ಕಾರವಾರ/ ಉಡುಪಿ: ಕರಾವಳಿ ಕರ್ನಾಟಕದ (Coastal Karnataka) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮುಂಜಾನೆಯಿಂದ ಧಾರಾಕಾರ ಮಳೆ (Heavy Rain) ಸುರಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಸ್ತುಶಃ ವರುಣಾರ್ಭಟ (Rain News) ಕಂಡುಬಂದಿದೆ. ಶಿವಮೊಗ್ಗ ಭಾಗದಲ್ಲೂ ಮಳೆ ಸುರಿದಿದೆ.
ಉತ್ತರಕನ್ನಡ ಕರಾವಳಿಯಲ್ಲಿ ದಿಢೀರ್ ವರುಣನ ಆರ್ಭಟ ಕಾಣಿಸಿಕೊಂಡಿದ್ದು ಕಾರವಾರದಲ್ಲಿ ಬೆಳಿಗ್ಗೆಯಿಂದ ಧಾರಾಕಾರವಾಗಿ ಸುರಿಯುತ್ತಿದೆ.
ಬೆಳಗ್ಗೆಯೇ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಸಿಲಿಗೆ ಕಾದಿದ್ದ ಇಳೆಗೆ ವರುಣ ತಂಪೆರೆದಿದ್ದು ಒಂದು ಕಡೆಯಾದರೆ, ಶಾಲೆ, ಕೆಲಸಕ್ಕೆ ತೆರಳುವವರಿಗೆ ತೊಂದರೆಯಾಗಿದೆ.
ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಬುಧವಾರದಿಂದಲೇ ಮೋಡ ಕವಿದ ವಾತಾವರಣ ಇತ್ತು. ಘಟ್ಟದ ಮೇಲಿನ ಕೆಲವು ತಾಲೂಕುಗಳಲ್ಲಿ ಮಳೆಯ ಸಿಂಚನವಾಗಿದೆ. ಕಾರವಾರ, ಅಂಕೋಲಾ ಸೇರಿ ಹಲವು ತಾಲ್ಲೂಕುಗಳಲ್ಲಿ ಎಲ್ಲ ಕಡೆ ಮಳೆಯ ವಾತಾವರಣ ಇದೆ.
ಉಡುಪಿ ಉಡುಪಿಯಲ್ಲಿ ರಾತ್ರಿಯಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಉಡುಪಿ, ಬೈಂದೂರು- ಹೆಬ್ರಿಯಲ್ಲಿ ವರ್ಷಧಾರೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಲವು ಕಡೆಗಳಲ್ಲಿ ಮಳೆ ಬಿದ್ದಿದೆ. ಭಾರಿ ಪ್ರಮಾಣದ ಗಾಳಿಯೂ ಕಾಣಿಸಿಕೊಂಡಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ಇಲ್ಲಿ ಸ್ವಲ್ಪ ನೆಮ್ಮದಿ ಕಂಡುಬಂದಿದೆ. ಈ ಬಾರಿ ಮಳೆ ಇಲ್ಲದೆ ಈಗಾಗಲೇ ಬಾವಿ ಕೆರೆಗಳಲ್ಲಿ ನೀರು ಕಡಿಮೆಯಾಗಿದೆ, ಅದರ ನಡುವೆ ಮಳೆ ಬಿದ್ದಿರುವುದು ಸ್ವಲ್ಪ ಮಟ್ಟಿಗೆ ನಿರಾಳತೆ ನೀಡಿದೆ. ಅದರಲ್ಲೂ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪಿನ ಅನುಭವವಾಗಿದೆ.
ಮಲೆನಾಡಿನಲ್ಲಿ ಮೊದಲ ಮಳೆ ಹನಿ
ರಿಪ್ಪನ್ ಪೇಟೆ : ಪ್ರಸ್ತುತ ಬೆಳಗಿನಜಾವ ಮೈ ಕೊರೆಯುವಂತೆ ಚಳಿ ಕಾಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಿರು ಬಿಸಿಲು ಬರುತ್ತದೆ. ಇದರ ಮಧ್ಯೆ ಬುಧವಾರ ರಾತ್ರಿ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯುವ ಮೂಲಕ ಈ ವರ್ಷದ ಮೊದಲ ಮಳೆ ಹನಿ ಭೂಮಿಯನ್ನು ಸ್ಪರ್ಶಿಸಿ ಅಚ್ಚರಿ ಮೂಡಿಸಿದ್ದು, ಬೇಸಿಗೆಯ ಜಳಕ್ಕೆ ಬೇಸತ್ತಿದ್ದ ಜನರು ಮಳೆ ಸುರಿದು ವಾತಾವರಣ ತಂಪಾದ ಕಾರಣ ಖುಷಿಗೊಂಡಿದ್ದಾರೆ.
ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ತಡರಾತ್ರಿ 2:30ರ ಸುಮಾರಿಗೆ ಹೊಸನಗರ ತಾಲೂಕಿನ ಹಲವೆಡೆ ಆರಂಭವಾದ ಮಳೆ ಹೊಸನಗರ, ನಗರ, ನಿಟ್ಟೂರು, ರಿಪ್ಪನ್‌ಪೇಟೆ, ಹುಂಚ, ಕೋಡೂರು, ಗರ್ತಿಕೆರೆ ಭಾಗಗಳಲ್ಲಿ ಸುರಿದಿದೆ. ಇಂದು ಬೆಳಗ್ಗೆ ಸಹ ಮೋಡ ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆ ಬೀಳುತ್ತಿದೆ.
ಇನ್ನೂ ಕಾಫಿ, ಕಾಳುಮೆಣಸು, ಅಡಿಕೆ, ಭತ್ತದ ಫಸಲು ಕಟಾವು ಕಾರ್ಯ ನಡೆಯುತ್ತಿದ್ದು ಒಂದೆಡೆ ಮಳೆ ವರವಾದರೆ ಮತ್ತೊಂದೆಡೆ ಶಾಪವಾಗಿ ಪರಿಣಮಿಸಿದೆ.
ಹವಾಮಾನ ಇಲಾಖೆ ಏನು ಹೇಳಿತ್ತು?
ಜ.3 ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಮೈಸೂರು ಮತ್ತು ಮಲೆನಾಡಿನ ಹಾಸನ, ಕೊಡಗಿನಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿತ್ತು.
ಜ.4ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಹಲವು ಕಡೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರಲ್ಲಿ ಅಲ್ಲಲ್ಲಿ ಮಳೆ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗಿನಲ್ಲಿ ಮಳೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಜ.5ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಾತ್ರ ವರ್ಷಧಾರೆ ಇರಲಿದೆ. ಮಲೆನಾಡಿನ ಕೊಡಗು, ಹಾಸನ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಮೈಸೂರು, ತುಮಕೂರಲ್ಲಿ ಮಳೆ ಸಾಧ್ಯತೆ ಇದೆ. ಉಳಿದಂತೆ ಜನವರಿ 6, 7 ಮತ್ತು 8, 9 ರವರೆಗೆ ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ.