Site icon Vistara News

Uttara Kannada News: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳ ಅಟ್ಟಹಾಸ: ಹರಿಪ್ರಕಾಶ್‌ ಕೋಣೆಮನೆ

State BJP Spokesperson Hariprakash konemane latest Pressmeet

ಯಲ್ಲಾಪುರ: ಕರ್ನಾಟಕದಲ್ಲಿ (Karnataka) ದಿನೇದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಇಂದು ನಾವು ಕರ್ನಾಟಕದಲ್ಲಿದ್ದೇವೆಯೋ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೋ ಎಂದು ಯೋಚಿಸುವ ಪರಿಸ್ಥಿತಿ ಉಂಟಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಬಂದಾಗಿನಿಂದ, ಮತಾಂಧ ಶಕ್ತಿಗಳು ರಾಜ್ಯದ ಉದ್ದಗಲಕ್ಕೂ ತಮ್ಮ ದುಷ್ಕೃತ್ಯಗಳನ್ನು ಮೆರೆಯಲು ಆರಂಭಿಸಿವೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್‌ ಕೋಣೆಮನೆ (Uttara Kannada News) ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದ ವಿವಿಧೆಡೆ ಪಾಕಿಸ್ತಾನದ ಧ್ವಜ ಹಾರಾಡುವುದನ್ನು, ಪಾಕಿಸ್ತಾನದ ಪರ ಘೋಷಣೆ ಕೂಗುವ ಘಟನೆಗಳನ್ನು ನಾವೆಲ್ಲ ನೋಡಿದ್ದೇವೆ. ಮಂಗಳೂರಿನಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ಗೆ ಸಂಬಂಧಿಸಿದ ಆರೋಪಿಗಳನ್ನು ತಮ್ಮ ಬ್ರದರ್ಸ್‌ ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು ಕರೆಯುತ್ತಾರೆ. ವಿಧಾನಸೌಧದ ಆವರಣದಲ್ಲೇ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರೂ, ಅದನ್ನು ಸಾಬೀತುಪಡಿಸುವ ಎಫ್‌ಎಸ್‌ಎಲ್‌ ವರದಿ ಬಂದಾಗಲೂ, ಈವರೆಗೂ ಅಂತಹ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ. ಬದಲಾಗಿ ವರದಿ ನೀಡಿದ ಪೊಲೀಸ್‌ ಇಲಾಖೆಯನ್ನೇ ರಾಜ್ಯದ ಮುಖ್ಯ ಮಂತ್ರಿಗಳು ತರಾಟೆಗೆ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದು ದೂರಿದರು.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

ಕಾಂಗ್ರೆಸ್‌ ಸರ್ಕಾರವು ಮತಾಂಧರಿಗೆ ಕುಮ್ಮಕ್ಕು ನೀಡುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಇದರಿಂದಾಗಿ ಕರ್ನಾಟಕದ ಜನತೆಗೆ ಅಭದ್ರತೆ ಎದುರಾಗಿದೆ. ಕೇವಲ ಮತಕ್ಕಾಗಿ ರಾಜ್ಯದಲ್ಲಿ ಆತಂಕದ ಸನ್ನಿವೇಶವನ್ನು ಹುಟ್ಟುಹಾಕುವ, ಬಾಂಬ್‌ ಬ್ಲಾಸ್ಟ್‌ ಮಾಡುವ, ದೇಶದ್ರೋಹಿಗಳ ಪರವಾಗಿ ಕಾಂಗ್ರೆಸ್‌ ಸರ್ಕಾರ ನಿಂತಿರುವುದು ಸ್ಪಷ್ಟವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ನಲ್ಲಿ ಸುಧಾರಿತ ಸ್ಫೋಟಕ ಬಳಕೆಯ ಕುರಿತು ಪ್ರಾಥಮಿಕ ವರದಿ ಇದ್ದಾಗಲೂ ಕೂಡ, ರಾಜ್ಯ ಸರ್ಕಾರ ಇದು ವ್ಯಾಪಾರದ ವೈಷಮ್ಯದ ಕಾರಣದಿಂದ ಆಗಿರುವ ಘಟನೆ ಎಂಬ ಶಂಕೆ ವ್ಯಕ್ತಪಡಿಸಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಮೂಲಕ ಇಂತಹ ವಿಧ್ವಂಸಕ ಕೃತ್ಯ ನಡೆಸುವವರಿಗೆ ಸರ್ಕಾರ ನೇರವಾಗಿ ಕುಮ್ಮಕ್ಕು ನೀಡುತ್ತಿದೆ ಎಂದರು.

