Site icon Vistara News

Uttara Kannada News: ರಾಮಮಂದಿರವಾಗಲಿ, ನಳಂದ ವಿವಿಯಾಗಲಿ ಜಾತಿ, ಧರ್ಮ, ಪಂಥಗಳಿಗೆ ಸೀಮಿತವಾದುದಲ್ಲ: ಹರಿಪ್ರಕಾಶ್‌ ಕೋಣೆಮನೆ

Lecture and interaction program by Akhil Bharatiya Sahitya Parishad at Yallapur

ಯಲ್ಲಾಪುರ: ನಮ್ಮ ಸಾಂಸ್ಕೃತಿಕ ಭಾರತಕ್ಕೆ ಇತಿಹಾಸ ಸೃಷ್ಟಿಸಲೇಬೇಕಾಗಿದೆ. ವಿರೋಧಿಸುವವರೂ ಇರಬಹುದು. ಆದರೆ, ಇಂತಹ ವಿಚಾರಗಳನ್ನು ರಾಜಕೀಯ ದೃಷ್ಟಿಕೋನದ ಮೂಲಕ ಯೋಚಿಸಬಾರದು. ರಾಮಮಂದಿರವಾಗಲೀ, ನಳಂದ ವಿಶ್ವವಿದ್ಯಾನಿಲಯವಾಗಲೀ ಯಾವುದೇ ಜಾತಿ, ಧರ್ಮ, ಪಂಥಗಳಿಗೆ ಸೀಮಿತವಾದುದಲ್ಲ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಚಿಂತಕ ಹರಿಪ್ರಕಾಶ್‌ ಕೋಣೆಮನೆ (Uttara Kannada News) ತಿಳಿಸಿದರು.

ಪಟ್ಟಣದ ಸಂಸ್ಕೃತಿ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಮಾಯಣದ ಬಾಲಕಾಂಡದ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ:Samsung: ಸ್ಯಾಮ್‌ಸಂಗ್‌ನಿಂದ ಮ್ಯೂಸಿಕ್ ಫ್ರೇಮ್ ಬಿಡುಗಡೆ; ವಿಶೇಷತೆ ಏನು, ಬೆಲೆ ಎಷ್ಟು?

ದೇಶದ ಇತಿಹಾಸದಲ್ಲಿ ಇತ್ತೀಚೆಗೆ ಎರಡು ಮಹತ್ವದ ಸಾಧನೆಗಳಿಗೆ ನಾಂದಿ ಹಾಡಲಾಗಿದೆ. 500 ವರ್ಷಗಳ ಪ್ರಾಚೀನ ಇತಿಹಾಸವುಳ್ಳ ರಾಮಮಂದಿರ ನಿರ್ಮಾಣ ಹಾಗೂ ಸಾವಿರಾರು ವರ್ಷಗಳ ಹಿಂದಿನ ನಳಂದ ವಿಶ್ವವಿದ್ಯಾನಿಲಯದ ಸ್ಥಾಪನೆ. ಇವೆರಡೂ ಇತಿಹಾಸವನ್ನು ಸೃಷ್ಟಿಸಿವೆ. ಒಂದು ಧಾರ್ಮಿಕ ಶ್ರದ್ಧಾಕೇಂದ್ರವಾಗಿದ್ದರೆ, ಇನ್ನೊಂದು ಜ್ಞಾನಪರಂಪರೆಯ ನಮ್ಮ ಇತಿಹಾಸದ ಮರುಸೃಷ್ಟಿಯಾಗಿದೆ ಎಂದರು.

ಭಾರತದ ಪರಮಶ್ರೇಷ್ಟ ಮೌಲ್ಯಗಳನ್ನು ಜಗತ್ತಿಗೆ ನೀಡುವಂತಹ ಕಾರ್ಯವಿದಾಗಿದ್ದು, ದೇಶ ಸಮೃದ್ಧಿಯಾಗಲು ರಾಮತತ್ವದ ಅನುಸರಣೆ ಅಗತ್ಯ. ರಾಮಮಂದಿರ ನಿರ್ಮಾಣವಾಗುವಾಗ ಲಕ್ಷಾಂತರ ಮುಸ್ಲಿಮರು ಕೂಡಾ ಎಲ್ಲ ರೀತಿಯ ಸಹಕಾರ ನೀಡಿ, ಬೆಂಬಲಿಸಿದ್ದಾರೆ. ಅದರ ಕುರಿತು ತಿಳುವಳಿಕೆಯ ಕೊರತೆಯಿಂದಾಗಿ ವಿರೋಧಿಸಿದವರಿರಬಹುದು ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು 50 ವರ್ಷಗಳ ಹಿಂದಿನ ಭಾರತದ ಎಲ್ಲ ಭಾಷೆಗಳನ್ನೊಳಗೊಂಡ ಸಾಹಿತ್ಯ ಸಂಘಟನೆಯಾಗಿದೆ. ಎಲ್ಲ ಭಾರತೀಯ ಭಾಷೆಗಳೂ ಸಂಪದ್ಭರಿತವಾಗಿದೆ. ನಮ್ಮ ಯುವಜನಾಂಗಕ್ಕೆ ಭಾರತದ ಮೌಲ್ಯ, ಉದಾತ್ತ ಸಂಸ್ಕೃತಿ, ಪರಂಪರೆಗಳ ಅರಿವಾಗಬೇಕೆಂಬ ಉದ್ದೇಶದಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಎಲ್ಲೆಡೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಕೋಣೆಮನೆ ಹೇಳಿದರು.

