Site icon Vistara News

Monkey Pox: ಸಿದ್ದಾಪುರದಲ್ಲಿ ಮಂಗನಕಾಯಿಲೆಗೆ ಮಹಿಳೆ ಬಲಿ

Woman dies of monkey disease in Siddapura

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜಿಡ್ಡಿಯಲ್ಲಿ ಮಂಗನಕಾಯಿಲೆಗೆ (Monkey Pox) ಮೊದಲ ಬಲಿಯಾಗಿದೆ. ತೀವ್ರ ಅನಾರೋಗ್ಯದಿಂದ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಜಿಡ್ಡಿಯ 65 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಸಿದ್ದಾಪುರವು ಮಂಗನಕಾಯಿಲೆಯ ಹಾಟ್ ಸ್ಪಾಟ್ ಆಗಿದ್ದು, ಮಲೆನಾಡಿನಲ್ಲಿ ಆತಂಕ ಮನೆ ಮಾಡಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 43 ಮಂಗನಕಾಯಿಲೆಯ ಪ್ರಕರಣಗಳು ಪತ್ತೆಯಾಗಿದೆ. ಎಲ್ಲಾ ಪ್ರಕರಣಗಳು ಸಿದ್ದಾಪುರ ತಾಲೂಕಿನಲ್ಲೇ ಕಾಣಿಸಿಕೊಂಡಿದೆ.

ಲಸಿಕೆಯೇ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಲಸಿಕೆಯನ್ನು ಬಂದ್ ಮಾಡಲಾಗಿತ್ತು. ಒಂದೆಡೆ ಸರ್ಕಾರವು ಯಾವುದೇ ಪರ್ಯಾಯ ಲಸಿಕೆ ಸೂಚಿಸದ ಮೌನವಹಿಸಿದ್ದರೆ, ಮತ್ತೊಂದೆಡೆ ಮಂಗನಕಾಯಿಲೆ ಹೆಚ್ಚಾಗುತ್ತಲೇ ಇದೆ.

ಇದನ್ನೂ ಓದಿ: Kyasanur Forest Disease: ಮಂಗನ ಕಾಯಿಲೆ ಲಕ್ಷಣಗಳೇನು? ಇದರಿಂದ ಪಾರಾಗುವುದು ಹೇಗೆ?

ಏನಿದು ಮಂಗನ ಕಾಯಿಲೆ?

ಮಂಗನ ಕಾಯಿಲೆ ವೈರಾಣು (Kyasanur Forest Disease) ಸೋಂಕಿತ ಉಣ್ಣೆ ಮರಿಗಳು (ನಿಂಫ್‌) ಕಚ್ಚುವುದರಿಂದ ಹರಡುವ ವೈರಲ್‌ ಜ್ವರವಾಗಿದೆ. ಈ ಕಾಯಿಲೆಯು ಸಾಮಾನ್ಯವಾಗಿ ನವೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ಕಂಡು ಬರುತ್ತದೆ. ಹಠಾತ್‌ ಜ್ವರ, ಶರೀರದಲ್ಲಿ ತೀವ್ರವಾದ ಸ್ನಾಯುಗಳ ನೋವು, ತಲೆನೋವು ಬರುವುದು ಇದರ ರೋಗ ಲಕ್ಷಣಗಳಾಗಿವೆ. ಮಂಗನ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಕೆಎಫ್‌ಡಿ ಪೀಡಿತ 12 ಜಿಲ್ಲೆಗಳಿದ್ದು, ಈ ವರ್ಷದಲ್ಲಿ ಮೂರು ಜಿಲ್ಲೆಗಳಲ್ಲಿ ಮಾತ್ರ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಜನವರಿ 1 ರಿಂದ ಫೆ. 22 ರವರೆಗೆ ರಾಜ್ಯದಲ್ಲಿ 4,359 ಕೆಎಫ್‌ಡಿ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 110 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ 81 ಮಂದಿ ಗುಣಮುಖರಾಗಿದ್ದರೆ, ಇಬ್ಬರು ಮೃತಪಟ್ಟಿದ್ದಾರೆ. 27 ಸಕ್ರಿಯ ಪ್ರಕರಣಗಳಿವೆ. ಶಿವಮೊಗ್ಗದಲ್ಲಿ 37 , ಉತ್ತರ ಕನ್ನಡ 43 ಹಾಗೂ ಚಿಕ್ಕಮಗಳೂರಲ್ಲಿ 30 ಪ್ರಕರಣಗಳು ವರದಿಯಾಗಿವೆ. ಒಟ್ಟು 110 ಮಂದಿಯಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದ್ದು, ಈ ಪೈಕಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ತಲಾ 1 ಸಾವಾಗಿತ್ತು. ಇದೀಗ ಉತ್ತರ ಕನ್ನಡದಲ್ಲಿ ಮೊದಲ ಬಲಿಯಾಗಿದೆ. ಈ ಮೂಲಕ ಮಂಗನಕಾಯಿಲೆಗೆ ಈವರೆಗೆ ಮೂವರು ಮೃತಪಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version