ಯಲ್ಲಾಪುರ: ಆಧುನಿಕತೆಯ ನಡುವೆಯೂ ನಮ್ಮ ಜಿಲ್ಲೆಯ ಸಾಂಸ್ಕೃತಿಕ (Cultural) ವಿಶೇಷತೆಗಳು ಇಂದಿಗೂ ಉಳಿದಿದೆ ಹಾಗೂ ಇನ್ನೂ ಎತ್ತರಕ್ಕೆ ಬೆಳೆಯುತ್ತಿದೆ ಎಂದು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ಗಾಂಧೀ ಕುಟೀರದಲ್ಲಿ 3ನೇ ದಿನದ ಸಂಕಲ್ಪ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಯಲ್ಲಾಪುರದ ಸಂಕಲ್ಪ ಉತ್ಸವದ ಸಂಭ್ರಮವನ್ನು ಮನೆ ಮನೆಯಲ್ಲಿ ಆನಂದಿಸುತ್ತಾರೆ. ನಾವು ದೂರದಲ್ಲಿದ್ದರೂ ಇದು ನಮ್ಮೂರಿನ ಉತ್ಸವ ಎಂದು ಹೆಮ್ಮೆಯಿಂದ ಕಾಣುತ್ತೇವೆ. ಪ್ರಮೋದ ಹೆಗಡೆ ಅವರ ಜೀವನೋತ್ಸಾಹವು ನಮ್ಮೆಲ್ಲರಿಗೂ ಪ್ರೇರಣೆ. ನಮ್ಮ ಜೀವನದಲ್ಲಿ ಒಂದು ಘಟ್ಟವನ್ನು ತಲುಪಿದಾಗ ನಮ್ಮಲ್ಲಿ ಉತ್ಸಾಹ ಕಡಿಮೆಯಾಗುವುದು ಸಹಜ. ಆದರೆ ತಮ್ಮ ಮಕ್ಕಳನ್ನೂ ಮೀರಿ ಹೊಸದನ್ನು ಮಾಡಲು ಪ್ರಮೋದ ಹೆಗಡೆ ಅವರಿಗಿರುವ ತುಡಿತ ಪ್ರಶಂಸನೀಯ ಎಂದರು.
ಇದನ್ನೂ ಓದಿ: Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮದಲ್ಲಿ ಹೇಗಿತ್ತು ಮನರಂಜನೆಯ ಸುಗ್ಗಿ; ಇಲ್ಲಿವೆ ಫೋಟೊ ಝಲಕ್
ಈ ಸಾಂಸ್ಕೃತಿಕ ಸಂಭ್ರಮದ ಉತ್ಸವ ನನ್ನದು ಎಂದು ಅನೇಕರು ಸ್ವಯಂ ಸೇವಕರಾಗಿ ಕಾರ್ಯಕ್ರಮದ ಯಶಸ್ಸಿಗಾಗಿ ತೊಡಗಿಕೊಂಡಿದ್ದಾರೆ, ಅವರೆಲ್ಲರ ಶ್ರಮದ ಫಲವಾಗಿ 37 ವರ್ಷಗಳಿಂದ ಈ ಕಾರ್ಯಕ್ರಮ ಊರಿನ ಎಲ್ಲರ ಕಾರ್ಯಕ್ರಮವಾಗಿ ಬೆಳೆದು ಬಂದಿದೆ ಎಂದು ತಿಳಿಸಿದರು.
ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ಇಂದಿನ ಯುವ ಪೀಳಿಗೆ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಬಯಸುತ್ತಿದ್ದಾರೆ. ಜನರು ಒಂದು ಹೊಸ ಪ್ರದೇಶದ ಕಲಾ ವೈವಿಧ್ಯತೆಯನ್ನು ಅನುಭವಿಸ ಬಯಸುತ್ತಾರೆ. ಅಂತಹ ಒಂದು ಪ್ರವಾಸೋದ್ಯಮಕ್ಕೆ ನಮ್ಮ ಉತ್ತರಕನ್ನಡದ ಸಂಕಲ್ಪ ಉತ್ಸವವು ನಾಂದಿ ಹಾಡುತ್ತಿದೆ. ಸರ್ಕಾರಕ್ಕೆ ಸವಾಲೊಡ್ಡಿ 37 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡಿರುವುದು ಪ್ರಮೋದ ಹೆಗಡೆ ಅವರ ಧೃಢಸಂಕಲ್ಪವನ್ನು ತೋರುತ್ತದೆ ಎಂದರು.
ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಳೆ ನೀರು ಕೊಯ್ಲು ಅಭಿಯಾನದ ರುವಾರಿಯಾದ ಚಂದ್ರು ಎಸಳೆ ಅವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: Turnip Benefits: ಟರ್ನಿಪ್ ಗಡ್ಡೆಯ ಬಗ್ಗೆ ಗೊತ್ತೆ? ಅದರ ಗುಣ ವಿಶೇಷಗಳನ್ನು ತಿಳಿಯಿರಿ
ವೇದಿಕೆಯಲ್ಲಿ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎನ್. ಗಾಂವ್ಕರ್, ಎಂ.ಕೆ. ಭಟ್, ಉಮೇಶ ಭಾಗ್ವತ್, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಸುಬ್ಬಣ್ಣ ಬೋಳ್ಮನೆ ಇದ್ದರು.
ಸಾನ್ವಿ ಇನಾಮದಾರ್ ಪ್ರಾರ್ಥಿಸಿದರು. ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಭಾಸ್ಕರ್ ನಾಯ್ಕ ನಿರೂಪಿಸಿದರು.