-ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್
ಶಿರಸಿ: ತೆರೆದ ಚರಂಡಿಯ ದುರಸ್ತಿ ಇಲ್ಲದ ಜತೆಗೆ, ಅಸಮರ್ಪಕ ನಿರ್ವಹಣೆಯಿಂದ ಚರಂಡಿಯ ನೀರು ಬಾವಿಗೆ (Wells) ಸೇರಿ ದಿನ ನಿತ್ಯದ ಬಳಕೆಗೂ ನೀರು ಯೋಗ್ಯವಿಲ್ಲದಿರುವುದರಿಂದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಮರಾಠಿಕೊಪ್ಪದ ವಾರ್ಡ್ ನಂಬರ್ 3ರ ನಿತ್ಯಾನಂದ ಕಾಲೋನಿಯಲ್ಲಿ ತೆರೆದ ಬಾವಿಗೆ ಚರಂಡಿ ನೀರು ಸೇರಿ ಮಲಿನಗೊಳ್ಳುತ್ತಿದ್ದು, ಇಲ್ಲಿನ 8ಕ್ಕೂ ಹೆಚ್ಚು ಬಾವಿಗಳ ನೀರು ದುರ್ನಾತ ಬೀರುತ್ತಿವೆ. ಕೇವಲ ನಿತ್ಯಾನಂದ ಕಾಲೋನಿ ಅಲ್ಲದೆ ವಿವಿಧ ಬಡಾವಣೆಗಳಲ್ಲಿ ಖಾಸಗಿ ಬಾವಿಗಳ ನೀರು ಮಲಿನಗೊಂಡಿದ್ದು, ಕುಡಿಯುವ ನೀರಿಗೆ ಜನರು ನಗರಸಭೆ ಆಶ್ರಯಿಸುವಂತಾಗಿದೆ. ಆದರೆ ವಾರದಲ್ಲಿ ಎರಡೂ ದಿನಗಳಿಗೊಮ್ಮೆ ನಗರಸಭೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ದಿನ ಬಳಕೆಗೆ ಬಾವಿ ನೀರೂ ಯೋಗ್ಯವಿಲ್ಲದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ನಗರದ ಮರಾಠಿಕೊಪ್ಪ, ನಿತ್ಯಾನಂದ ಕಾಲೋನಿ, ಜೋಡುಕಟ್ಟೆ ಈ ಭಾಗದಲ್ಲಿ ತೆರೆದ ಚರಂಡಿಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಚರಂಡಿ ನೀರು ನಿಂತಲ್ಲೆ ನಿಂತು ಚರಂಡಿ ಕೂಡ ಗಬ್ಬು ವಾಸನೆ ಬೀರುತ್ತಿದೆ. ತೆರೆದ ಚರಂಡಿಯಲ್ಲೂ ಕೂಡ ಅಲ್ಲಲ್ಲಿ ಕಂದಕಗಳೂ ನಿರ್ಮಾಣಗೊಂಡಿದ್ದು, ಚರಂಡಿ ನೀರು ಇಂಗುವ ಮೂಲಕ ತೆರೆದ ಬಾವಿಗಳನ್ನು ಸೇರುತ್ತಿವೆ.
ಇದನ್ನೂ ಓದಿ: Winter Sweater Fashion: ಚಳಿಗಾಲದಲ್ಲಿ ಹೀಗಿರಲಿ ವುಲ್ಲನ್ ಸ್ವೆಟರ್ಸ್ ಜೊತೆ ಔಟ್‌ಫಿಟ್ಸ್ ಸ್ಟೈಲಿಂಗ್!
ಇನ್ನು ಮರಾಠಿಕೊಪ್ಪ ರಸ್ತೆಯಲ್ಲಿ ಪೈಪ್ ಅಳವಡಿಸಿ, ಚರಂಡಿ ನೀರನ್ನು ಆ ಮೂಲಕ ನೀರು ಹೊರವಲಯಕ್ಕೆ ಕಳಿಸುವ ಕಾರ್ಯ ನಗರಸಭೆ ಮಾಡಿತ್ತು. ಆದರೆ ಪೈಪ್ ಒಡೆದು ಹೋಗಿದ್ದು, ಸಂಪೂರ್ಣ ನೀರು ತೆರೆದ ಚರಂಡಿಗೆ ಹೋಗುತ್ತಿದೆ. ಅಲ್ಲದೆ ಆ ಚರಂಡಿ ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಕೆಲವೆಡೆ ಕೊಳಚೆ ನೀರು ವರ್ಷಪೂರ್ತಿ ನಿಂತಿರುವ ಸ್ಥಿತಿಯಿದೆ. ಹೀಗಾಗಿ ಕಾಂಕ್ರಿಟ್ ಚರಂಡಿ ಆಗಿದ್ದರೂ ಹಲವೆಡೆ ಕಾಂಕ್ರೀಟ್ ಇಲ್ಲದೆ ತ್ಯಾಜ್ಯ ನೀರು ನೆಲದಲ್ಲಿ ಇಂಗುತ್ತಿವೆ.