ಇದನ್ನೂ ಓದಿ: JioMart: ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ಜಿಯೋಮಾರ್ಟ್‌ನಿಂದ ಮತ್ತೊಂದು ಘೋಷಣೆ

ಉಮ್ಮಚಗಿ ಶ್ರೀಮಾತಾ ವೇದ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹೇಶ ಭಟ್ಟ ಉಪನ್ಯಾಸ ನೀಡಿ, ರಾಮಾಯಣ ಕಾವ್ಯವೂ ಮಹಾಭಾರತದಂತೆ ಪಂಚಮ ವೇದ. ರಾಮಾಯಣವನ್ನು ಓದಿದರೆ ಎಲ್ಲ ಪ್ರಾಚೀನ ಗ್ರಂಥಗಳ ಮೌಲ್ಯಗಳೂ ದೊರೆಯುತ್ತವೆ. ನಾವು ರಾಮಾಯಣವನ್ನು ನಮ್ಮ ಕಣ್ಣಿನ ನೇರಕ್ಕೆ ನೋಡುತ್ತೇವೆ. ಆದ್ದರಿಂದಲೇ ಹಲವಾರು ರಾಮಾಯಣ, ಸೀತಾಯಣಗಳು ಹುಟ್ಟಿಕೊಂಡಿವೆ. ವಾಲ್ಮೀಕಿಯವರ ಕಣ್ಣಿನಲ್ಲೇ ಯಾರು ರಾಮಾಯಣವನ್ನು ನೋಡುತ್ತಾರೋ ಆಗ ರಾಮಾಯಣದ ವಾಸ್ತವ ಅರಿವಾಗುತ್ತದೆ. ಚಂದೋಬದ್ಧ ಸಾಹಿತ್ಯವನ್ನು ವಾಲ್ಮೀಕಿಯವರು ನೀಡಿದ್ದಾರೆ. ರಾಮಾಯಣಕ್ಕೆ ಮಹಾಕಾವ್ಯದ ಎಲ್ಲ ಲಕ್ಷಣಗಳಿವೆ. ಬರೆದದ್ದೆಲ್ಲ ಮಹಾಕಾವ್ಯವಾಗಲು ಸಾಧ್ಯವಿಲ್ಲ ಎಂದು ಬಾಲಕಾಂಡದ ವಿಶೇಷ ಸನ್ನಿವೇಶದ ಕುರಿತು ವಿದ್ವತ್‌ಪೂರ್ಣವಾಗಿ ತಮ್ಮ ಚಿಂತನೆಯನ್ನು ಹಂಚಿಕೊಂಡರು.

ಅ.ಭಾ.ಸಾ.ಪ. ಜಿಲ್ಲಾಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ, ಭಾರತೀಯ ಪರಂಪರೆ, ಮೌಲ್ಯಗಳನ್ನು ಪರಿಚಯಿಸಲು ರಾಮಾಯಣ, ಭಾರತದಿಂದ ಸಾಧ್ಯ. ಅನೇಕರು ಬರೆದ ರಾಮಾಯಣ ಗ್ರಂಥ ಟೀವಿಯಲ್ಲಿ ಬರುವ ರಾಮಾಯಣ ಇವುಗಳನ್ನು ನೋಡಿ ನಾವು ಭ್ರಾಂತಿಗೊಳಗಾಗಿದ್ದೇವೆ. ಅನೇಕ ಕವಿಗಳು ತಮ್ಮ ಭಾವನೆಯನ್ನು ಸೇರಿಸಿ ಬರೆದಿದ್ದಾರೆ. ಮೂಲ ರಾಮಾಯಣವೇ ಬೇರೆ. ಈ ದೃಷ್ಟಿಯಿಂದ ಮಹೇಶ ಭಟ್ಟ ಅವರು ಉತ್ತಮ ಅವಲೋಕನ ಮಾಡಿದ್ದಾರೆ. ನಮ್ಮ ಸಂಘಟನೆಯ ಉದ್ದೇಶವೂ ಇದೇ ಆಗಿದೆ ಎಂದರು.

ಸಂವಾದದಲ್ಲಿ ಕೆ.ಎಸ್. ಅಗ್ನಿಹೋತ್ರಿ, ದಾಕ್ಷಾಯಿಣಿ ಪಿ.ಎಸ್., ಈಶ್ವರದಾಸ, ಗಣಪತಿ ಭಟ್ಟ, ಮುಂತಾದವರು ಪಾಲ್ಗೊಂಡಿದ್ದರು. ಪ್ರಮುಖರಾದ ಪ್ರಮೋದ ಹೆಗಡೆ, ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಜಗದೀಶ ಭಂಡಾರಿ, ಶೈಲಜಾ ಮಂಗಳೂರು, ಕೃಷ್ಣ ಪದಕಿ ಹಾಗೂ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾಶಂಕರ ಪ್ರಾರ್ಥಿಸಿದರು. ಜಿಲ್ಲಾ ಅ.ಭಾ.ಸಾ.ಪ.ದ ಮಾಧ್ಯಮ ಸಂಘಟನೆಯ ಪ್ರಮುಖ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಕಾರ್ಯದರ್ಶಿ ಸಂಜಯ ಭಟ್ಟ ಬೆಣ್ಣೆ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಭಾಗ್ವತ ವಂದಿಸಿದರು.

Exit mobile version