Site icon Vistara News

Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!

Karwar TUNNEL ROUTE

ಕಾರವಾರ: ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ (National Highway 66 in Karwar) ಸುರಂಗ ಮಾರ್ಗದಲ್ಲಿ (Karwar Tunnel Route) ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಅನುಮತಿ ನೀಡಿದೆ. ಅಕ್ಟೋಬರ್ 2ಕ್ಕೆ ನಿಗದಿಯಾಗಿದ್ದ ಸುರಂಗ ಮಾರ್ಗದ (Subway of Karwar) ತಾಂತ್ರಿಕ ತಪಾಸಣೆ (Technical Inspection) ಅ.8ಕ್ಕೆ ನಡೆಯಲಿದ್ದು ಟನಲ್ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ನೀಡುವಂತೆ ಜನಸಾಮಾನ್ಯರಿಂದ ಸಾಕಷ್ಟು ಒತ್ತಡ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಯುವವರೆಗೆ ಈ ಮಾರ್ಗದಲ್ಲಿ ಯಾವುದೇ ಅವಘಡಗಳು ಸಂಭವಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (National Highways Authority of India) ಯೋಜನಾ ನಿರ್ದೇಶಕರೇ ಹೊಣೆಯಾಗಲಿದ್ದಾರೆ ಎನ್ನುವ ಷರತ್ತಿನ ಮೇರೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅ.2ರ ಸಂಜೆಯಿಂದಲೇ ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಅನುಮತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದಿಂದ ಬಿಣಗಾದವರೆಗೆ ನಿರ್ಮಿಸಲಾಗಿರುವ ಸುರಂಗ ಮಾರ್ಗದಲ್ಲಿ (Tunnel from Karwar to Binaga) ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತಿದುದರಿಂದ, ಸುರಕ್ಷತೆಯ ಕಾರಣಕ್ಕೆ ಸಂಚಾರವನ್ನು ನಿಷೇಧಿಸಲಾಗಿತ್ತು. ರಿಪೇರಿ ಕಾರ್ಯ ಕೈಗೊಂಡ ಬಳಿಕ ಖಾಸಗಿ ಸಂಸ್ಥೆಯಿಂದ ಟನಲ್ ತಪಾಸಣೆ ಕೈಗೊಂಡು ದೃಢತೆ ಪ್ರಮಾಣಪತ್ರ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿತ್ತು.

ಫಿಟ್ನೆಸ್‌ ಪ್ರಮಾಣ ಪತ್ರ ಸಲ್ಲಿಕೆ ಆಗಿಲ್ಲ

ಎರಡು ತಿಂಗಳು ಕಳೆದರೂ ಸಹ ಎನ್‌ಎಚ್ಎಐ ಅಥವಾ ಐಆರ್‌ಬಿ ಕಂಪೆನಿ ಫಿಟ್ನೆಸ್ ಪ್ರಮಾಣಪತ್ರವನ್ನು (Fitness Certificate_ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಟನಲ್‌ ಅನ್ನು ಸಂಚಾರಕ್ಕೆ ಮುಕ್ತಗೊಳಿಸಿರಲಿಲ್ಲ. ಟನಲ್ ಸಂಚಾರಕ್ಕೆ ಆಗ್ರಹಿಸಿ ಸೆಪ್ಟೆಂಬರ್ 29ರಂದು ಎಂಎಲ್‌ಸಿ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದ್ದು, ಇದಾದ ಬಳಿಕ ಅ.2 ರಂದು ತಾಂತ್ರಿಕ ತಪಾಸಣೆಯನ್ನು (Technical Inspection) ತಜ್ಞರಿಂದ ಮಾಡಿಸಿ ಸಂಚಾರಕ್ಕೆ ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಕಾರಣಾಂತರಗಳಿಂದ ತಪಾಸಣೆಯನ್ನು ಅ.8ರಂದು ನಿಗದಿಪಡಿಸಲಾಗಿದೆ.

ಸವಾರರ ಅನುಕೂಲಕ್ಕಾಗಿ ಷರತ್ತುಬದ್ಧ ಅನುಮತಿ

ತಪಾಸಣೆ ಕಾರ್ಯದ ವಿಳಂಬದಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ, ಕಾರವಾರದಿಂದ ಬಿಣಗಾಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಮನವಿ ಮಾಡಿದ್ದರು. ಈ ಹಿನ್ನೆಲೆ ಟನಲ್ ಸಂಚಾರದ ನಿರ್ಬಂಧ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.8ರ ವರೆಗೆ ಸುರಂಗ 1 ಮತ್ತು 2ರಲ್ಲಿ ಉಂಟಾಗುವ ಯಾವುದೇ ಅನಾಹುತಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೇ ಜವಾಬ್ದಾರರಾಗಿದ್ದಾರೆ. ಅ.8 ರಂದು ತಪಾಸಣೆ ಕೈಗೊಳ್ಳುವ ಜವಾಬ್ದಾರಿ ಯೋಜನಾ ನಿರ್ದೇಶಕರದ್ದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಯಾವುದೇ ಪತ್ರ ವ್ಯವಹಾರ ನಡೆಸಲಾಗುವುದಿಲ್ಲ ಎನ್ನುವ ನಿಬಂಧನೆಯನ್ನು ಹಾಕಿ ಜಿಲ್ಲಾಡಳಿತ ಆದೇಶ ಹೊರಡಿಸಿ, ಟನಲ್ ಸಂಚಾರ ಆರಂಭಕ್ಕೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: BK Hariprasad : ಹೈಕಮಾಂಡ್‌ಗೆ ನನ್ನ ಮೇಲೆ ಲವ್ ಜಾಸ್ತಿ; ನಾನೇನು ಮಾತನಾಡಲ್ಲ, ಮಾತನಾಡಿದ್ರೆ ನೋಟಿಸ್‌ ಕೊಡ್ತಾರೆ!

ಎರಡೂ ಬದಿ ಟನಲ್‌ ಮಾರ್ಗ ಸಂಚಾರ ಮುಕ್ತ

ಟನಲ್ ಸಂಚಾರ ಆರಂಭಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಕಾರವಾರ ಸಂಚಾರಿ ಠಾಣಾ ಪೊಲೀಸರು ಟನಲ್‌ಗೆ ಅಡ್ಡಲಾಗಿ ಹಾಕಲಾಗಿದ್ದ ಕಲ್ಲುಗಳನ್ನು ಐಆರ್‌ಬಿಯ ಜೆಸಿಬಿ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬೆಳಗಿನ ವೇಳೆ ಒಂದು ಬದಿ ಟನಲ್‌ನಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಎರಡೂ ಟನಲ್‌ಗಳೂ ಸಹ ಸಂಚಾರಕ್ಕೆ ಮುಕ್ತವಾಗುವ ಮೂಲಕ ಸಾಕಷ್ಟು ದಿನಗಳಿಂದ ಹೋರಾಟ, ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೂ ಕಾರಣವಾಗಿದ್ದ ಟನಲ್ ಸಂಚಾರ ನಿರ್ಬಂಧ ಪ್ರಕರಣ ಸುಖಾಂತ್ಯ ಕಂಡಂತಾಗಿದೆ.

Exit mobile version