ತುಮಕೂರು: ನಾನಿನ್ನೂ 10-15 ವರ್ಷಗಳ ಕಾಲ ಚಲಾವಣೆಯಲ್ಲಿ ಇರುತ್ತೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಸೇವೆಯಲ್ಲಿ ಇರುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ವಿ. ಸೋಮಣ್ಣ (V Somanna) ಬಿಜೆಪಿ ನಾಯಕರಿಗೆ ಪರೋಕ್ಷ ಸಂದೇಶವನ್ನು ರವಾನೆ ಮಾಡಿದ್ದಾರೆ. ವಿ.ಸೋಮಣ್ಣ ಪ್ರತಿಷ್ಠಾನದಿಂದ ಸಿದ್ದಗಂಗಾ ಮಠದಲ್ಲಿ ನಿರ್ಮಾಣಗೊಂಡಿರುವ ನೂತನ ಗುರುಭವನ ಕಟ್ಟಡದ ಉದ್ಘಾಟನೆ ವೇಳೆ ಮಾತಾನಾಡಿದರು.
ಸಿದ್ದಗಂಗಾ ಮಠದಲ್ಲಿ ಗುರುಭವನ ನಿರ್ಮಾಣ ಮಾಡುವ ಪುಣ್ಯ ನನಗೆ ಸಿಕ್ಕಿದೆ. ಶಿವಕುಮಾರ ಶ್ರೀಗಳ ಆಶೀರ್ವಾದದಿಂದ ಈ ಒಳ್ಳೆ ಕೆಲಸ ನಡೆಯುತ್ತಿದೆ. ನನ್ನದು ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಅವರದ್ದೂ ಸುಮಾರು 40-45 ವರ್ಷಗಳ ಒಡನಾಟವಿದೆ. ಅವರ ತಂದೆ ಗಂಗಾಧರಯ್ಯ ಅವರು ಯಾವಾಗಲೂ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಸೋಮಣ್ಣ ಬಸವಣ್ಣನ ಅನುಯಾಯಿ ಎಂದು ತುಂಬಾ ಪ್ರೀತಿ ಇಟ್ಟುಕೊಂಡಿದ್ದರು.
ಶಿವಕುಮಾರ ಸ್ವಾಮೀಜಿಯವರು ಓದಿದ್ದ ಸೆಂಟ್ರಲ್ ಕಾಲೇಜು ಈಗ ವಿಶ್ವವಿದ್ಯಾಲಯವಾಗಿ ಬದಲಾಗಿದೆ. ಅವರ ಹೆಸರಿನಲ್ಲಿ ಒಂದು ಅಧ್ಯಯನ ಪೀಠ ತೆರೆಯಬೇಕು ಎಂದುಕೊಂಡಿದ್ದೆ. ಆದರೆ ನನ್ನ ಅವಧಿಯಲ್ಲಿ ಆಗಲಿಲ್ಲ. ನಾನು ಭಾರತ ಸರ್ಕಾರವನ್ನು ಮೂರ್ನಾಲ್ಕು ಬಾರಿ ಒತ್ತಾಯ ಮಾಡಿದ್ದೇನೆ ಎಂದು ನೆನೆಪು ಮಾಡಿಕೊಂಡರು.
ಹಿಂದೆಲ್ಲ ಈ ಜಾಗದಲ್ಲಿ ಕುಳಿತು ಶಿವಕುಮಾರ ಸ್ವಾಮೀಜಿ ಜತೆಗೆ ಮಾತನಾಡುತ್ತಿದ್ದೆ, ಆದರೆ ಈಗ ಇದೇ ಜಾಗದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಅವರಿಂದಾಗ ಪೂಜ್ಯರು ಒಂದು ಸಂದೇಶವನ್ನು ಕೊಟ್ಟಿದ್ದರು. ನೀನೂ ಬೆಂಗಳೂರು ನಗರಕ್ಕೆ ನಿನ್ನ ಕೊಡುಗೆ ಕೊಟ್ಟಿದ್ದರೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡು ಎಂದು ಹೇಳಿದ್ದರು. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಕೂಡ ವಿಶ್ವಾಸ ತುಂಬಿದರು. ಹೀಗಾಗಿ 1999ರಲ್ಲಿ ನಾನು ಮೊದಲ ಬಾರಿ ಸ್ಪರ್ಧಿಸಿ ಗೆದ್ದಿದ್ದೆ. ಆ ಮೂಲಕ ರಾಜಕೀಯ ಪ್ರವೇಶ ಪಡೆಯಲು ಶಿವಕುಮಾರ ಸ್ವಾಮೀಜಿಗಳು ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಕಾರಣರಾದರು.
