ಯಲ್ಲಾಪುರ: ಕೆಪಿಎಂಇ ಕಾಯ್ದೆಯಡಿಯಲ್ಲಿ ಅಗತ್ಯ ನಿಯಮಗಳನ್ನು ಪಾಲಿಸದೇ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದ ತಾಲೂಕಿನ (Uttara Kannada News) ಕಿರವತ್ತಿಯ ಮೂರು ಖಾಸಗಿ ಆಸ್ಪತ್ರೆಗಳಿಗೆ ತಾಲೂಕು ವೈದ್ಯಾಧಿಕಾರಿಗಳ ತಂಡ ಬೀಗ ಜಡಿದಿದ್ದಾರೆ.
ಈ ಆಸ್ಪತ್ರೆಗಳ ಮೇಲೆ ಹಠಾತ್ ದಾಳಿ ನಡೆಸಿದ ತಾಲೂಕು ವೈದ್ಯಾಧಿಕಾರಿಗಳ ತಂಡ ಅನೇಕ ನ್ಯೂನತೆಗಳನ್ನು ಪತ್ತೆಹಚ್ಚಿದೆ. ಬೀಗ ಹಾಕಲಾದ ಆಸ್ಪತ್ರೆಗಳಲ್ಲಿ ಬಯೋ ಮೆಡಿಕಲ್ ವೇಸ್ಟ್ ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡಲಾಗುತ್ತಿಲ್ಲ. ಸೂಜಿ, ಸಿರಿಂಜ್, ಕಾಟನ್, ಸಲಾಯಿನ್ ಬಾಟಲ್, ಖಾಲಿ ಆಂಪಲ್‌ಗಳನ್ನು ನಿಯಮಾನುಸಾರ ವಿಲೇವಾರಿ ಮಾಡದೆ, ಕಸದ ವಾಹನದಲ್ಲಿ ಕಳಿಸಲಾಗುತ್ತಿದೆ.
ಇದನ್ನೂ ಓದಿ: The RajaSaab Movie: ‘ದಿ ರಾಜಾಸಾಬ್’; ಎಲ್ಲರ ಗಮನ ಸೆಳೆಯುತ್ತಿದೆ ರೆಬೆಲ್ ಸ್ಟಾರ್ ಪ್ರಭಾಸ್ ಡ್ಯಾಶಿಂಗ್ ಲುಕ್!
ತಾಂತ್ರಿಕ ಪರಿಣಿತಿ ಹಾಗೂ ನಿಗದಿತ ವಿದ್ಯಾರ್ಹತೆ ಇಲ್ಲದ ಸಿಬ್ಬಂದಿಗಳನ್ನು ಔಷಧ ವಿತರಣೆಗೆ, ರಕ್ತದೊತ್ತಡ, ಡಯಾಬಿಟಿಸ್ ಪರೀಕ್ಷೆಗೆ ನೇಮಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿತ್ತು. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆಯಿದೆ. ಒಂದು ಖಾಸಗಿ ಆಸ್ಪತ್ರೆಯು ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗಿರುವುದಿಲ್ಲ. ಇದಲ್ಲದೇ ಸ್ವಂತ ಮನೆಯ ರೂಮ್ ಒಂದರಲ್ಲಿ ಒಬ್ಬರು ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಹೊಂದದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಈ ಎಲ್ಲಾ ಕಾರಣಗಳಿಂದಾಗಿ ಗುರುಪ್ರಸಾದ ಪಾಲಿ ಕ್ಲಿನಿಕ್, ಕೀರ್ತಿ ಕ್ಲಿನಿಕ್ ಹಾಗೂ ನೇಮಿಣಿ ಗಲ್ಲಿಯ ಮನೆಯೊಂದರಲ್ಲಿ ನಡೆಸಲಾಗುತ್ತಿದ್ದ ಕ್ಲಿನಿಕ್‌ಗೆ ಬೀಗ ಜಡೆಯಲಾಗಿದ್ದು, ಒಂದು ವಾರದೊಳಗೆ ಎಲ್ಲ ವ್ಯವಸ್ಥೆ ಸರಿಪಡಿಸಿಕೊಂಡು ಕೆಪಿಎಂಇ ಕಾಯ್ದೆಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ನರೇಂದ್ರ ಪವಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್ ಗೇಮ್ಸ್ ಲಭ್ಯ
ಈ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಯು. ಜೋಸೆಫ್, ಪೊಲೀಸ್ ಹವಾಲ್ದಾರ ರಾಘವೇಂದ್ರ ನಾಯ್ಕ ಇದ್ದರು.