ ಸಾವಿವಾರು ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ತಾಲೂಕಾಡಳಿತ ಸೌಧಕ್ಕೆ ತೆರಳಿ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಅವರಿಗೆ ತಮ್ಮ ಉಮೇದುವಾರಿ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಚಿವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಎಲ್ ಟಿ ಪಾಟೀಲ್, ರವಿ ಗೌಡ್ ಪಾಟೀಲ್ ಜೊತೆಗಿದ್ದರು.
ನಂತರ ಮಾತನಾಡಿದ ಅವರು, “ಇಂದು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಬೆಂಬಲ ತೋರಿರುವುದು ಗೆಲ್ಲುವ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕಾರ್ಮಿಕ ಇಲಾಖೆಯ ಮುಖಾಂತರ ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದ್ದೇವೆ. ಈ ಚುನಾವಣೆ ಅಭಿವೃದ್ಧಿ ಕಾರ್ಯ ಹಾಗೂ ನೀತಿಯ ಆಧಾರದ ಮೇಲೆ ನಡೆಯುತ್ತದೆಯೇ ಹೊರತು ಯಾವುದೇ ಜಾತಿ, ವರ್ಗದ ಆಧಾರದ ಮೇಲೆ ನಡೆಯುವುದಿಲ್ಲ. 5 ವರ್ಷಗಳಲ್ಲಿ 3ನೇ ಬಾರಿ ಚುನಾವಣೆಯನ್ನು ಎದುರಿಸುತ್ತಿದ್ದೇನೆ. ಕಳೆದ ಬಾರಿಯ ಉಪ ಚುನಾವಣೆಯಲ್ಲಿ ಕ್ಷೇತ್ರದ ಜನ 31 ಸಾವಿರ ಮತಗಳ ಮುನ್ನಡೆ ನೀಡಿದ್ದರು. ಈ ಬಾರಿ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿದೆ” ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಮ ಸಿದ್ದಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ, ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ, ಯುವ ನಾಯಕ ವಿವೇಕ್ ಹೆಬ್ಬಾರ್, ವಿಜಯ ಮಿರಾಶಿ, ಬಾಲು ನಾಯಕ, ಪ್ರಧಾನ ಕಾರ್ಯದರ್ಶಿ ರವಿ ಭಟ್ ಬರಗದ್ದೆ, ಪ್ರಕಾಶ ಹೆಗಡೆ ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.