ಗೋಕರ್ಣ: ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 31ನೇ ಚಾತುರ್ಮಾಸ್ಯ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ. ಅನಾವರಣ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಶ್ರೀಗಳು, ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದು, ವರ್ಷಾಕಾಲದಲ್ಲಿ ಲೋಕಹಿತಕ್ಕಾಗಿ ಪರಮ ಪುರುಷನ ಆರಾಧನೆ, ಅನುಷ್ಠಾನಗಳಲ್ಲಿ ನಿರತರಾಗುವರು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಪ್ರಕಟಣೆಯಲ್ಲಿ (Uttara Kannada News) ತಿಳಿಸಿದ್ದಾರೆ.
ಚಾತುರ್ಮಾಸ್ಯದ ಪ್ರತಿದಿನವೂ ಸಮಾಜದ ವಿಶಿಷ್ಟ ವ್ಯಕ್ತಿಗಳು, ವಿಷಯಗಳು ಮತ್ತು ವಸ್ತುಗಳ ಅನಾವರಣ ಈ ಬಾರಿಯ ವಿಶೇಷ. 60 ದಿನಗಳಲ್ಲಿ ಕನಿಷ್ಠ 60 ವ್ಯಕ್ತಿ-ವಿಷಯ- ವಸ್ತುಗಳ ʼಅನಾವರಣʼಕ್ಕೆ ಈ ಚಾತುರ್ಮಾಸ್ಯ ಸಾಕ್ಷಿಯಾಗಲಿದೆ. ಸಮಾಜದಲ್ಲಿ ಎಲೆಮರೆಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತಿರುವ, ಇದುವರೆಗೆ ಸಮಾಜಕ್ಕೆ ತೆರೆದುಕೊಳ್ಳದ ವ್ಯಕ್ತಿಗಳು, ಸಮಾಜದಲ್ಲಿ ಬೆಳಕಿಗೆ ಬರದ ಶ್ರೀಮಠದ ಭವ್ಯತೆ, ರಾಮಚಂದ್ರಾಪುರ ಮಠದ ಮಹತ್ವದ ಯೋಜನೆಗಳ ಅನಾವರಣ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ.
ಚಾತುರ್ಮಾಸ್ಯಕ್ಕೆ ಪೂರ್ವಭಾವಿಯಾಗಿ ಮುನ್ನಾ ದಿನ (ಜುಲೈ 20) ಶ್ರೀಗಳು ಪುರಾತನ ಮಲ್ಲಿಕಾರ್ಜುನ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯುವರು. ರಾಜ್ಯದ ಮೂಲೆಮೂಲೆಗಳಿಂದ ಶಿಷ್ಯಭಕ್ತರು ಸಮರ್ಪಿಸಿದ ಸುವಸ್ತುಗಳಿಗೆ ಧಾನ್ಯಲಕ್ಷ್ಮಿಪೂಜೆಯನ್ನು ರಾಘವೇಶ್ವರ ಶ್ರೀಗಳು ನೆರವೇರಿಸುವರು. ಬಳಿಕ ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ ಚಾತುರ್ಮಾಸ್ಯ ಪರ್ಯಂತ ಲಕ್ಷಾಂತರ ಶಿಷ್ಯಭಕ್ತರಿಗೆ ಅನ್ನದಾನ ಆರಂಭವಾಗಲಿದೆ.
ಇದನ್ನೂ ಓದಿ: Paris Olympics: ಅತಿ ಹೆಚ್ಚು ಒಲಿಂಪಿಕ್ಸ್ ಆತಿಥ್ಯ ವಹಿಸಿದ ದೇಶ ಯಾವುದು?
ಆಷಾಢ ಶುದ್ಧ ಹುಣ್ಣಿಮೆಯಂದು ವ್ಯಾಸಪೂಜೆ ಮತ್ತು ಗುರು ಪರಂಪರೆ ಪೂಜೆಯೊಂದಿಗೆ 31ನೇ ವರ್ಷದ ವ್ರತಾರಂಭ ಮಾಡುವರು. ಜುಲೈ 24ರಂದು ಶ್ರೀವರ್ಧಂತಿ, ಆಗಸ್ಟ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳ ಜತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶಗಳು ಚಾತುರ್ಮಾಸ್ಯದಲ್ಲಿ ಆಯೋಜಿತವಾಗಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಸೆಪ್ಟೆಂಬರ್ 18ರಂದು ಸೀಮೋಲ್ಲಂಘನೆಯೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ.
ಚಾತುರ್ಮಾಸ್ಯದಲ್ಲಿ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಶ್ರೀಗಳು, ಸಹಸ್ರ ಗಂಗಾಜಲ ಅಭಿಷೇಕಕ್ಕೆ ಸಂಕಲ್ಪಿಸಿದ್ದಾರೆ. ಪವಿತ್ರ ಗಂಗಾಜಲದಿಂದ ತುಂಬಿದ ಸುವರ್ಣ, ರಜತ ಮತ್ತು ತಾಮ್ರ ಕಲಶಗಳ ಸೇವೆಗೆ ಭಕ್ತರಿಗೆ ಅವಕಾಶವಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಕರಾರ್ಚಿತ ದೇವರಿಗೆ ಸರ್ವಸೇವೆ ಸಮರ್ಪಣೆಗೆ ಅವಕಾಶ ಇದೆ. ಅಂತೆಯೇ ಮಹಾಸೇವೆ, ತುಲಾಭಾರ ಸೇವೆ, ಸ್ವರ್ಣಪಾದುಕೆ ಭಿಕ್ಷಾಸೇವೆ, ಸ್ವರ್ಣಪಾದುಕಾ ಪೂಜೆ, ಪಾದುಕಾಪೂಜೆ, ಅನ್ನದಾನ, ಸುವಸ್ತು ಸಮರ್ಪಣೆ ಮತ್ತಿತರ ಸೇವೆಗಳನ್ನೂ ಸಲ್ಲಿಸಲು ಅವಕಾಶವಿದೆ.
ಇದನ್ನೂ ಓದಿ: Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್ ಸೇವಾ ಪ್ರಶಸ್ತಿ
ಎರಡು ತಿಂಗಳ ಅವಧಿಯ ಚಾತುರ್ಮಾಸ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಗಣ್ಯರು, ಶಿಷ್ಯಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಗತ್ಯ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.