ಕಾರವಾರ: ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಹಾಗೂ ಸರವನ್ನು ಎಗರಿಸಿ ಪರಾರಿಯಾಗಿದ್ದ ಕಳ್ಳನನ್ನು ಹೊನ್ನಾವರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯಲ್ಲೇ ಮಾಂಗಲ್ಯ ಸಮೇತ ಬಂಧಿಸುವಲ್ಲಿ (Theft Case) ಯಶಸ್ವಿಯಾಗಿದ್ದಾರೆ.
ಹೊದ್ಕೆಶಿರೂರಿನ ಹೂವಿನಹಿತ್ಲದ ಗಣಪತಿ ನಾಗಪ್ಪ ಗೌಡ ಬಂಧಿತ ಆರೋಪಿ. ಹೊದ್ಕೆಶಿರೂರಿನ ವೀಣಾ ತಿಮ್ಮಪ್ಪ ದೇಶಭಂಡಾರಿ ಅವರು ಒಬ್ಬರೇ ನಿಂತಿದ್ದಾಗ ಮಾಂಗಲ್ಯ ಹಾಗೂ ಸರವನ್ನು ಕದ್ದು ಪರಾರಿಯಾಗಿದ್ದ. ಆದರೆ, ಆ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ, ಮಹಿಳೆಗೆ ಏನೂ ಮಾಡಲು ಆಗಿರಲಿಲ್ಲ. ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಅದು ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ಆರೋಪಿಯನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿತ್ತು. ಹಾಗಿದ್ದರೂ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಏನಿದು ಪ್ರಕರಣ?
ಚಂದಾವರದ ಶ್ರೀ ಹನುಮಂತ ದೇವಾಲಯದಲ್ಲಿ ಭಾನುವಾರ (ಡಿ.೧೮) ಏರ್ಪಡಿಸಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ವೀಣಾ, ಮನೆಗೆ ವಾಪಸಾಗಲು ಬಸ್ ನಿಲ್ದಾಣ ಬಳಿ ಟೆಂಪೋಗಾಗಿ ಕಾದು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತನೊಬ್ಬ ಏಕಾಏಕಿ ದಾಳಿ ನಡೆಸಿ ಮಾಂಗಲ್ಯ ಹಾಗೂ ಸರವನ್ನು ದೋಚಿ ಪರಾರಿಯಾಗಿದ್ದ. ಇವು 30 ಗ್ರಾಂ ತೂಕದ್ದೆನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ತಡರಾತ್ರಿವರೆಗೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದರು. ಸೋಮವಾರ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಸಿಪಿಐ ಶ್ರೀಧರ ಎಸ್.ಆರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮಹಾವೀರ ಬಿ.ಎಸ್. ಸಂತೋಷ ಬಾಳೇರ, ಕೃಷ್ಣ ಗೌಡ, ಪ್ರಶಾಂತ ನಾಯ್ಕ ಹಾಗೂ ಚಾಲಕ ಚಂದ್ರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಅರಣ್ಯದಲ್ಲಿ ಸುತ್ತಾಡಿಸಿದ ಕಳ್ಳ
ಗಣಪತಿ ಗೌಡ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಣೆ. ಅಲ್ಲದೆ, ತಾನು ಧರಿಸಿದ್ದ ಉಡುಪನ್ನು ಕಳ್ಳತನದ ಬಳಿಕ ಅರಣ್ಯದಲ್ಲಿ ಬಚ್ಚಿಟ್ಟು, ಬೇರೆ ವಸ್ತ್ರ ಧರಿಸಿದ್ದೆ ಎಂದಿದ್ದ. ಹೀಗಾಗಿ ಅರಣ್ಯದಲ್ಲಿ ಅಡಗಿಸಿಟ್ಟ ವಸ್ತ್ರ ಪತ್ತೆ ಹಚ್ಚಲು ಪೊಲೀಸರು ಹಾಗೂ ಸ್ಥಳೀಯರು ಆರೋಪಿಯನ್ನು ಅರಣ್ಯಕ್ಕೆ ಕೊಂಡೊಯ್ದರು. ಸರಿಸುಮಾರು 8 ಕಿ.ಮೀ ದಟ್ಟಾರಣ್ಯದಲ್ಲಿ ಸುತ್ತುವರಿದರೂ ಬಟ್ಟೆ ಬಚ್ಚಿಟ್ಟ ಸ್ಥಳ ಪತ್ತೆ ಮಾಡಿಸಲು ಪೊಲೀಸರು ಹಾಗೂ ಸ್ಥಳೀಯರು ಹೆಣಗಾಡಬೇಕಾಯಿತು. ಎರಡು ಗಂಟೆಗಳ ಕಾಲ ಪೊಲೀಸರನ್ನು ಅರಣ್ಯದಲ್ಲಿ ಸುತ್ತಾಡಿಸಿದ ಗಣಪತಿ ಗೌಡ ಕೊನೆಗೆ ಬಟ್ಟೆಯನ್ನು ಮನೆಯಲ್ಲೇ ಇಟ್ಟಿರುವುದಾಗಿ ಹೇಳಿದ್ದಾನೆ. ತನಿಖೆ ಪೂರ್ಣಗೊಳಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ | Same-sex Marriage | ಸಲಿಂಗ ಮದ್ವೆಯನ್ನು ಜಡ್ಜ್ ನಿರ್ಧರಿಸಲಾಗದು, ಸಂಸತ್ತಿನಲ್ಲಿ ಚರ್ಚೆಯಾಗಲಿ: ಬಿಜೆಪಿ ಸಂಸದ