ಸಿದ್ದಾಪುರ: ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಸ್ತ್ರೀವೇಷಧಾರಿ ಮೂರೂರಿನ ವಿಷ್ಣು ಗಜಾನನ ಭಟ್ (65) ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿಯ ಶ್ರೀರಾಮದೇವ ಮಠದಲ್ಲಿ ಭಾನುವಾರ ನಿಧನರಾದರು.
ಮೂಲತಃ ಕುಮಟಾ ತಾಲೂಕಿನ ಮೂರೂರಿನವರಾದ ಅವರು ಕಳೆದ ಮೂರು ವರ್ಷದಿಂದ ಭಾನ್ಕುಳಿ ಮಠದಲ್ಲಿ ಪುತ್ರನೊಂದಿಗೆ ವಾಸವಾಗಿದ್ದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ. ಗುಂಡುಬಾಳ, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಶಿರಸಿ, ಪೆರ್ಡೂರು, ಮಂದಾರ್ತಿ, ಸಾಲಿಗ್ರಾಮ, ಪೂರ್ಣಚಂದ್ರ ಮತ್ತಿತರ ಯಕ್ಷಗಾನ ಮೇಳದಲ್ಲಿ ನಾಲ್ಕು ದಶಕಗಳ ಕಾಲ ಕಲಾಸೇವೆ ಗೈದಿದ್ದಾರೆ.
ದಾಕ್ಷಾಯಿಣಿ, ಸೀತೆ, ಅಂಬೆ, ಚಂದ್ರಮತಿ, ದಮಯಂತಿ ಮುಂತಾದ ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಅಭಿನಯಿಸಿ ಕಲಾಸಕ್ತರ ಮನೆಮಾತಾಗಿದ್ದರು. ತಮ್ಮ ಭಾವ ಪೂರ್ಣ ಅಭಿನಯ, ಮಾತುಗಾರಿಕೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು.ಯಕ್ಷಗಾನ ಕಲಾರಂಗ ಪ್ರಶಸ್ತಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಇದನ್ನೂ ಓದಿ | Heart attack : ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ ಸಮಾಜ ಸೇವಕ ಹೃದಯಾಘಾತದಿಂದ ಸಾವು
ವಿಷ್ಣುಭಟ್ ಅವರ ಅಂತ್ಯ ಸಂಸ್ಕಾರ ಭಾನ್ಕುಳಿಮಠದ ಶಂಕರಗಿರಿಯಲ್ಲಿ ಭಾನುವಾರ ನಡೆಯಿತು. ಮಠದ ಪ್ರಮುಖರಾದ ಆರ್.ಎಸ್.ಹೆಗಡೆ ಹರಗಿ, ಎಂ.ಜಿ.ರಾಮಚಂದ್ರನ್, ಮಹೇಶ ಭಟ್ಟ ಚಟ್ನಳಳಿ, ಶಾಂತಾರಾಮ ಹಿರೇಮನೆ, ಎಂ.ಎ. ಹೆಗಡೆ ಮಗೇಗಾರ ಸೇರಿದಂತೆ ಮಠದ ಶಿಷ್ಯವೃಂದದವರಿದ್ದರು.
ಇದನ್ನೂ ಓದಿ | ತಾತಯ್ಯ ತತ್ವಾಮೃತಂ: ಭಕ್ತ ಜನರಿಗೆ ಯಾತರ ಭಯವೂ ಇಲ್ಲ
ವಿಷ್ಣು ಭಟ್ ಅವರ ನಿಧನಕ್ಕೆ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ, ಯಕ್ಷಚಂದನ ದಂಟಕಲ್, ಕಲಾಭಾಸ್ಕರ ಇಟಗಿ, ಸರಸ್ವತಿ ಕಲಾ ಟ್ರಸ್ಟ್ ಹೊಸಗದ್ದೆ ಸಂಘಟನೆ, ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ, ಸ್ತ್ರೀವೇಷಧಾರಿ ಭಾಸ್ಕರ ಜೋಶಿ ಶಿರಳಗಿ, ಮಹಾಬಲೇಶ್ವರ ಇಟಗಿ ಸೇರಿದಂತೆ ಅನೇಕ ಯಕ್ಷಗಾನ ಕಲಾವಿದರು, ಗಣ್ಯರು ಕಂಬನಿ ಮಿಡಿದಿದ್ದಾರೆ.
