Site icon Vistara News

Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

Uttara Kannada News Take precautionary measures to prevent the spread of infectious diseases in the district says DC Gangubai manakar

ಕಾರವಾರ: ಪ್ರಸಕ್ತ ಮಳೆಗಾಲದ (Rain) ಅವಧಿಯಲ್ಲಿ ಜಿಲ್ಲೆಯಲ್ಲಿ (Uttara Kannada News) ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಸಮಿತಿಯ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: RCB vs CSK: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

ಮಳೆಗಾಲದಲ್ಲಿ ಕಂಡುಬರಬಹುದಾದ ಡೆಂಗ್ಯು, ಚಿಕುನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ ಮತ್ತಿತರ ರೋಗಗಳ ಲಕ್ಷಣಗಳು, ಅವುಗಳ ಹರಡುವಿಕೆ ಹಾಗೂ ನಿಯಂತ್ರಣ ಕುರಿತಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಿ, ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಕಾರ್ಯಕ್ರಗಳನ್ನು ಆಯೋಜಿಸಿ ಎಂದ ಅವರು, ಎಲ್ಲಾ ಸಾಂಕ್ರಾಮಿಕ ರೋಗಗಳಿಗೆ ಅಗತ್ಯವಿರುವ ಚುಚ್ಚುಮದ್ದು ಮತ್ತು ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಇದುವರೆಗೆ 1 ಮಲೇರಿಯಾ, 1 ಚಿಕನ್ ಗುನ್ಯಾ, 46 ಡೆಂಗಿ ಪ್ರಕರಣಗಳು ವರದಿಯಾಗಿರುವ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಡೆಂಗ್ಯು ಪ್ರಕರಣಗಳು ಹೆಚ್ಚಾಗದಂತೆ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ, ತಕ್ಷಣ ಚಿಕಿತ್ಸೆ ನೀಡುವುದರ ಮೂಲಕ ರೋಗ ಹರಡದಂತೆ ನೋಡಿಕೊಳ್ಳಿ. ಸೊಳ್ಳೆಗಳ ಉತ್ಪತ್ತಿ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದರು.

ಇದನ್ನೂ ಓದಿ: Ration Card: ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ? ಇಲ್ಲಿದೆ ಸಂಪೂರ್ಣ ವಿವರ

ಜಿಲ್ಲೆಯಲ್ಲಿ ಈ ಬಾರಿ ಮಂಗನ ಕಾಯಿಲೆಯ 106 ಪ್ರಕರಣಗಳು ಕಂಡು ಬಂದಿದ್ದು, 9 ಸಾವುಗಳು ಸಂಭವಿಸಿದ್ದು, ಮಂಗನ ಕಾಯಿಲೆಯ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ಎಂದರು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಚರಂಡಿಗಳಲ್ಲಿ ಮಳೆ ನೀರು ನಿಲ್ಲದೇ ಸರಾಗವಾಗಿ ಹರಿದು ಹೋಗುವಂತೆ ಮಾಡಲು ತಕ್ಷಣದಿಂದಲೇ ಸ್ವಚ್ಚತಾ ಕ್ರಮಗಳನ್ನು ಕೈಗೊಂಡು, ಚರಂಡಿಯಲ್ಲಿ ತುಂಬಿರುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲಾ ತಾಲೂಕುಗಳಲ್ಲಿ 108 ಸೇರಿದಂತೆ ಎಲ್ಲಾ ಆಂಬ್ಯುಲೆನ್ಸ್ ಗಳು ಸುಸ್ಥಿತಿಯಲ್ಲಿರಬೇಕು. ತುರ್ತು ಸಂದರ್ಭದಲ್ಲಿ ತಕ್ಷಣವೇ ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕುದಿಸಿ, ಆರಿಸಿದ ಕುಡಿಯುವ ನೀರು ಬಳಕೆ, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಸೇರಿದಂತೆ‌, ತೆಗೆದುಕೊಳ್ಳಬೇಕಾದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಮಾಹಿತಿಯನ್ನು ಜಿಲ್ಲೆಯ ಎಲ್ಲಾ ಮನೆ ಮನೆಗಳಿಗೆ ತಲುಪಿಸಬೇಕು ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಕೂಡಾ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.

ಇದನ್ನೂ ಓದಿ: Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಅರ್ಚನಾ ನಾಯಕ್, ಆರ್.ಸಿ.ಎಚ್ ಅಧಿಕಾರಿ ಡಾ. ನಟರಾಜ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಮೇಶ್ ರಾವ್, ನಗರಸಭೆ ಪೌರಾಯುಕ್ತ ರವಿಕುಮಾರ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version