Site icon Vistara News

Belagavi Protest: ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಿಸಿ; ಉ.ಕ. ಹೋರಾಟ ಸಮಿತಿ ಆಗ್ರಹ

Belagavi Protest

ಬೆಳಗಾವಿ: ಚಳಿಗಾಲದ ಅಧಿವೇಶನ ಎರಡನೇ ದಿನವೇ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ. ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಘೋಷಣೆ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ನಗರದ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ (Belagavi Protest) ನಡೆಸಲಾಯಿತು.

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಘೋಷಣೆ ಮಾಡಬೇಕು. ಆಡಳಿತಾತ್ಮಕ ಅನುಕೂಲಕ್ಕಾಗಿ ಬೆಂಗಳೂರಿನಿಂದ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು. ಜತೆಗೆ ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ನೀರಾವರಿ, ಕೃಷಿ, ಶಿಕ್ಷಣ, ಆರೋಗ್ಯ, ಆಡಳಿತ, ಉದ್ಯಮ ವಿಷಯಗಳ ಕುರಿತು ಚರ್ಚೆ ಆಗಬೇಕು. ಉತ್ತರ ಕರ್ನಾಟಕ ಜನಪ್ರತಿನಿಧಿಗಳಿಗೆ ಸಮಾನ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | HD Kumaraswamy: ಕೆಲವು ವರ್ಗಗಳ ಓಲೈಕೆ ಸಿಎಂ ಅಜೆಂಡಾ: ಎಚ್.ಡಿ. ಕುಮಾರಸ್ವಾಮಿ ಕಿಡಿ

ರಾಜಕೀಯ ನಾಯಕರು ಕೇವಲ ಬಾಯಿ ಮಾತಿನಲ್ಲಿ ಬೆಳಗಾವಿ ಎರಡನೇ ರಾಜಧಾನಿ ಎಂದರೆ ಸಾಲದು, ಅಧಿಕೃತವಾಗಿ ಘೋಷಣೆ ಮಾಡಬೇಕು. ಉಭಯ ಸದನಗಳಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಣಯ ಮಂಡಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ಮಠಾಧೀಶರು ಸೇರಿ ಅನೇಕ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಸುವರ್ಣ ಗಾರ್ಡನ್ ಬಳಿ ಸಾಲು ಸಾಲು ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಡಿವಾಳರ ಸಂಘ, ಅಕ್ಷರದಾಸೋಹ ಕಾರ್ಮಿಕರ ಸಂಘ ಸೇರಿ ಹಲವು ಸಂಘಟನೆಗಳಿಂದ ಸುವರ್ಣಸೌಧ ಬಳಿಯ ಸುವರ್ಣ ಗಾರ್ಡನ್‌ನಿಂದ ಪ್ರತಿಭಟನೆ ನಡೆಸಲಾಯಿತು.

ಡಾ. ಅನ್ನಪೂರ್ಣಮ್ಮನ್ನವರ ವರದಿ ಜಾರಿಗೆ ಒತ್ತಾಯಿಸಿ ಮಡಿವಾಳರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಶಿಳ್ಳೆಕ್ಯಾತಾಸ್ ಮತ್ತು ಕಿಳ್ಳೆಕ್ಯಾತರು ಒಂದೇ ಸಮುದಾಯಕ್ಕೆ ಸೇರಿದವರು. ಸರ್ಕಾರ ಎರಡು ಸಮುದಾಯಗಳನ್ನು ಸೇರಿಸಬೇಕು. ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಜಾಡಮಾಲಿ ನೌಕರರಿಗೆ ಸೇವಾ ಭದ್ರತೆ, ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು, ವಜಾ ಗೊಳಿಸರುವ ಆದೇಶವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದನ್ನೂ ಓದಿ | Elephant Arjuna: ಮಾವುತರಿಗೆ ಪ್ರತಿ ವರ್ಷ ಅರ್ಜುನ ಹೆಸರಲ್ಲಿ ಪ್ರಶಸ್ತಿ ನೀಡಿ: ದಿನೇಶ್‌ ಗೂಳಿಗೌಡ ಒತ್ತಾಯ

ಕನಿಷ್ಠ ವೇತನ, ಇಎಸ್ಐ, ಪಿಎಫ್ ನೀಡಲು ಬಿಸಿಯೂಟ‌ ಕಾರ್ಯಕರ್ತೆಯರ ಆಗ್ರಹ

ಬಿಸಿಯೂಟ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಡಿ ಪರಿಗಣಿಸಿ, ರಾಜ್ಯ ಸರ್ಕಾರದ ಕನಿಷ್ಠ ವೇತನ ಕಾಯ್ದೆಯ ಶೆಡ್ಯೂಲ್‌ಗೆ ಒಳಪಡಿಸಬೇಕು. ಕನಿಷ್ಠ ವೇತನ, ಇಎಸ್ಐ, ಪಿಎಫ್ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರದಾಸೋಹ ಕಾರ್ಮಿಕರ ಸಂಘದ ಬಿಸಿಯೂಟ ಕಾರ್ಯಕರ್ತೆಯರು ಒತ್ತಾಯಿಸಿದರು.

Exit mobile version