ವಿಷ್ಣುಭಟ್ ಯಕ್ಷರಂಗದ ಮೇರು ಕಲಾವಿದ: ರಾಘವೇಶ್ವರ ಸ್ವಾಮೀಜಿ
ಗೋಕರ್ಣ: ಯಕ್ಷರಂಗದ ಅಪೂರ್ವ ಕಲಾವಿದ, ಶ್ರೀಮಠದ ಜತೆ ನಿಕಟ ಸಂಪರ್ಕ ಹೊಂದಿದ್ದ ವಿಷ್ಣು ಭಟ್ ಮೂರೂರು (Vishnu Bhat) ನಿಧನಕ್ಕೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಯಕ್ಷಗಾನ ರಂಗಭೂಮಿಯಲ್ಲಿ ವಿಷ್ಣು ಭಟ್ ತಮ್ಮ ಭಾವಪೂರ್ಣ ಅಭಿನಯ, ಪಾರಂಪರಿಕ ನೃತ್ಯ, ಜತೆಗೆ ಆಳವಾದ ಪೌರಾಣಿಕ ಜ್ಞಾನ- ಈ ಗುಣಗಳಿಂದ ಪೌರಾಣಿಕ ಪಾತ್ರಗಳಿಗೆ ವಿಶೇಷ ಮೆರುಗು ತಂದುಕೊಟ್ಟ ಒಬ್ಬ ಶ್ರೇಷ್ಠ ಕಲಾವಿದರಾಗಿದ್ದರು. ಶ್ರೀಸಂಸ್ಥಾನದವರ ವಿಶೇಷ ಪ್ರೀತಿಗೆ ಭಾಜನರಾಗಿದ್ದ ಅವರು ಶ್ರೀಮಠದ ರಾಮಕಥೆಯ ರೂಪಕಗಳಲ್ಲಿ ಪ್ರಮುಖ ಕಲಾವಿದರಾಗಿ ಭಾಗವಹಿಸಿ ಅಪಾರ ಜನಮನ್ನಣೆ ಗಳಿಸಿದ್ದರು ಎಂದು ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.
ಸುಮಾರು 45 ವರ್ಷಗಳ ಕಾಲ ಯಕ್ಷರಂಗದಲ್ಲಿ ವೈವಿಧ್ಯಮಯ ಪಾತ್ರಗಳ ನಿರ್ವಹಣೆ ಹಾಗೂ ಸಮಯೋಚಿತ ಮಾತುಗಾರಿಕೆಯಿಂದ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆದವರು. ಧಾರ್ಮಿಕರಾಗಿ ಶ್ರೀಮಠದ ಶ್ರೀ ಪರಿವಾರದಲ್ಲಿ ಕಾರ್ಯ ನಿರ್ವಹಿಸಿದ ಧನ್ಯತೆ ಅವರದ್ದು. ಬಹುಕಾಲ ಬಾನ್ಕುಳಿ ಶ್ರೀ ರಾಮದೇವ ಮಠದಲ್ಲಿನ ಗೋಸ್ವರ್ಗದಲ್ಲಿ ಗೋಸೇವೆ ಮಾಡುತ್ತಾ ಸಮಾಜಸೇವೆಯಲ್ಲೂ ತೊಡಗಿಕೊಂಡವರು ಎಂದು ತಿಳಿಸಿದ್ದಾರೆ.
ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರತಿಕ್ರಿಯಿಸಿ, ವಿಷ್ಣು ಭಟ್ ಅವರಿಗೆ ಸಮಾಜದ ಹಲವು ಗೌರವಗಳು ಸಂದಿರುವುದರ ಜತೆಯಲ್ಲಿ ಶ್ರೀಪರಿವಾರದ ಸನ್ಮಾನವೂ ದೊರೆತಿದ್ದನ್ನು ಸ್ಮರಿಸಿಕೊಳ್ಳುತ್ತಾ ಅವರಿಗೆ ಭಗವಂತ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಭಾವಪುಷ್ಟಿಯನ್ನು, ರಸನಿಷ್ಠತೆಯನ್ನು ಕಾಪಾಡಿಕೊಂಡ ಯಕ್ಷಗಾನ ಪರಂಪರೆಯ ಬಹುಮುಖ್ಯ ಕೊಂಡಿಯೊಂದು ಕಳಚಿದಂತಾಗಿದೆ. ಹಲವರ ಪ್ರಭಾವಕ್ಕೆ ಒಳಗಾಗಿಯೂ ತನ್ನತನವನ್ನು ಕಾಪಾಡಿಕೊಂಡ ನೈಜ ಕಲಾವಿದ ಎಂದು ಕಂಬನಿ ಮಿಡಿದಿದ್ದಾರೆ.