Site icon Vistara News

Uttara Kannada News: ಉ.ಕ ಜಿಲ್ಲೆ ಬಿಜೆಪಿ ಕಾರ್ಯಕರ್ತರ ಕ್ಷೇತ್ರ ಎಂಬುದು ಮತ್ತೊಮ್ಮೆ ಸಾಬೀತು: ಕಾಗೇರಿ

Uttara Kannada MP Vishweshwara hegde kageri spoke in Thanksgiving ceremony for bjp party workers in banavasi

ಬನವಾಸಿ: ಜಿಲ್ಲೆಯ ಜನತೆಗೆ ವ್ಯಕ್ತಿ ಮುಖ್ಯವಲ್ಲ. ದೇಶದ ಅಭಿವೃದ್ಧಿ ಮುಖ್ಯ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಹಾಗೂ ಕಾರ್ಯಕರ್ತರ ಕ್ಷೇತ್ರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಉತ್ತರ ಕನ್ನಡ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Uttara Kannada News) ಹೇಳಿದರು.

ಇಲ್ಲಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ “ಕೃತಜ್ಞತಾ ಸಮಾರಂಭ” ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದನ್ನೂ ಓದಿ: Karnataka Weather : ಕರಾವಳಿ ಸೇರಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಮಳೆ ಜತೆಗೆ ರಭಸವಾಗಿ ಬೀಸಲಿದೆ ಗಾಳಿ

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಚುನಾಯಿತನಾಗಲು ಪಕ್ಷದ ಎಲ್ಲಾ ಕಾರ್ಯಕರ್ತರ ಪರಿಶ್ರಮ ಊಹೆಗೂ ನಿಲುಕದ್ದು ಎಂದು ಭಾವಿಸಿದ್ದೇನೆ. ಚುನಾವಣೆಗೂ ಮುನ್ನ ಐತಿಹಾಸಿಕ ಶ್ರೀ ಮಧುಕೇಶ್ವರ ದೇವರ ಆಶೀರ್ವಾದ ಪಡೆದು ಚುನಾವಣೆಯ ಪ್ರಕ್ರಿಯೆ ಆರಂಭಿಸಿದ್ದೇವೆ. ಇಂದು ಶ್ರೀ ಮಧುಕೇಶ್ವರ ದೇವರ ಆಶೀರ್ವಾದ, ನಿಮ್ಮೆಲ್ಲರ ಸಹಕಾರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದೇನೆ. ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ ಎಂದರು.

ಬನವಾಸಿಯ ಅಭಿವೃದ್ಧಿ ಕಾರ್ಯ ಬಹಳಷ್ಟು ಬಾಕಿ ಉಳಿದಿದ್ದು, ಪುರಾತತ್ವ ಇಲಾಖೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಬನವಾಸಿ ಹಾಗೂ ಗುಡ್ನಾಪೂರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಮುಖ್ಯವಾಗಿ ಈ ಕ್ಷೇತ್ರದ ಶಾಸಕರು ನಮ್ಮವರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮೋಸ ಮಾಡುವವರಿಗೆ ಕಾಲವೇ ತಕ್ಕ ಪಾಠ ಕಲಿಸುತ್ತದೆ. ಯಲ್ಲಾಪುರ ಕ್ಷೇತ್ರದ ಪ್ರಬುದ್ಧ ಜನತೆ ಎಲ್ಲ ಮಂಡಲಗಳಲ್ಲಿ ಬಿಜೆಪಿಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಮೋಸಗಾರರಿಗೆ ತಕ್ಕ ಪಾಠ ಕಲಿಸಿದ್ದಾರೆ. ಶಾಸಕರು ಬಿಜೆಪಿ ತತ್ವ ಸಿದ್ದಾಂತಕ್ಕೆ ಒಪ್ಪಿಕೊಳ್ಳದೇ ಇದ್ದರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲು ಮುಂದಾಗಲಿ ಎಂದು ನಮ್ಮ ಕಾರ್ಯಕರ್ತರು ಸವಾಲು ಹಾಕುತ್ತಿರುವುದನ್ನು ಕಂಡರೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಈ ಸಂದರ್ಭದಲ್ಲಿ ಬಿಜೆಪಿಯ ಗ್ರಾಮೀಣ ಮಂಡಲದ ಪ್ರಮುಖರು, ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version