Site icon Vistara News

Anant Vaidya : ಹಿರಿಯ ಪತ್ರಕರ್ತ ಅನಂತ್ ವೈದ್ಯ ನಿಧನ; ಶಿವರಾಮ್ ಹೆಬ್ಬಾರ್ ಸಂತಾಪ

Anant Vaidya passes away

ಯಲ್ಲಾಪುರ: ಹಿರಿಯ ಪತ್ರಕರ್ತ, ಅಂಕಣಕಾರ, ಅನಂತ ವೈದ್ಯ (75) ಅವರು ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ.

ಪಟ್ಟಣದ ಹುಲ್ಲೂರ ಮನೆಯಲ್ಲಿರುವ ಅವರ ಸ್ವಗೃಹಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ತೆರಳಿ ಅನಂತ ವೈದ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಅನಂತ ವೈದ್ಯರು ಮೂಲತಃ ಅಂಕೋಲಾ ತಾಲೂಕಿನ ವೈದ್ಯಹೆಗ್ಗಾರಿನವರಾಗಿದ್ದು, ಪತ್ನಿ ವಿಜಯಶ್ರೀ, ಇಬ್ಬರು ಪುತ್ರಿಯರಾದ ಕವಿತಾ, ಸಂಗೀತಾ, ಒಬ್ಬರು ಪುತ್ರ ಕಿರಣ ಅವರನ್ನು ಅಗಲಿದ್ದಾರೆ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿಯೂ ಕೆಲವು ವರ್ಷ ಇವರು ಸೇವೆ ಸಲ್ಲಿಸಿದ್ದರು.

ಕನ್ನಡ ಮತ್ತು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಇವರು, ಯಕ್ಷಗಾನದ ಮೊಟ್ಟಮೊದಲ ಮಾಸಪತ್ರಿಕೆ ಯಕ್ಷರಂಗದ ಸಂಪಾದಕರಾಗಿದ್ದರು. ಈ ಮಾಸಪತ್ರಿಕೆಯನ್ನು ಹಲವು ವರ್ಷ ತಮ್ಮ ಪ್ರಕಾಶ ಪ್ರಿಂಟಿಂಗ್ ಪ್ರೆಸ್‌ ಮೂಲಕ ಪ್ರಕಟಿಸಿದ್ದರು. ಯಕ್ಷಗಾನದ ಅರ್ಥಧಾರಿಗಳಾಗಿ ಇವರು ಹೆಸರು ಮಾಡಿದ್ದಾರೆ. ಯಕ್ಷಗಾನದ ಶ್ರೇಷ್ಠ ಕಲಾವಿದರು, ಅರ್ಥಧಾರಿಗಳೂ ಆಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟ ಅವರ ಚಿಂತನೆಗಳನ್ನು ಸಂಗ್ರಹಿಸಿ ಜ್ಞಾನಯಜ್ಞ ಎಂಬ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸಿದ್ದರು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸೈಬರ್‌ ಲೋಕದಲ್ಲಿ ವರ್ಚುವಲ್ ಅಪಹರಣ

ಇವರು ಬರೆದ ” ಪಾದುಕಾ ಪ್ರಧಾನ” ಗ್ರಂಥ ಕೆಲವು ವರ್ಷಗಳ ಹಿಂದೆ ಪ್ರಕಟಗೊಂಡಿದೆ. ಪುರಾಣ ಮತ್ತು ಭಾರತಗಳಲ್ಲಿನ ವಿಶಿಷ್ಟ ಸಂಗತಿಗಳನ್ನಾಧರಿಸಿದ ಅಂಕಣವನ್ನು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಇವರು ಬರೆದಿದ್ದಾರೆ.

Exit mobile version