ಯಲ್ಲಾಪುರ: ಮಕ್ಕಳೆಂದರೆ ಅಂಕ ಗಳಿಸುವ ಒಂದು ಯಂತ್ರ ಎಂದು ತಿಳಿಯುವ ಪಾಲಕರು, ಅಂಕ ಪಡೆಯಲು ಒತ್ತಡ ಹೇರುವ ಶಿಕ್ಷಕರಿರುವ ಶಾಲೆಗಳ ಮಧ್ಯೆಯೇ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ವಿಶ್ವದರ್ಶನದಂತಹ ಶಾಲೆಯಲ್ಲಿ ಓದಲು ವಿದ್ಯಾರ್ಥಿಗಳು ಅದೃಷ್ಟವಂತರಾಗಿರಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಸಂಘಟನೆಯ ಸದಸ್ಯ ನಾಗರಾಜ ಮದ್ಗುಣಿ ಹೇಳಿದರು.
ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. “ಪುಸ್ತಕ ಜ್ಞಾನದ ಜತೆಗೆ ವ್ಯವಹಾರ ಜ್ಞಾನವೂ ಇದ್ದರೆ ಬದುಕಿನಲ್ಲಿ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಕಲಿಯುವಂತಹ ವಿಷಯಗಳು ಹೆಚ್ಚಿರುತ್ತವೆ. ಅತಿಯಾಗಿ ಓದುವ ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಸ್ತುಗಳ ಪರಿಚಯವೇ ಇರುವುದಿಲ್ಲ. ಇಲ್ಲಿಯ ಸಂಘಟನೆಯಲ್ಲಿ ವಿವಿಧ ವಸ್ತುಗಳ ಪ್ರದರ್ಶನ, ಮಾರಾಟ ಇರುವುದರಿಂದ ಅವುಗಳನ್ನು ಹತ್ತಿರದಿಂದ ನೋಡುವ, ವ್ಯವಹರಿಸುವ ಕೌಶಲ ಬೆಳೆಯುತ್ತದೆ. ಇಂತಹ ಅಮೂಲ್ಯ ಕಾರ್ಯಗಳ ಮೂಲಕ ವಿಶ್ವದರ್ಶನ ಸಂಸ್ಥೆ ಯಲ್ಲಾಪುರದ ಹೆಮ್ಮೆಯಾಗಿ ಬೆಳೆಯುತ್ತಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಪ್ರತಿ ವಿದ್ಯಾರ್ಥಿಯೂ ಒಂದಿಲ್ಲೊಂದು ಚಟುವಟಿಕೆಯಲ್ಲಿ ಭಾಗಿಯಾಗಬೇಕೆಂಬ ಉದ್ದೇಶದಿಂದ ಗಣಿತ ರಸಪ್ರಶ್ನೆ, ವಿಜ್ಞಾನ ರಂಗೋಲಿ, ಭಾಷಾ ವಿದ್ಯಾರ್ಥಿ ಕವಿಗೋಷ್ಠಿ, ವ್ಯವಹಾರಿಕ ಅಧ್ಯಯನ, ಮಾದರಿ ರಚನೆಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಸ್ವರಚಿತ ಕವನ ವಾಚನದಲ್ಲಿ ವಿದ್ಯಾರ್ಥಿಗಳಾದ ಅನುಷಾ ಭಟ್ಟ, ಪೃಥ್ವಿ ಜೋಷಿ, ಚಿನ್ಮಯ ವೈದ್ಯ, ನಾರಾಯಣ ಭಟ್ಟ, ಶ್ರೀವತ್ಸ ಭಟ್ಟ, ಅನನ್ಯಾ ಭಟ್ಟ, ಶ್ರೀರಕ್ಷಾ ಭಟ್ಟ, ಕನ್ನಡ ಮತ್ತು ಹಿಂದಿ ಭಾಷೆಯ ರಚನೆಗಳನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ವಿವಿಧ ತಿಂಡಿ-ತಿನಿಸು, ಉಪ್ಪಿನಕಾಯಿ ಮುಂತಾದ ಆಹಾರ ಪದಾರ್ಥ ಹಾಗೂ ಇನ್ನಿತರ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಖ್ಯಾತ ಕನ್ನಡ ಸಾಹಿತಿಗಳ ಪುಸ್ತಕ ಪ್ರದರ್ಶನ, ವಿಜ್ಞಾನ ರಂಗೋಲಿ, ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು.
ಶಿಕ್ಷಕರಾದ ಖೈರೂನ್ ಶೇಖ್, ಪ್ರೇಮಾ ಗಾಂವ್ಕರ, ನೀತಾ ನಾಯ್ಕ, ಮಹೇಶ ನಾಯ್ಕ, ನವೀನಕುಮಾರ ಉಪಸ್ಥಿತರಿದ್ದರು. ಪ್ರಭಾತ ಭಟ್ಟ ಪ್ರಾರ್ಥಿಸಿದರೆ, ಶಿಕ್ಷಕಿ ಶ್ಯಾಮಲಾ ಕೆರೆಗದ್ದೆ ಸ್ವಾಗತಿಸಿದರು. ಆಯೇಷಾ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಗೀತಾ ಎಚ್.ವಿ ವಂದಿಸಿದರು.