ಕಾರವಾರ: ಅಂಕೋಲಾ ಶಿರೂರು ಬಳಿ ಹೆದ್ದಾರಿಯಲ್ಲಿ (Highway landslide) ಭಾರಿ ಗುಡ್ಡ ಕುಸಿದು (Uttarakannada landslide) ಹತ್ತು ಮಂದಿ ನಾಪತ್ತೆಯಾದ ಘೋರ ದುರಂತದ ಸ್ಥಳದಲ್ಲಿ ಐದು ಶವಗಳು ಪತ್ತೆಯಾಗಿವೆ. ಇಂದು ಮುಂಜಾನೆಯಿಂದ ಮತ್ತೆ ಶವ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಎರಡು ಹಿಟಾಚಿ, ಎರಡು ಜೆಸಿಬಿ ಯಂತ್ರಗಳ ಮೂಲಕ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ತಂಡ ಪಾಲ್ಗೊಂಡಿದೆ. ಈಗಾಗಲೇ ಐದು ಮೃತದೇಹಗಳು ಪತ್ತೆಯಾಗಿವೆ. ಮತ್ತಷ್ಟು ಜನ ಮಣ್ಣಿನಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಹತ್ತು ಮಂದಿ ಮಣ್ಣಿನೊಳಗೆ ಸಿಲುಕಿದ್ದಾರೆ ಎಂದು ಶಂಕಿಸಲಾಗಿತ್ತು. ನಿನ್ನೆ ಮಹಿಳೆಯೊಬ್ಬರ ಶವ ದೊರೆತಿತ್ತು. ನಿನ್ನೆ ಕತ್ತಲಾದ್ದರಿಂದ ಹಾಗೂ ಮಳೆಯ ಕಾರಣ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.
ಗುಡ್ಡದ ಮಣ್ಣು ಹೆದ್ದಾರಿಗೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ತೆರವು ಕಾರ್ಯಾಚರಣೆಗೆ ಹತ್ತಾರು ಲಾರಿ ಬಳಸಲಾಗುತ್ತಿದೆ. ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸ್, ಎನ್‌ಡಿಆರ್‌ಎಫ್ ಸಿಬ್ಬಂದಿ ಭಾಗಿಯಾಗಿದ್ದಾರೆ.
ಭೂಕುಸಿತ ಪ್ರದೇಶದಲ್ಲೇ ಸಡಿಲಗೊಂಡಿರುವ ಗುಡ್ಡ ಮತ್ತೆ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲೂ ಮತ್ತೆ ಕುಸಿಯುವ ಸಾಧ್ಯತೆ ಕಂಡುಬಂದಿದೆ. ಗುಡ್ಡದ ಮದ್ಯ ಭಾಗದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ರಸ್ತೆಯ ಪಕ್ಕದಲ್ಲಿರುವ ಹೊಳೆಗೆ ಮಣ್ಣನ್ನು ಒಯ್ಯುತ್ತಿದೆ. ರಕ್ಷಣಾ ಕಾರ್ಯಕ್ಕೆ ಅಡ್ಡಿಯೂ ಆಗುತ್ತಿದೆ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದಾಗಿ ಗುಡ್ಡಕ್ಕೆ ಸರಿಪಡಿಸಲಾಗದ ಧಕ್ಕೆಯಾಗಿದ್ದು, ಇನ್ನಷ್ಟು ಬಲಿ ಪಡೆಯುವ ಭೀತಿಯಿದೆ ಎನ್ನಲಾಗಿದೆ.
ಸಂಚಾರ ನಿಷೇಧ
ಭೂಕುಸಿತ ಕಾರ್ಯಾಚರಣೆ ಹಿನ್ನಲೆ ಶಿರೂರು ವ್ಯಾಪ್ತಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ವಿಧಿಸಲಾಗಿದೆ. ಅಂಕೋಲಾ ತಾಲ್ಲೂಕಿನ ವಾಸರಕುದ್ರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದ ಸುತ್ತ ಸಾರ್ವಜನಿಕರು, ವಾಹನ ಸವಾರರು ಓಡಾಡದಂತೆ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಆದೇಶಿಸಿದ್ದಾರೆ. ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆಯಾಗಿ ನಿಷೇಧ ವಿಧಿಸಲಾಗಿದೆ.
