ಶಿರಸಿ: ಬಿಜೆಪಿ (BJP) ನಮ್ಮ ಕಾರ್ಯಕರ್ತರನ್ನು ಹಾಗೂ ನಾಯಕರನ್ನು ನಡೆಸಿಕೊಂಡ ರೀತಿಯಿಂದ ಬೇಸರಗೊಂಡು ವಾಪಸ್ ನಮ್ಮ ಮೂಲ ಪಕ್ಷವಾದ ಕಾಂಗ್ರೆಸ್‌ಗೆ (Congress) ಸೇರ್ಪಡೆಯಾಗಿದ್ದೇವೆ ಎಂದು ಯುವ ಮುಖಂಡ, ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ (Lok Sabha Election 2024) ಹೇಳಿದರು.
ಬನವಾಸಿಯ ಟಿಎಂಸಿ ಎದುರಿನ ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ತಿಂಗಳಿಂದ ಶಾಸಕ ಶಿವರಾಮ ಹೆಬ್ಬಾರ್ ಅವರು ಬಿಜೆಪಿ ತೊರೆಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಬಿಜೆಪಿಗೆ ಈ ಹಿಂದೆ ಸೇರಿ ಸರ್ಕಾರ ತಂದೆವು, ಆದರೆ ನಂತರ ಅವರು ನಮ್ಮೊಂದಿಗೆ ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸಲು ಎಲ್ಲರೂ ಕಾಂಗ್ರೆಸ್ ಸೇರಿದ್ದೇವೆ. ನಮ್ಮಿಂದ ಇನ್ನೂ ಹೆಚ್ಚಿನ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಬನವಾಸಿ ವ್ಯಾಪ್ತಿಯ ಹತ್ತು ಪಂಚಾಯತ್ ನಲ್ಲಿ ಅತ್ಯಧಿಕ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲು ಎಲ್ಲರೂ ದುಡಿಯಬೇಕು ಎಂದು ತಿಳಿಸಿದರು.
ಇದನ್ನೂ ಓದಿ: FD interest rate: ಬಜಾಜ್ ಫೈನಾನ್ಸ್ ಹೆಚ್ಚಿನ ಅವಧಿಯ ಸ್ಥಿರ ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ
ಯಾವುದೇ ಅಧಿಕಾರದ ಆಸೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಕಾಂಗ್ರೆಸ್ ಸೇರುವಂತೆ ಕಾರ್ಯಕರ್ತರು ನಾಲ್ಕೈದು ತಿಂಗಳಿನಿಂದ ಮನವಿ ಮಾಡಿಕೊಳ್ಳುತ್ತಿದ್ದರು. ಅವರ ಧ್ವನಿಗೆ ಓಗೊಟ್ಟು ಕಾಂಗ್ರೆಸ್ ಸೇರುತ್ತಿದ್ದೇವೆ. ಪ್ರತಿ ಪಂಚಾಯಿತಿ ಹಂತದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಮುಂದಿನ ದಿನದಲ್ಲಿ ನಡೆಯಲಿದೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಗೆಲುವು ಸಹ ಖಚಿತ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಮಾತನಾಡಿ, ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿಯಲ್ಲಿ ಗ್ರಾಮ ಮಟ್ಟದಲ್ಲೂ ಉಸಿರುಗಟ್ಟುವ ಪರಿಸ್ಥಿತಿ ಇದ್ದರೆ, ದೇಶದಲ್ಲಿ ಇನ್ಯಾವ ಪರಿಸ್ಥಿತಿ ಇರಬಹುದು ಎಂದು ಮತದಾರರು ಯೋಚಿಸಬೇಕು. ಇಡೀ ದೇಶದಲ್ಲಿ ಓಡಾಟ ನಡೆಸಿದಾಗ ಬಿಜೆಪಿ ಹತ್ತು ವರ್ಷದ ಆಡಳಿತ ಜನ ವಿರೋಧಿ ಆಡಳಿತ ಎಂದು ಜನರೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: National Safe Motherhood Day: 35 ವರ್ಷ ನಂತರದ ತಾಯ್ತನದಲ್ಲಿ ಯಾವೆಲ್ಲ ಎಚ್ಚರಿಕೆ ಅಗತ್ಯ?
ಇಂದು ಬಿಜೆಪಿ ಸೋಲಿಸಬೇಕು, ಮತ್ತೆ ಪ್ರಜಾಪ್ರಭುತ್ವ ಉಳಿಸಬೇಕು ಎಂದು ಕಾಂಗ್ರೆಸ್‌ನೊಂದಿಗೆ ಹಲವರು ಕೈ ಜೋಡಿಸುತ್ತಿದ್ದಾರೆ ಎಂದ ಅವರು, ಈ ಹಿಂದೆ ಬಿಜೆಪಿಗರು ಗ್ಯಾರಂಟಿ ಯೋಜನೆ ಜಾರಿಯಾಗುವುದಿಲ್ಲ ಎಂದಿದ್ದರು. ಆದರೆ ಆ ಐದು ಗ್ಯಾರಂಟಿ ಜಾರಿಗೆ ತಂದು ಜನರಿಗೆ ಮುಟ್ಟಿಸಿದ್ದೇವೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ಇಂದು ಜನರು ನೆಮ್ಮದಿಯಿಂದ ಬದುಕುವಂತೆ ಕಾಂಗ್ರೆಸ್ ಮಾಡಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿದರು.
ಇದನ್ನೂ ಓದಿ: Truong My Lan: ಅಬ್ಬಾ, 1 ಲಕ್ಷ ಕೋಟಿ ರೂ. ವಂಚನೆ; ಖ್ಯಾತ ಮಹಿಳಾ ಉದ್ಯಮಿಗೆ ಗಲ್ಲು ಶಿಕ್ಷೆ!
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಮಾಜಿ ಸೇವಾದಳ ಮುಖ್ಯಸ್ಥ ಶಂಕರ ಗೌಡ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಆರ್.ಎಚ್.ನಾಯ್ಕ, ರವಿ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.