ಕಾರವಾರ: ಜಾಗತಿಕ ಸರಬರಾಜು ವ್ಯವಸ್ಥೆಯ ಅತ್ಯಂತ ಪ್ರಮುಖ ಸಾಧನವಾಗಿರುವ ಜಲಸಾರಿಗೆಯನ್ನು ವ್ಯವಸ್ಥಿತ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ದೇಶದ ಮತ್ತು ರಾಜ್ಯದ ಆರ್ಥಿಕ ಶಕ್ತಿ ಸದೃಢಗೊಳ್ಳಲು ಸಾಧ್ಯವಾಗಲಿದೆ ಎಂದು ಬಂದರು ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯರಾಮ್ ರಾಯಪುರ (Uttara Kannada News) ಹೇಳಿದರು.
ಕಾರವಾರದ ಬಂದರು ಮಂಡಳಿ ಕಚೇರಿ ಆವರಣದಲ್ಲಿ ನಡೆದ 61ನೇ ರಾಷ್ಟ್ರೀಯ ನೌಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತದಲ್ಲಿ ಜಲಸಾರಿಗೆ ವ್ಯವಸ್ಥೆಯು ನಿಧಾನವಾಗಿ ಆರಂಭವಾದರೂ ಸಹ ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ವ್ಯವಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಆಮದು ಮತ್ತು ರಫ್ತು ವಹಿವಾಟಿನಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಆದರೆ ದೇಶದಲ್ಲಿ ಜಲಸಾರಿಗೆ ವ್ಯವಸ್ಥೆಯ ಬೆಳವಣಿಗೆಗೆ ಇನ್ನೂ ವಿಫುಲ ಅವಕಾಶಗಳಿದ್ದು, ಇವುಗಳನ್ನು ಬಳಸಿಕೊಂಡಲ್ಲಿ ದೇಶದ ಆರ್ಥಿಕ ಬಲವರ್ಧನೆ ಇನ್ನಷ್ಟು ವೃದ್ಧಿಸಲಿದೆ ಎಂದರು.
ಇದನ್ನೂ ಓದಿ: Oldest Man: ನೀವೂ 100 ವರ್ಷ ಬದುಕಬೇಕೇ? 111 ವರ್ಷದ ಈ ‘ಯುವಕ’ನ ಮಾತು ಕೇಳಿ
ರಾಜ್ಯದಲ್ಲಿ ಕಾರವಾರ ಬಂದರು ಮೂಲಕ ಹೆಚ್ಚಿನ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅವಕಾಶಗಳಿದ್ದು, ಈ ಬಂದರನ್ನು 5 ಹಂತದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು ಈಗಾಗಲೇ 8 ಮೀಟರ್‌ವರೆಗೆ ಡ್ರೆಜ್ಜಿಂಗ್ ನಡೆಸಲಾಗಿದೆ. ಅಲ್ಲದೇ ಕೇಣಿ ಬಂದರು, ಪಾವಿನಕುರ್ವಾ, ಮಂಕಿ ಹೊನ್ನಾವರ ಬಂದರುಗಳನ್ನೂ ಕೂಡಾ ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ಮಂಗಳೂರು ದಕ್ಷಿಣದಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಮತ್ತು ಟೂರಿಸಂ ಪೋರ್ಟ್ ನಿರ್ಮಾಣ ಮಾಡಲಾಗುತ್ತಿದ್ದು, ಕರಾವಳಿ ಪ್ರದೇಶಗಳಲ್ಲಿ ಹಡಗುಗಳ ನಿರ್ಮಾಣ ಮತ್ತು ದುರಸ್ತಿ ಉದ್ಯಮಕ್ಕೆ ಉತ್ತಮ ಅವಕಾಶವಿದೆ. ಈ ಭಾಗದಲ್ಲಿ ಗಾಳಿಯಿಂದ ವಿದ್ಯುತ್ ಉತ್ಪಾದನೆಗೆ ಹಾಗೂ ಪ್ರವಾಸೋದ್ಯಮ ಮತ್ತು ಮೀನುಗಾರಿಕಾ ಚಟುವಟಿಕೆಗಳ ಅಭಿವೃದ್ಧಿಗೆ ಬಂದರು ಮಂಡಳಿಯಿಂದ ಎಲ್ಲಾ ರೀತಿಯ ಸಹಕಾರವನ್ನೂ ನೀಡಲಾಗುವುದು ಎಂದರು.
ಕರ್ನಾಟಕ ನೇವಲ್ ಏರಿಯದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಕೆ.ಎಂ. ರಾಮಕೃಷ್ಣನ್ ಮಾತನಾಡಿ, ಪ್ರಪಂಚದ ಶೇ.90 ರಷ್ಟು ಆರ್ಥಿಕ ಚಟುವಟಿಕೆ ನೌಕಾಯಾನದ ಮೂಲಕ ನಡೆಯುತ್ತಿದೆ. ಈ ವ್ಯವಸ್ಥೆ ಸುಗಮವಾಗಿ ನಡೆಯಲು ಅಂತಾರಾಷ್ಟ್ರೀಯ ಸಹಕಾರ ಅಗತ್ಯವಾಗಿದ್ದು, ಈ ಕುರಿತಂತೆ ನೇವಿಯಿಂದ ವಿವಿಧ ರಾಷ್ಟ್ರಗಳ ನಡುವೆ ಅಗತ್ಯ ಮಾಹಿತಿಗಳ ವಿನಿಮಯ ಮತ್ತು ಸಂಕಷ್ಟಕ್ಕೆ ಸಿಲುಕುವ ಹಡಗುಗಳು ಮತ್ತು ನೌಕಾ ಸಿಬ್ಬಂದಿಗಳ ರಕ್ಷಣೆಯನ್ನು ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: Old Pension Scheme: ಹಳೆಯ ಪಿಂಚಣಿ ಬೇಕಿದ್ದರೆ ಯೋಚಿಸಿ ನಿರ್ಧಾರ ಮಾಡಿ! ಏನಿದು ರಾಜ್ಯ ಸರ್ಕಾರದ ಆದೇಶ?
ಕಾರವಾರ ನೇವಲ್ ಬೇಸ್‌ನ ಚೀಫ್ ಸ್ಟಾಫ್ ಆಫೀಸರ್ ಕಮಾಂಡರ್ ಆಶೀಶ್ ಗೋಯೆಲ್, ಕಾರವಾರ ಪೋರ್ಟ್ ಅಧಿಕಾರಿ ರಾಜಕುಮಾರ್ ಹೆಡೆ, ಬಂದರು ಮಂಡಳಿಯ ಚೀಫ್ ಎಂಜಿನಿಯರ್ ಪ್ರವೀತ್, ಲೆಕ್ಕಾಧಿಕಾರಿ ಸಂಗೀತಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ಬಂದರು ನಿರ್ದೇಶಕ ಕ್ಯಾ.ಸ್ವಾಮಿ ಸ್ವಾಗತಿಸಿದರು. ಸುರೇಶ್ ಶೆಟ್ಟಿ ನಿರೂಪಿಸಿದರು.