ಉಸ್ತುವಾರಿ ಸಚಿವ ಭೇಟಿ
ಸ್ಥಳಕ್ಕೆ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ಐದು ಮೃತ ದೇಹ ಪತ್ತೆಯಾಗಿದೆ. ಕಾರ್ಯಾಚರಣೆ ನಡೆಯುತ್ತಿದೆ. ಇದು ದೊಡ್ಡ ದುರಂತ, ಹೀಗೆ ಆಗಬಾರದಿತ್ತು. ಇದರ ಹೊಣೆಗಾರಿಕೆ ಐಆರ್ ಬಿಯವರದು. ಹತ್ತು ವರ್ಷದಿಂದ ಒಂದು ರಸ್ತೆ ಕ್ಲೀಯರ್ ಮಾಡೋಕೆ ಆಗಿಲ್ಲ. ಒಂದು ವರ್ಷದಿಂದ ಐಆರ್ ಬಿಯವರಿಗೆ ಹೇಳಿದ್ದೆ. ಅವರು ವ್ಯತ್ಯಾಸ ಮಾಡಿದ್ದರಿಂದ ಹೀಗೆ ಆಗಿದೆ. ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಕೋಡೋಕೆ ತಯಾರಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಗೋಕರ್ಣದಲ್ಲೂ ಭೂಕುಸಿತ
ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಸ್ವಲ್ಪ ತಗ್ಗಿದೆಯಾದರೂ, ಗುಡ್ಡ ಕುಸಿತ ಪ್ರಕರಣಗಳು ನಿಂತಿಲ್ಲ. ಕುಮಟಾ ತಾಲೂಕಿನ ಗೋಕರ್ಣದಲ್ಲಿ (Gokarna landslide) ಇಂದು ಬೆಳ್ಳಂಬೆಳಿಗ್ಗೆ ಗುಡ್ಡ ಕುಸಿದಿದೆ. ಗೋಕರ್ಣ ಮುಖ್ಯ ಕಡಲತೀರದ ಹತ್ತಿರದ ರಾಮಮಂದಿರ ಬಳಿ ಗುಡ್ಡ ಕುಸಿತವಾಗಿದೆ. ಅದೃಷ್ಟವಶಾತ್ ದೇವಸ್ಥಾನದಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ.
ಉರುಳಿಕೊಂಡು ಬಂದ ಗುಡ್ಡದ ಬೃಹತ್ ಕಲ್ಲು ದೇವಸ್ಥಾನದ ಗೋಡೆಗೆ ತಾಗಿ ನಿಂತಿದೆ. ರಾಮಮಂದಿರ ದೇವಸ್ಥಾನಕ್ಕೆ ಯಾವುದೇ ಹಾನಿ ಆಗಿಲ್ಲ. ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ಪರಿಣಾಮ ಗುಡ್ಡದ ಮಣ್ಣು ಸಡಿಲವಾಗಿದ್ದು, ಮಳೆಗೆ ಕುಸಿದಿದೆ ಎಂದು ಆರೋಪಿಸಲಾಗಿದೆ.
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಧಾರಾಕಾರ ಗಾಳಿ ಮಳೆ ಮುಂದುವರಿದಿದ್ದು, ಸುವರ್ಣಾ, ಸೀತಾ ನದಿಗಳು ತುಂಬಿ ಹರಿಯುತ್ತಿವೆ. ಆಗುಂಬೆ, ಚಿಕ್ಕಮಗಳೂರಿನಲ್ಲಿ ಮಳೆಯಾದ ಪರಿಣಾಮ ಕರಾವಳಿಯ ನದಿಗಳು ಭರ್ತಿಯಾಗಿವೆ. ನದಿ, ಹೊಳೆ ಪಾತ್ರದ ಗದ್ದೆಗಳಲ್ಲಿ ನೆರೆಯ ವಾತಾವರಣ ಕಂಡುಬಂದಿದೆ. ನದಿ, ಸಮುದ್ರ ತೀರದ ಜನಕ್ಕೆ ಉಡುಪಿ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದ್ದು, ಎರಡು ದಿನ ಸಮುದ್ರ ಮೀನುಗಾರಿಕೆ ನಿಷೇಧಿಸಿದೆ.
ಇದನ್ನೂ ಓದಿ: Uttara Kannada Rain: ಭಾರಿ ಮಳೆಗೆ ತತ್ತರಿಸಿದ ಉತ್ತರ ಕನ್ನಡ; ಭೂಕುಸಿತಕ್ಕೆ 11 ಸಾವು, ರಸ್ತೆಗಳೇ ಮಾಯ, ತೋಟ ಗದ್ದೆ ಮುಳುಗಡೆ