Site icon Vistara News

Uttara Kannada News: ಕಿರವತ್ತಿ ಭಾಗದ 100ಕ್ಕೂ ಹೆಚ್ಚು ಜನ ಕಾಂಗ್ರೆಸ್‌ಗೆ ಸೇರ್ಪಡೆ

More than a hundred people from Kiravatti have joined the Congress party

ಯಲ್ಲಾಪುರ: ಪಟ್ಟಣದ ಕಲ್ಮಠದಲ್ಲಿ (ಸೀತಾಪುರ) ಬ್ಲಾಕ್ ಕಾಂಗ್ರೆಸ್‌ನ ನೂತನ ಕಾರ್ಯಾಲಯದ ಉದ್ಘಾಟನೆ ಹಾಗೂ ಕಿರವತ್ತಿ (Kiravatti) ಭಾಗದ ನೂರಕ್ಕೂ ಹೆಚ್ಚಿನ ಜನರ ಪಕ್ಷ ಸೇರ್ಪಡೆ ಕಾರ್ಯಕ್ರಮವು ಗುರುವಾರ ನಡೆಯಿತು.

ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ವಿ.ಎಸ್. ಪಾಟೀಲ್, ಗ್ರಾಮದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿದಾಗ, ಕ್ಷೇತ್ರದಲ್ಲಿ ಒಬ್ಬ ನಾಯಕ ಹಾಗೂ ಪಕ್ಷವನ್ನು ಬಲಪಡಿಸಲು ಸಾಧ್ಯ. ಇಂದಿನ ಕಾಲಘಟ್ಟದಲ್ಲಿ ಅಧಿಕಾರ ವಿಕೇಂದ್ರಿಕರಣಗೊಳಿಸುವ ಅವಶ್ಯಕತೆ ಇದೆ. ಗ್ರಾಮ ಮಟ್ಟದ ಸದಸ್ಯನಿಗೂ ಸರಿಯಾದ ನಿರ್ಣಯ ಕೈಗೊಳ್ಳುವ ಹಕ್ಕನ್ನು ನೀಡಬೇಕಿದೆ.

ಚುನಾವಣೆಯ ಸಂದರ್ಭದಲ್ಲಿ ಪಕ್ಷ ಸೇರ್ಪಡೆಗೊಳ್ಳುವುದು ಸಹಜ. ಆದರೆ ಯಾವುದೇ ಕಾರಣವಿಲ್ಲದೆ, ಕೇವಲ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಇಂದು ನೂರಕ್ಕೂ ಹೆಚ್ಚು ಕಾರ್ಯಕರ್ತರು ಸೇರ್ಪಡೆಗೊಂಡಿರುವುದು ಸಂತಸದ ಸಂಗತಿ. ಶಾಸಕರು ಯಾರೇ ಆಗಿರಲಿ, ಸರ್ಕಾರ ನಮ್ಮದಿದೆ. ಹೀಗಾಗಿ ಬಡವರ, ಅಗತ್ಯ ಉಳ್ಳವರ ಸಹಾಯ ಮಾಡುವ ಮೂಲಕ ಪಕ್ಷದ ಬಲವರ್ಧನೆ ಮಾಡೋಣ. ನಾವು ಪಕ್ಷದಲ್ಲಿ ಬೇಧಭಾವವನ್ನು ಮರೆತು, ಎಲ್ಲರೂ ಸೇರಿ ಕೆಲಸ ಮಾಡಿದಾಗ ವಿರೋಧಿಗಳನ್ನು ಸುಲಭವಾಗಿ ಸೋಲಿಸಬಹುದು. ರಾಜಕೀಯಕ್ಕೆ ದುಡ್ಡು ಮುಖ್ಯವಲ್ಲ, ಜನಸೇವೆಯೇ ಮುಖ್ಯ ಎಂಬುದನ್ನು ನಾವೆಲ್ಲ ಸಮಾಜಕ್ಕೆ ತೋರೋಣ ಎಂದರು.

ಇದನ್ನೂ ಓದಿ: ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

ಕಿರವತ್ತಿ ಭಾಗದ ಪ್ರಮುಖ ವಿಲ್ಸನ್ ಫರ್ನಾಂಡಿಸ್‌ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಪಕ್ಷ ಸೇರ್ಪಡೆಗೊಂಡಿದ್ದೇವೆ. ಇದು ಕೇವಲ ಟ್ರೈಲರ್ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಕ್ಷ ಸೇರಲಿದ್ಧಾರೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ತುಂಬುವ ಪ್ರಯತ್ನ ಮಾಡುತ್ತೇವೆ ಎಂದರು.

ತಾಲೂಕಾಧ್ಯಕ್ಷ ಎನ್‌.ಕೆ. ಭಟ್, ಪ್ರಮುಖರಾದ ರಾಘವೇಂದ್ರ ಭಟ್, ಟಿ.ಸಿ. ಗಾಂವ್ಕರ್, ಉಲ್ಲಾಸ್ ಶ್ಯಾನಭಾಗ್, ನರಸಿಂಹ ನಾಯ್ಕ, ನರ್ಮದಾ ನಾಯ್ಕ, ಪೂಜಾ ನೇತ್ರೇಕರ್, ಬಾಬಾಜಾನ್ ಎಂ. ಶೇಖ್, ನೂರ್ ಮಹಮ್ಮದ್, ಮತ್ತಿತರರು ಇದ್ದರು.

ಇದನ್ನೂ ಓದಿ: Job News: ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳ

ಈ ಸಂದರ್ಭದಲ್ಲಿ ಚೆನ್ನಪ್ಪ ಹಾಗೂ ವಿಲ್ಸನ್ ಫರ್ನಾಂಡಿಸ್ ನೇತೃತ್ವದಲ್ಲಿ ಕಿರವತ್ತಿ ಭಾಗದ ನೂರಕ್ಕೂ ಹೆಚ್ಚು ಜನರು ಕಾಂಗ್ರೆಸ್ ಸೇರ್ಪಡೆಗೊಂಡರು. ಅನಿಲ್ ಮರಾಠೆ ಸ್ವಾಗತಿಸಿದರು, ವಿ.ಎಸ್. ಭಟ್ ಪ್ರಾಸ್ತಾವಿಕ ಮಾತನಾಡಿದರು. ರವಿ ನಾಯ್ಕ ಎಂಜಿನಿಯರ್‌ ವಂದಿಸಿದರು.

Exit mobile version