ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada Landslide) ಅಂಕೋಲಾ- ಶಿರೂರು ಗುಡ್ಡಕುಸಿತ (Ankola Shiruru landslide) ಪ್ರಕರಣದಲ್ಲಿ ಹೆದ್ದಾರಿಯ ಮೇಲೆ ಬಿದ್ದಿರುವ ಮಣ್ಣು ತೆಗೆಯುವ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ದುರಂತದಲ್ಲಿ ನಾಪತ್ತೆಯಾದ 10 ಜನರಲ್ಲಿ ನಿನ್ನೆಯವರೆಗೆ 6 ಮಂದಿಯ ಶವ ಪತ್ತೆಯಾಗಿದೆ. ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ನಡುವೆ ನಿನ್ನೆ ಸಂಜೆ ವೇಳೆಗೆ ಅಂಕೋಲಾ ತಾಲೂಕಿನ ಬೆಳಂಬಾರ ಕಡಲತೀರದಲ್ಲಿ ಛಿದ್ರಗೊಂಡಿದ್ದ ದೇಹವೊಂದು ಪತ್ತೆಯಾಗಿದ್ದು, ಅದು ಇಲ್ಲಿಂದ ಕೊಚ್ಚಿಕೊಂಡು ಹೋದ ವ್ಯಕ್ತಿಯ ಶವವಿರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾಡಳಿತದ ಮಾಹಿತಿಯಂತೆ ಇಲ್ಲಿ 10 ಮಂದಿ ಕಣ್ಮರೆಯಾಗಿದ್ದಾರೆ; ಇವರಲ್ಲಿ 6 ಮಂದಿಯ ಶವಗಳು ಸಿಕ್ಕಿವೆ ಹಾಗೂ ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ.
ಮತ್ತೆ ಗುಡ್ಡ ಕುಸಿತದ ಆತಂಕ
ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಣ್ಣು ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ಧಾರಾಕಾರ ಮಳೆಯ ನಡುವೆಯೂ ಮಣ್ಣು ತೆರವು ಭರದಿಂದ ಸಾಗಿದ್ದು, ಐಆರ್‌ಬಿ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ. ಎನ್‌ಡಿಆರ್‌ಎಫ್, ಪೊಲೀಸ್ ತಂಡಗಳು ಶೋಧ ಕಾರ್ಯ ಮುನ್ನಡೆಸಿವೆ. ಮಳೆಯಿಂದಾಗಿ ಗುಡ್ಡದಿಂದ ಝರಿಯಂತೆ ನೀರು ಹರಿದುಬರುತ್ತಿದ್ದು, ಮತ್ತೆ ಗುಡ್ಡ ಕುಸಿತ ಭೀತಿ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ವಿಸ್ತಾರ ನ್ಯೂಸ್‌ಗೆ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಪ್ರತಿಕ್ರಿಯೆ ನೀಡಿದ್ದು, ಇನ್ನೂ 40 ಮೀಟರ್ ಕೆಲಸ ಬಾಕಿ ಇದೆ, ಇಂದು ಪೂರ್ಣಗೊಳ್ಳಬಹುದು ಎಂದಿದ್ದಾರೆ. ಆದರೆ ಇಲ್ಲಿನ ಇನ್ನೊಂದು ಬದಿ ಕುಸಿಯುವ ಆತಂಕ ಎದುರಾಗಿದೆ. ನಿನ್ನೆ ಅಲ್ಪ ಪ್ರಮಾಣದಲ್ಲಿದ್ದ ಬಿರುಕು ಇಂದು ಹೆಚ್ಚಾಗಿದೆ. ಅದೂ ಕುಸಿದರೆ ಮತ್ತೆ ಕಾರ್ಯಾಚರಣೆಗೆ ಹಿನ್ನಡೆಯಾಗಬಹುದು ಎಂದಿದ್ದಾರೆ.