ಕೊಳಚೆ ನೀರು ಸುಗಮವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ ಅದು ಬಳಕೆಗೆ ಬಾರದಂತಾಗಿದೆ. ಇದರಿಂದಾಗಿ ಚರಂಡಿ ನೀರು ಭೂಮಿಯಲ್ಲಿ ಇಂಗಿ ಈ ಭಾಗದ ಬಾವಿಗಳ ನೀರು ಸಂಪೂರ್ಣ ಹಾಳಾಗಿದೆ. ಇದರಿಂದ ದುರ್ನಾತ ಹೆಚ್ಚುತ್ತಿದ್ದು, ಸೊಳ್ಳೆಗಳ ಕಾಟವೂ ಮಿತಿಮೀರಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಕೆಲವು ಬಾರಿ ಕಲ್ಮಶಗೊಂಡ ಬಾವಿ ನೀರು ತೆಗೆದು ಹಾಕಿ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಚರಂಡಿ ನೀರು ಮತ್ತೆ ಸೇರಿ ಬಳಕೆಗೆ ಯೋಗ್ಯ ಇಲ್ಲದಂತಾಗುತ್ತಿದೆ. ಹೀಗಾಗಿ ಈ ಭಾಗದ ಬಹುತೇಕ ಬಾವಿಗಳು ನಿಷ್ಪ್ರಯೋಜಕವಾಗಿವೆ.
ಇದನ್ನೂ ಓದಿ: Education News : ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ನಿವಾರಣೆಗೆ ಕ್ರಮ; ನೂತನ ಶಿಕ್ಷಕರ ನಿಯೋಜನೆ
ಎರಡು ವರ್ಷಗಳ ಹಿಂದೆ ಬಾವಿ ನೀರನ್ನು ಉಪಯೋಗಿಸಿದ ಪರಿಣಾಮ ವಾಂತಿ, ಬೇದಿ ಸಮಸ್ಯೆ ಕಾಣಿಸಿಕೊಂಡಿತ್ತು. ಸ್ನಾನಕ್ಕೆ ನೀರು ಬಳಸಿದರೆ ಮೈಕೈ ತುರಿಕೆ ಉಂಟಾಗುವ ಸಮಸ್ಯೆ ಎದುರಾಗುತ್ತದೆ. ಚರಂಡಿಯ ತೀರಾ ಸಮೀಪದ ಬಾವಿಗಳಲ್ಲಿ ಹುಳಗಳಾಗುತ್ತವೆ. ಬಾವಿ ನೀರಿನಲ್ಲಿ ಒಂದು ರೀತಿ ಆಯಿಲ್ ಅಂಶ ಬಂದಂತಾಗುತ್ತಿದೆ. ಹೀಗಾಗಿ ನಗರಸಭೆ ಪೂರೈಸುವ ನೀರನ್ನಷ್ಟೇ ಬಳಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
ನಗರಸಭೆಯಿಂದ ಈ ಭಾಗದ ಎಲ್ಲ ಬಾವಿಗಳ ಸ್ವಚ್ಛತೆ ಮಾಡಿಸಬೇಕು. ಭವಿಷ್ಯದಲ್ಲಿ ಮತ್ತೆ ಹೀಗಾಗದಂತೆ ಚರಂಡಿ ದುರಸ್ತಿ ಮಾಡಿಸಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.
ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದೀರಾ? ಈ ತಂತ್ರ ಅನುಸರಿಸಿ
ಕಳೆದ ಒಂದೂವರೆ ತಿಂಗಳಿಂದ ಈ ಸಮಸ್ಯೆ ಎದುರಾಗಿದ್ದು, ಸಮರ್ಪಕ ಚರಂಡಿ ಇಲ್ಲದಿರುವುದು ಇದಕ್ಕೆಲ್ಲಾ ಕಾರಣವಾಗಿದೆ. ಸುಮಾರು ವರ್ಷದಿಂದ ಬಾವಿ ನೀರನ್ನೇ ನಾವು ಅವಲಂಬಿಸಿದವರು. ಆದರೆ ಈ ಬಾರಿ ಬಾವಿ ನೀರು ಕಲುಷಿತಗೊಂಡಿದ್ದು, ಕುಡಿಯುವ ನೀರಿಗೆ ಆಹಾಕಾರವಾಗಿದೆ. ಈ ಬಗ್ಗೆ ನಗರಸಭೆಗೂ ತಿಳಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ….
-ಕಮಲಾಕರ್ ಭಂಡಾರಿ, ಸ್ಥಳೀಯ ನಿವಾಸಿ
ನಗರೋತ್ಥಾನ ಯೋಜನೆಯಲ್ಲಿ ಚರಂಡಿ ದುರಸ್ಥಿಗೆ ಅನುಮೋದನೆ ದೊರಕಿದೆ. ಈಗಾಗಲೇ ಅಲ್ಲಿನ ಸ್ಥಳೀಯರು ಈ ಕುರಿತ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಅಲ್ಲಿನ ಚಂರಂಡಿ ಸ್ವಚ್ಚಗೊಳಿಸಿಲು ತಿಳಿಸಿದ್ದರು. ಆ ಕಾರ್ಯ ಕೂಡ ಮಾಡಲಾಗಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
-ದೀಪಾ ಮಹಾಲಿಂಗಣ್ಣನವರ್, ನಗರಸಭೆ ಸದಸ್ಯೆ