ಕಾರವಾರ: ಕಸ (Garbage) ಎಸೆಯದಂತೆ ತಿಳಿಸಿದ್ದಕ್ಕೆ ಪೌರಕಾರ್ಮಿಕರ (Civil Worker) ಮೇಲೆ ಹಲ್ಲೆ ನಡೆಸಿದ ಘಟನೆ ಕಾರವಾರ ನಗರದಲ್ಲಿ ನಡೆದಿದ್ದು, ಕೂಡಲೇ ಆರೋಪಿಗಳ (Accused) ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಕಾರವಾರ ಘಟಕದ ಪದಾಧಿಕಾರಿಗಳು ನಗರಸಭೆ ಪೌರಾಯುಕ್ತ ಚಂದ್ರಮೌಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಗರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿರುವ ಚೇತನಕುಮಾರ ವಿ ಕೊರಾರ್ ಎಂಬುವವರು ಸೋಮವಾರ (ಸೆ.11ರಂದು) ಸ್ವಚ್ಛತಾ ಕೆಲಸದ ಪಾಳಿ ಮುಗಿಸಿ ರಾತ್ರಿ 9:30 ರ ಸುಮಾರು ಮನೆಗೆ ತೆರಳುತ್ತಿದ್ದ ವೇಳೆ ನಗರದ ಬಸ್ ನಿಲ್ದಾಣದ ಬಳಿ ನಿತಿನ್ ಹರಿಕಂತ್ರ ಎಂಬುವವರು ರಸ್ತೆಗೆ ಕಸ ಎಸೆಯಲು ಮುಂದಾಗಿದ್ದರು. ಈ ವೇಳೆ ಚೇತನಕುಮಾರ್ ಈ ರಸ್ತೆಯಲ್ಲಿ ಸ್ವಚ್ಛತೆ ಮಾಡಿದ್ದು, ಇಲ್ಲಿ ಕಸ ಬಿಸಾಡದೇ ಬೆಳಿಗ್ಗೆ ಕಸದ ವಾಹನಕ್ಕೆ ನೀಡಿ ಎಂದು ತಿಳಿಸಿದ್ದಾರೆ.
ಇಷ್ಟಕ್ಕೇ ಕೋಪಗೊಂಡ ಯುವಕ ನಿತಿನ್ ಹರಿಕಂತ್ರ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಈ ವೇಳೆ ಆತನ ಸಹೋದರ ನಿತೇಶ ಹರಿಕಂತ್ರ ಎಂಬುವವರು ಸಹ ಚೇತನ್‌ನನ್ನ ನಿಂದಿಸಿ ತಾನು ಇಲ್ಲೇ ಕಸ ಬಿಸಾಡುತ್ತೇನೆ, ನನಗೆ ಹೇಳುವವನು ನೀನು ಯಾರು? ಕಸ ಆರಿಸುವವ ನೀನು. ನಿನ್ನ ಹಾಗೂ ನಿನ್ನ ಜಾತಿಯ ಕೆಲಸ ನಾವು ಬಿಸಾಡಿದ ಕಸ ಆರಿಸುವುದು, ಈ ಕಸ ತೆಗೆದುಕೊಂಡು ಹೋಗು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಚೇತನ್ ಸಹೋದರ ಪುರುಷೋತ್ತಮ ಕೊರಾರ್ ಜಗಳ ಬಿಡಿಸಲು ಮುಂದಾದಾಗ ಆತನ ಮೇಲೂ ಸಹ ಹಲ್ಲೆ ನಡೆಸಿದ್ದು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ ಎಂದು ಸಲ್ಲಿಸಿದ ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: KSET 2023: ಕೆಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನ, ಆನ್‌ಲೈನ್ ಮೂಲಕ ಅಪ್ಲೈ ಮಾಡಲು ಸೆ.30 ಕೊನೆ ದಿನ
ಈ ಘಟನೆಯ ದೃಶ್ಯಾವಳಿಗಳು ಸಮೀಪದ ಟ್ರಾವೆಲ್ಸ್ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕ್ಷುಲ್ಲಕ ಕಾರಣಕ್ಕೆ ಪೌರಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಪೌರಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.
ಪ್ರತಿನಿತ್ಯ ಮನೆ ಮನೆಗೆ ತಿರುಗಿ ಕಸವನ್ನು ಸಂಗ್ರಹಿಸಿ ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕ ಮೇಲೆ ಈ ರೀತಿಯ ದುರ್ವರ್ತನೆ ತೋರಿರುವುದು ಪೌರಕಾರ್ಮಿಕರು ಕೆಲಸ ಮಾಡಲು ಭಯದ ವಾತಾವರಣ ಸೃಷ್ಟಿಸಿದೆ. ಹೀಗಾಗಿ ಘಟನೆಯನ್ನು ಖಂಡಿಸಿದ ಪೌರಕಾರ್ಮಿಕರು ಮಂಗಳವಾರ ನಗರಸಭೆಗೆ ತೆರಳಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಹಲ್ಲೆ ನಡೆಸಿದವರ ಬಂಧನವಾಗುವವರೆಗೂ ಘಟನೆ ನಡೆದ ವಾರ್ಡ್ ಸಂಖ್ಯೆ 3ರಲ್ಲಿ ಸ್ವಚ್ಛತೆ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Financial planning : ನೀವು ನಿವೃತ್ತಿಗೆ, ಮಕ್ಕಳ ಶಿಕ್ಷಣಕ್ಕೆ ಉಳಿತಾಯ ಮಾಡಿದ್ದೀರಾ?
ಇನ್ನು ಘಟನೆ ಕುರಿತು ಪೌರಕಾರ್ಮಿಕರಿಂದ ಮಾಹಿತಿ ಪಡೆದ ಪೌರಾಯುಕ್ತ ಚಂದ್ರಮೌಳಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿ, ನಗರಸಭೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಕೃತ್ಯವನ್ನು ಖಂಡಿಸಿದ್ದಾರೆ. ಸಾರ್ವಜನಿಕರ ಕೆಲಸ ಮಾಡುವ ನೌಕರರಿಗೆ ಈ ರೀತಿ ಹಲ್ಲೆ ಮಾಡುವುದು ತಪ್ಪು. ಯಾರೇ ಇಂತಹ ಕೆಲಸ ಮಾಡಿದರೂ ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಘಟನೆ ಸಂಬಂಧ ಪೌರಕಾರ್ಮಿಕರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.