ಗಂಗಾವಳಿ ನದಿಯಲ್ಲಿ ಮಣ್ಣಿನ ದಿಬ್ಬಗಳು ನಿರ್ಮಾಣವಾಗಿವೆ. ಇದರಿಂದ ನದಿಯ ಹರಿವು ರಸ್ತೆಗೆ ಕೊರೆತ ಉಂಟುಮಾಡುವ ಸಾಧ್ಯತೆಯಿದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಗುಡ್ಡ ಕುಸಿತದಿಂದ ಉಳುವರೆ ಗ್ರಾಮದ ಮನೆಗಳಿಗೆ ಹಾನಿಯಾದ ವಿಚಾರದಲ್ಲಿ, ಆಸ್ಪತ್ರೆಗೆ ದಾಖಲಾಗಿದ್ದ 15 ಮಂದಿಗೆ ಬಾಡಿಗೆ ಮನೆ ಮಾಡಿ ಇರಿಸಲು ಚಿಂತನೆ ನಡೆಸಲಾಗಿದೆ. ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡಿರುವ ಉಳುವರೆ ಗ್ರಾಮದ ನಿವಾಸಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕಾಳಜಿ ಕೇಂದ್ರದ ಬದಲು ಬಾಡಿಗೆ ಮನೆ ವ್ಯವಸ್ಥೆ ಮಾಡಲಾಗುತ್ತಿದೆ. ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.
ಗ್ಯಾಸ್ ಟ್ಯಾಂಕರ್‌ನ ಅನಿಲ
ಮಣ್ಣು ಕುಸಿತದ ವೇಳೆ ನದಿಯಲ್ಲಿ ತೇಲಿಹೋಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ತಜ್ಞರ ತಂಡ ಅನಿಲ ಟ್ಯಾಂಕರ್ ಖಾಲಿ ಮಾಡುವ ಕಾರ್ಯ ಮಾಡುತ್ತಿದೆ. ಉಳಿದ ಅನಿಲ ಇಂದು ಖಾಲಿ ಮಾಡುತ್ತೇವೆ. ಭಾರೀ ಮಳೆ ಹಾಗೂ ಗಾಳಿ ಇರುವುದರಿಂದ ಅನಿಲ ಖಾಲಿ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಸತೀಶ್ ಸೈಲ್ ತಿಳಿಸಿದ್ದಾರೆ.
ನದಿಯಲ್ಲಿ ತೇಲಿಹೋಗಿದ್ದ ಟ್ಯಾಂಕರ್ ಅನ್ನು ಸದ್ಯ ಸಗಡಗೇರಿ ಬಳಿ ನೌಕಾನೆಲೆ, NDRF ತಂಡಗಳು ತಡೆದು ನಿಲ್ಲಿಸಿದ್ದವು. ನಿನ್ನೆ ಶೇ.60ರಷ್ಟು ಗ್ಯಾಸ್ ಅನ್ನು ಗಂಗಾವಳಿ ನದಿಗೆ ಬಿಟ್ಟಿದ್ದ ಹೆಚ್‌ಪಿಎಲ್ ಕಂಪೆನಿ ತಜ್ಞರು, ಇಂದು ಮತ್ತೆ ಶೇ.40ರಷ್ಟು ಗ್ಯಾಸ್ ನೀರಿಗೆ ಬಿಡಲಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕದಳ, SDRF, NDRF, ಪೊಲೀಸರು, ವೈದ್ಯಾಧಿಕಾರಿಗಳ ತಂಡ ಮೊಕ್ಕಾಂ ಹೂಡಿದೆ. ಎರಡು ಆ್ಯಂಬುಲೆನ್ಸ್ ಸ್ಥಳದಲ್ಲಿ ನಿಯೋಜನೆಯಾಗಿದೆ. ಗ್ರಾಮದ 34 ಮನೆಗಳ ಜನರನ್ನು ಜಿಲ್ಲಾಡಳಿತ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದೆ. ಟ್ಯಾಂಕರ್ ಒಟ್ಟು 18 ಕ್ವಿಂಟಾಲ್ ಗ್ಯಾಸ್ ಹೊಂದಿತ್ತು.
ಇದನ್ನೂ ಓದಿ: Uttara Kannada Landslide: ಭೂಕುಸಿತದ ಜಾಗದ ಬಳಿಯೇ ʼಸುನಾಮಿʼ ಎಫೆಕ್ಟ್; ನೀರಿನ ರಭಸಕ್ಕೆ ಕೊಚ್ಚಿಹೋದ ಮಹಿಳೆ