Site icon Vistara News

Uttara Kannada News: ಪಕ್ಷದ್ರೋಹಿ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆಗೆ ಆಗ್ರಹ

MLA Shivaram Hebbar should resign immediately MLC Shantharama Siddi demands

ಯಲ್ಲಾಪುರ: ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ಅವರು ತಲಾಖ್ ಸಂಸ್ಕೃತಿಯನ್ನು ಅನುಸರಿಸುತ್ತಿದ್ದು, ಯಾರನ್ನು ಅಪ್ಪಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದನ್ನು ತಿಳಿಯದಾಗಿದ್ದಾರೆ. ಅತ್ತ ಕಾಂಗ್ರೆಸ್ ಹೋಗದೆ, ಇತ್ತ ಬಿಜೆಪಿಯಲ್ಲಿ ಇರದೇ, ಎರಡೂ ಪಕ್ಷಗಳಿಗೂ ಹಾಗೂ ಕಾರ್ಯಕರ್ತರಿಗೂ ಗೊಂದಲ ಮೂಡಿಸಿದ್ದು, ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪಕ್ಷದ ಪರವಾಗಿ ಆಗ್ರಹಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ (Uttara Kannada News) ತಿಳಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಬೇಕಿದ್ದರೆ ಕಾಂಗ್ರೆಸ್ ಅಥವಾ ಬಿಜೆಪಿಯಲ್ಲಿರಬೇಕು. ಎರಡೂ ಬೇಡದಿದ್ದರೆ ಮನೆಯಲ್ಲಿರಬಹುದು. ಅದನ್ನು ಬಿಟ್ಟು ಮೋಸದ ರಾಜಕೀಯವನ್ನು ಮಾಡಬಾರದು ಎಂದು ಆರೋಪಿಸಿದ ಅವರು, ಯಲ್ಲಾಪುರ ಮುಂಡಗೋಡ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಇಲ್ಲಿ ವ್ಯಕ್ತಿ ಆಧಾರಿತ ಚುನಾವಣೆ ಮಾಡುವ ಪ್ರಮೇಯ ಬರುವುದಿಲ್ಲ. ಸಂಘಟನೆಯನ್ನು ಬೆಳೆಸುವ ಉದ್ದೇಶದಿಂದ ಇರುವ ಕಾರ್ಯಕರ್ತರೆಲ್ಲ ಇನ್ನೂ ಪಕ್ಷದಲ್ಲಿಯೇ ಇದ್ದಾರೆ. ಅಧಿಕಾರವನ್ನು ಅರಸಿ ಬಂದವರೆಲ್ಲ ಪಕ್ಷದಿಂದ ಹೊರ ನಡೆದಿದ್ದಾರೆ. ಇನ್ನು ಮುಂದೆ ಎಲ್ಲಾ ಚುನಾವಣೆಯಲ್ಲೂ ಕಾರ್ಯಕರ್ತರು ಇದೇ ರೀತಿ ಕಾರ್ಯ ನಿರ್ವಹಿಸಿ, ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಇದನ್ನೂ ಓದಿ: Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ದೇಶವನ್ನು ಕಟ್ಟಲು ಬಿಜೆಪಿಯ ಕೊಡುಗೆ ಅಪಾರ. ಇಂತಹ ನಾಯಕತ್ವಕ್ಕೆ ಹಾಗೂ ಪಕ್ಷಕ್ಕೆ ಯಲ್ಲಾಪುರದ ಶಾಸಕರು ಮೋಸ ಮಾಡಿದ್ದಾರೆ. ಪಕ್ಷ ಅವರನ್ನು ಅತ್ಯಂತ ಗೌರವದಿಂದ ನೋಡಿಕೊಂಡಿದೆ. ಆದರೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬಂತೆ, ಬಿಜೆಪಿ ಪಕ್ಷದ ಪ್ರತಿನಿಧಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮಾಡಿರುವುದನ್ನು ಯಲ್ಲಾಪುರ ಮಂಡಲ ಖಂಡಿಸುತ್ತದೆ. ಅವರ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತದ ಅಂತರದಿಂದ ನಮ್ಮ ಅಭ್ಯರ್ಥಿ ಕಾಗೇರಿ ಅವರು ಜಯ ಸಾಧಿಸಿದ್ದಾರೆ. ಹಿಂದಿನ ಎಲ್ಲಾ ಚುನಾವಣೆಯನ್ನು ಕಾರ್ಯಕರ್ತರ ಆಧಾರದ ಮೇಲೆ ಗೆಲ್ಲುತ್ತಾ ಬಂದಿದ್ದು, ಮುಂದೆಯೂ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಶಾಸಕರು ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಇದನ್ನೂ ಓದಿ: Gold Rate Today: ರಾಜಧಾನಿಯಲ್ಲಿ ಏರಿಳಿಯದ ಬಂಗಾರದ ಬೆಲೆ; ಇಂದಿನ ದರಗಳು ಹೀಗಿವೆ

ಈ ಸಂದರ್ಭದಲ್ಲಿ ಪ್ರಮುಖರಾದ ಉಮೇಶ ಭಾಗ್ವತ್, ಪ.ಪಂ. ಸದಸ್ಯೆ ಶ್ಯಾಮಿಲಿ ಪಾಟನಕರ್, ಸೋಮೇಶ್ವರ ನಾಯ್ಕ, ಶ್ರೀನಿವಾಸ್ ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್, ಜಿಲ್ಲಾ ಕಾರ್ಯಕಾರಣಿ ಸದಸ್ಯ ವೆಂಕಟ್ರಮಣ ಬೆಳ್ಳಿ, ನಾಗರಾಜ್, ಅರ್ಜುನ್ ಬೆಂಡಿಗೇರಿ, ರವಿ ದೇವಡಿಗ, ಬಜ್ಜು ಪಿಂಗಳೆ, ರಾಘವೇಂದ್ರ ಭಟ್, ಗಣೇಶ ಹೆಗಡೆ ಹಾಗೂ ಕಾರ್ಯಕರ್ತರು ಉಪ್ಥಿತರಿದ್ದರು.

Exit mobile version