ಶಿರಸಿ: ನಗರದ ಸಬ್ ಜೈಲಿನಿಂದ (Sirsi Sub Jail) ತಪ್ಪಿಸಿಕೊಂಡು ಪರಾರಿಯಾಗಿದ್ದ ನಟೋರಿಯಸ್ ದರೋಡೆಕೋರ ಪ್ರಕಾಶ್ ಸಿದ್ದಿ ಮತ್ತೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇನ್ನೇನು ದಟ್ಟ ಕಾಡಿನಲ್ಲಿ ಕಣ್ಮರೆಯಾಗಲು ಹೊಂಚು ಹಾಕಿದ್ದ ಆರೋಪಿಯನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
ಶಿರಸಿ ಗ್ರಾಮೀಣ ಠಾಣೆಯ ಪಿಎಸ್ಐ ಸೀತಾರಾಮ್ ಮತ್ತವರ ತಂಡ, ಆರೋಪಿ ಪ್ರಕಾಶ್‌ನನ್ನು ಶಿರಸಿ ತಾಲೂಕಿನ ಜಡ್ಡಿಮನೆ ಹರೆಪಾಲ್ ಗ್ರಾಮದ ಅಂಚಿನಲ್ಲಿ ಬಂಧಿಸಿದೆ. ಶನಿವಾರ ಬೆಳಗ್ಗೆ 8.45ರ ಸುಮಾರಿಗೆ ಶಿರಸಿ ಸಬ್ ಜೈಲಿನಿಂದ ಎಸ್ಕೇಪ್ ಆಗಿದ್ದ ರಾಬರಿ ಗ್ಯಾಂಗ್‌ನ ಸದಸ್ಯ ಪ್ರಕಾಶ್, ಶಿರಸಿಯ ಸುತ್ತ ಮುತ್ತಲೇ ಓಡಾಡಿಕೊಂಡಿದ್ದ.
ಇದನ್ನೂ ಓದಿ | Road Accident: ಜಗಳೂರು ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಎಎಸ್‌ಐ ಮೃತ್ಯು
ಜೈಲಿನ ಅಧಿಕಾರಿಗಳನ್ನೇ ಯಾಮಾರಿಸಿ ಕಾಲ್ಕಿತ್ತಿದ್ದ ಆರೋಪಿ, ಹೇಗಾದರೂ ಮಾಡಿ ತನ್ನ ಟೀಂ ಸೇರಲು ದಟ್ಟ ಅರಣ್ಯದೆಡೆಗೆ ಸಾಗುತ್ತಿದ್ದ. ಇನ್ನೇನು ಕೆಲವೇ ಹೊತ್ತಲ್ಲಿ ದಟ್ಟಾರಣ್ಯದ ನಡುವೆ ಲೀನವಾಗುವ ಎಲ್ಲ ತಯಾರಿ ಮಾಡಿಕೊಂಡಿದ್ದ. ಹೀಗಿದ್ದಾಗ, ಈತನನ್ನು ಗಮನಿಸಿದ್ದ ಕೆಲ ಗ್ರಾಮಸ್ಥರು ತಕ್ಷಣವೇ ಶಿರಸಿ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಪವಾಡದ ರೂಪದಲ್ಲೇ ಶಿರಸಿ ಪೊಲೀಸರು ಪ್ರಕಾಶನನ್ನು ಹೆಡೆಮುರಿ ಕಟ್ಟಿದ್ದಾರೆ.
ಡಕಾಯಿತಿ ಪ್ರಕರಣದ ವಿಚಾರಣಾಧೀನ ಕೈದಿ ಪ್ರಕಾಶ್ ಕೃಷ್ಣ ಸಿದ್ದಿ (೨೪) ಮೂಲತಃ ಯಲ್ಲಾಪುರ ತಾಲೂಕಿನ ಜಡಹಲಗಿನ ಕೊಪ್ಪ ಗ್ರಾಮದ ನಿವಾಸಿಯಾಗಿದ್ದ. ಬಿಳಕಿ ಗ್ರಾಮದಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಶಿರಸಿ ಸಬ್ ಜೈಲು ಸೇರಿದ್ದ.