ಯಲ್ಲಾಪುರ: ಪಟ್ಟಣದ ಕೆಬಿ ರಸ್ತೆಯ ಶಾನಭಾಗ ಹೋಟೆಲ್ ಬಳಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಓರ್ವನ ಸ್ಥಿತಿ ಗಂಭೀರವಾಗಿದೆ.
ಮೃತ ಯುವಕರನ್ನು ತಾಲೂಕಿನ ಹುಣಶೆಟ್ಟಿಕೊಪ್ಪದ ರಾಜು (16) ಹಾಗೂ ರಾಮನಕೊಪ್ಪದ ದರ್ಶನ ಭಂಡಾರಿ (16) ಎಂದು ಗುರುತಿಸಲಾಗಿದೆ. ಸವಾರ ಜಾಬೀರ್ (17) ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೈಕ್‌ನಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದ ಸವಾರರು, ಹೋಟೆಲ್ ಮುಂಭಾಗದಲ್ಲಿ ರಸ್ತೆಯಲ್ಲಿ ತಿರುಗುತ್ತಿದ್ದ ಕಾರನ್ನು ತಪ್ಪಿಸಲು ಹೋಗಿದ್ದಾರೆ. ಆಗ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ಇನ್ನೋವಾ ಕಾರಿನ ಹಿಂಭಾಗಕ್ಕೆ ಗುದ್ದಿದ್ದಾರೆ. ಅಪಘಾತದ ತೀವ್ರತೆಯಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಇನ್ನೊಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Mysore dasara : ನಾಡಹಬ್ಬ ದಸರಾ ಕವಿಗೋಷ್ಠಿಯಿಂದ ಪ್ರೊ. ಕೆ.ಎಸ್. ಭಗವಾನ್‌ಗೆ ಕೊಕ್!
ಹೊಸಕಂಬಿಯ ಹಳ್ಳದಲ್ಲಿ ನಾಪತ್ತೆ
ಅಂಕೋಲಾ: ಪ್ರವಾಸಕ್ಕೆಂದು ತೆರಳಿದ್ದ ವೇಳೆ ನೀರಿಗೆ ಬಿದ್ದು ನಾಪತ್ತೆಯಾದ ಘಟನೆ ತಾಲೂಕಿನ ಹೊಸಕಂಬಿ ಹಳ್ಳದಲ್ಲಿ ಭಾನುವಾರ ಸಂಜೆ ನಡೆದಿದೆ. ಬೊಬ್ರವಾಡದ ಸುಹಾಸ ಕೃಷ್ಣ (ಪಾಂಡುರಂಗ) ನಾಯ್ಕ (28) ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾದ ಯುವಕ.
ನಡೆದಿದ್ದೇನು?
ಅಂಕೋಲಾದ 15 ಜನರ ಗೆಳೆಯರ ತಂಡ ಹೊಸಕಂಬಿಯ ಹಳ್ಳದ ವಿಹಂಗಮ ಪ್ರದೇಶದಲ್ಲಿ ಪಾರ್ಟಿ ಮಾಡಲೆಂದು ತೆರಳಿದ್ದರು. ಈ ವೇಳೆ ಚಿಪ್ಪೆಕಲ್ಲನ್ನು ಆರಿಸಲು ಸುಹಾಸ ನಾಯ್ಕ ಗೆಳಯನೊಂದಿಗೆ ಇನ್ನೊಂದು ಬದಿಗೆ ನೀರಿಗೆ ಇಳಿದಿದ್ದ. ಈ ವೇಳೆ ಇಬ್ಬರು ನೀರಿನ ಹರಿವಿಗೆ ಸಿಲುಕಿದ್ದಾರೆ. ಆದರೆ, ಸ್ನೇಹಿತ ಹರಸಾಹಸ ಪಟ್ಟು ದಡ ಸೇರಿದ್ದಾನೆ. ಸುಹಾಸನಿಗೆ ಮಾತ್ರ ಈಜಲಾಗದೇ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ.
ಸುಹಾಸನ ಪತ್ತೆಗೆ ಆತನ ಗೆಳೆಯರು ಮತ್ತು ಅಗ್ಬಿಶಾಮಕ ದಳದ ಸಿಬ್ಬಂದಿ ಶ್ರಮಿಸಿದ್ದಾರೆ. ಸಿಪಿಐ ಸಂತೋಷ ಶೆಟ್ಟಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪಾರ್ಟಿಗೆ ತೆರಳಿದ್ದ ಗೆಳಯರನ್ನು ವಿಚಾರಣೆ ನಡೆಸಿದ್ದಾರೆ.
ಕೆರೆಯಲ್ಲಿ ಈಜಲು ಹೋಗಿ ಕೇರಳ ವಿದ್ಯಾರ್ಥಿ ನೀರು ಪಾಲು
ತುಮಕೂರು: ಮೋಜು ಮಸ್ತಿಗೆ ಬಂದು ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡ ಘಟನೆ ನಗರದ (Tumkur News) ಮೈದಾಳ ಕೆರೆಯಲ್ಲಿ ನಡೆದಿದೆ. ಕೆರೆಯಲ್ಲಿ ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ.
ಬೆಂಗಳೂರಿನ ಎಐಎಂಸ್ ಇನ್‌ಸ್ಟಿಟ್ಯೂಟ್ ಕಾಲೇಜು ವಿದ್ಯಾರ್ಥಿ ನಂದು (20) ಮೃತ ವಿದ್ಯಾರ್ಥಿ. ಕೇರಳದ ತಿರುವನಂತಪುರಂ ಮೂಲದ ಈತ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಸ್ನೇಹಿತರಾದ ಆಶಿಶ್ ಮತ್ತು ತುಷಾರ್ ಜತೆ, ಬೆಂಗಳೂರಿನಿಂದ ತುಮಕೂರಿನ ಬಸದಿ ಬೆಟ್ಟ ನೋಡಲು ಶನಿವಾರ ಬಂದಿದ್ದ. ಬಳಿಕ ಅಲ್ಲೇ ಪಕ್ಕದಲ್ಲಿರುವ ಮೈದಾಳ ಕೆರೆಯಲ್ಲಿ ಈಜಲು ಹೋಗಿದ್ದಾಗ0 ನೀರಿನಲ್ಲಿ ಮುಳುಗಿ ನಂದು ಮೃತಪಟ್ಟಿದ್ದಾನೆ.
ಇದನ್ನೂ ಓದಿ: VISTARA TOP 10 NEWS : ಮೈಸೂರು ದಸರಾಗೆ ಚಾಲನೆ, 3 ಹಮಾಸ್ ಕಮಾಂಡರ್ಗಳ ಹತ್ಯೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಭಾನುವಾರ ಮೈದಾಳ ಕೆರೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.