Site icon Vistara News

Lok Sabha Election 2024: 2.5 ಲಕ್ಷ ಮತಗಳ ಅಂತರದಿಂದ ಕಾಗೇರಿ ಗೆಲುವು: ಬಿಜೆಪಿ ಜಿಲ್ಲಾಧ್ಯಕ್ಷರ ವಿಶ್ವಾಸ

BJP district president N S Hegde pressmeet in Yallapur

ಯಲ್ಲಾಪುರ: ಲೋಕಸಭಾ ಚುನಾವಣೆಗೆ (Lok Sabha Election 2024) ಸಂಬಂಧಿಸಿದಂತೆ ಬಿಜೆಪಿಯ ಉತ್ತರ ಕನ್ನಡ ಕ್ಷೇತ್ರದ ಅವಲೋಕನ ಸಭೆ ಇಂದು ನಡೆಸಲಾಗಿದ್ದು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 2.5 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಧ್ಯಾಹ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರತಿ ಬೂತ್‌ನಿಂದ ಮತಗಳಿಕೆಯ ಕುರಿತು ಮಾಹಿತಿ ಪಡೆಯಲಾಗಿದ್ದು, ಪ್ರತಿ ಬೂತ್‌ನಲ್ಲಿ ಬಿಜೆಪಿಗೆ ಮುನ್ನಡೆ ದೊರೆತಿರುವ ಕುರಿತು ಬೂತ್‌ ಅಧ್ಯಕ್ಷರುಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿನ ಶಾಸಕರು, ಮಾಜಿ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಉತ್ತಮ ಅಂತರದ ಮುನ್ನಡೆ ದೊರಕುವುದಾಗಿ ತಿಳಿಸಿದ್ದಾರೆ. ಏಪ್ರಿಲ್ 28ರಂದು ಕಳೆದ ಒಂದು ವರ್ಷದಲ್ಲಿ ಜಿಲ್ಲೆಗೆ ಎರಡನೇ ಬಾರಿ ಪ್ರಧಾನಮಂತ್ರಿ ಮೋದಿಜಿಯವರು ಆಗಮಿಸಿದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಂಘಟಸಿದ್ದು, ಅದಕ್ಕೂ ಸಹ ಕೇಂದ್ರದಿಂದ ಪ್ರಶಂಸನೆ ದೊರೆತಿದೆ ಎಂದರು.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಕ್ಷೇತ್ರದಲ್ಲಿ ಚುನಾವಣೆಯ ದೃಷ್ಟಿಯಿಂದ ಕಾರ್ಯನಿರ್ವಹಿಸಿದ ಸಮಿತಿಗಳಿಗೆ, ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರುಗಳಿಗೆ ಮೇ 27ರೊಳಗೆ ಪ್ರತಿ ಮಂಡಲದಲ್ಲಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಖುದ್ದು ಪ್ರವಾಸ ಮಾಡಿ, ಅಭಿನಂದನೆ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿ, ಬರದಿಂದ ಕಂಗಾಲಾದ ರೈತರಿಗೆ ಕೇಂದ್ರ ಸರ್ಕಾರದಿಂದ ಸಮಯಕ್ಕೆ ಸರಿಯಾಗಿ ಬೆಳೆ ಪರಿಹಾರ ಧನ ಬಿಡುಗಡೆಯಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಸುಮಾರು 41 ಕೋಟಿ ಪರಿಹಾರ ದೊರೆತಿದ್ದು, ಈ ಪೈಕಿ ಮುಖ್ಯ ಆಹಾರ ಬೆಳೆ ಬೆಳೆಯುವ ಯಲ್ಲಾಪುರ, ಮುಂಡಗೋಡ ಭಾಗದ ರೈತರಿಗೆ ಸಿಂಹಪಾಲು ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿ, ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಬ್ಯಾಂಕ್‌ ಮೂಲಕ ನೇರವಾಗಿ ರೈತರಿಗೆ ಈ ಪರಿಹಾರ ಧನ ದೊರಕುವಂತೆ ಮಾಡಿರುವ ಪ್ರಧಾನಮಂತ್ರಿ ಹಾಗೂ ಕೇಂದ್ರ ಕೃಷಿ ಮಂತ್ರಿಗಳಿಗೆ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸ ಬಯಸುತ್ತೇವೆ ಎಂದರು.

ಇದನ್ನೂ ಓದಿ: Reliance Retail: ರಿಲಯನ್ಸ್‌ ರಿಟೇಲ್‌ನಲ್ಲಿ ಎಎಸ್‌ಒಎಸ್‌ ಬ್ರ್ಯಾಂಡ್‌ನ ಉತ್ಪನ್ನಗಳು ಈಗ ಲಭ್ಯ

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಜಾನನ ಗುನಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಮಾಜಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌ ಪ್ರಮುಖರಾದ ಉಮೇಶ ಭಾಗ್ವತ್‌ ಉಪಸ್ಥಿತರಿದ್ದರು.

Exit mobile version