ಇಂತಹ ಘಟನೆಗಳು ನಡೆದಾಗ, ಘಟನೆಯ ಕುರಿತು ಸಮರ್ಪಕ ತನಿಖೆ ಕೈಗೊಂಡು, ಅದರ ಹಿಂದಿನ ಕಾರಣೀಕರ್ತರು ಯಾವ ಧರ್ಮಕ್ಕೆ ಸೇರಿದವರು ಎನ್ನುವ ವಿಶ್ಲೇಷಣೆಗೆ ಹೋಗದೆ ಕಠಿಣ ಶಿಕ್ಷೆ ನೀಡಬೇಕು. ಉಪ ಮುಖ್ಯಮಂತ್ರಿಗಳು ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆದರೆ ಈಗ ಅದು ಬಾಂಬ್‌ ಬೆಂಗಳೂರಾಗಿ ಮಾರ್ಪಾಡಾಗುತ್ತಿರುವುದು ವಿಷಾದನೀಯ. ಜಗತ್ತಿನ ವಿವಿಧ ಉದ್ಯಮಗಳು ಬೆಂಗಳೂರಿನಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿರುವುದು ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಭಯದ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವುದು, ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯತೆಯನ್ನು ತೋರುತ್ತದೆ ಎಂದರು.

ಇದನ್ನೂ ಓದಿ: Yadgiri News: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಇಷ್ಟಲಿಂಗ ಪೂಜೆ ನಡೆಸಿ ಪ್ರತಿಭಟನೆ

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಹತ್ಯೆಯಾಗುತ್ತಿವೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಲ್ಲಾಪುರದಲ್ಲಿ ಕಳೆದ ವಾರ ನಡೆದ ಸಿದ್ದಿ ಜನಾಂಗದ ಯುವಕನ ಕೊಲೆ ಪ್ರಕರಣವನ್ನೂ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನುವ ಶಂಕೆ ಮೂಡುತ್ತಿದೆ. ಇವೆಲ್ಲವನ್ನು ಗಮನಿಸಿದಾಗ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಪೊಲೀಸ್‌ ಇಲಾಖೆಯೂ ಸಹ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಪೊಲೀಸ್‌ ಇಲಾಖೆಯು ಜವಾಬ್ದಾರಿಯುತ ಕ್ರಮ ಕೈಗೊಳ್ಳದೆ ಸರ್ಕಾರದ ಕೈಗೊಂಬೆಯಾಗುತ್ತ ಹೋಗಿ ಭಯೋತ್ಪಾದಕರ, ಕೊಲೆಗಡುಕರ ರಕ್ಷಣೆಗೆ ನಿಂತಲ್ಲಿ ಮುಂದೊಂದು ದಿನ ಪೊಲೀಸರ ರಕ್ಷಣೆಗೂ ಯಾರೂ ಇರುವುದಿಲ್ಲ. ಜನಸಾಮಾನ್ಯರು ಕಾನೂನನ್ನು ಕೈಗೆತ್ತುಕೊಳ್ಳುವ ಪರಿಸ್ಥಿತಿ ಎದುರಾಗದಂತೆ ಪೊಲೀಸ್‌ ಇಲಾಖೆ ನೋಡಿಕೊಳ್ಳಬೇಕಿದೆ ಎಂಬುದು ನಮ್ಮ ಮನವಿಯಾಗಿದೆ ಎಂದರು.

ಇದನ್ನೂ ಓದಿ: ಟಿ20 ವಿಶ್ವಕಪ್​ ತಂಡ ಪ್ರಕಟಕ್ಕೆ ಗಡುವು ನೀಡಿದ ಐಸಿಸಿ; ಭಾರತ ಸಂಭಾವ್ಯ ತಂಡ ರೆಡಿ!

ಈ ಸಂದರ್ಭದಲ್ಲಿ ಬಿಜೆಪಿ ಯಲ್ಲಾಪುರ ಮಂಡಲದ ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌, ಪ್ರಮುಖರಾದ ಗಣಪತಿ ಮಾನಿಗದ್ದೆ, ಮಾಧ್ಯಮ ಪ್ರಕೋಷ್ಠದ ಸಂಚಾಲಕ ಕೆ.ಟಿ. ಹೆಗಡೆ ಇದ್ದರು.

Exit mobile version