ನಾನು ಈ ಮಠದಲ್ಲಿ ಕಾರ್ಯಕ್ರಮ ಮಾಡಬೇಕು ಎಂದುಕೊಂಡಾಗ ಹಲವು ಅಡೆತಡೆಗಳು ಬಂದಿದ್ದವು. ಆದರೆ ಈಗ ಗುರುಹಿರಿಯರ ಆಶೀರ್ವಾದದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಸ್ವಾಮೀಜಿಯವರು ಇಲ್ಲೇ ಕಾರ್ಯಕ್ರಮ ಮಾಡಿಸಿ ಎಂದಿದ್ದರು. ನಾನು ಏನಾದರೂ ತಪ್ಪನ್ನು ಮಾಡಿದರೆ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಇಲ್ಲಿಯವರೆಗೆ ಯಾವ ತಪ್ಪನ್ನು ಮಾಡಿಲ್ಲ. ನಾನು ಇನ್ನೂ ಒಂದು ಹತ್ತು ಹದಿನೈದು ವರ್ಷಗಳ ಕಾಲ ಚಲಾವಣೆಯಲ್ಲಿ, ಸೇವೆಯಲ್ಲಿ ಇರುತ್ತೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಸಾರ್ವಜನಿಕ ಜೀವನದಲ್ಲಿ ಇರುವೆ. ನನ್ನ ಜೀವನ ತೆರೆದ ಪುಸ್ತಕ ಇದ್ದಂತೆ ಎಂದು ಮಾರ್ಮಿಕವಾಗಿ ಮಾತನಾಡಿ ಭಾಷಣ ಮುಗಿಸಿದರು.
ಇದನ್ನೂ ಓದಿ: BJP Karnataka: ನನ್ನ ಬಾಯಿ ಮುಚ್ಚಿಸಲು ಆಗಲ್ಲ; ಉಪ ನಾಯಕನಿಗೆ ಪವರ್ ಇಲ್ಲ: ಬಿಜೆಪಿ ವಿರುದ್ಧ ಯತ್ನಾಳ್ ಕಿಡಿ
ನಾಯಿ-ನರಿಗಳಿಂದ ವ್ಯತ್ಯಾಸ- ವಿ ಸೋಮಣ್ಣ
ಪಾರ್ಟಿ-ಗಿಟ್ಟಿ ಎಂಬುದು ನಮ್ಮ ತಲೆಯಲ್ಲಿ ಇಲ್ಲ. ಕೆಲ ನಾಯಿ-ನರಿಗಳಿಂದ ಸ್ವಲ್ಪ ವ್ಯತ್ಯಾಸವಾಗಿದೆ. ಕಾಲ ಬಂದಾಗ ಮಾತನಾಡುತ್ತೇನೆ. ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ. 2-3 ದಿನ ಕಾದು ಆಮೇಲೆ ಹೊರಗೆ ಹಾಕುತ್ತೇನೆ. ನಾನು ಯಾವತ್ತು ಅಧೈರ್ಯವಂತ ಆಗಿಲ್ಲ. ನ.30 ರಂದು ಹೈ ಕಮಾಂಡ್ ಸಮಯ ಕೊಟ್ಟಿತ್ತು. ಆದರೆ ನಾನು ಹೋಗಲು ಆಗಲಿಲ್ಲ.
ನನ್ನ ನಡವಳಿಕೆಯನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ಬೆಂಗಳೂರಲ್ಲಿ 14-15 ವರ್ಷ ಮಂತ್ರಿ ಆಗಿದ್ದೆ ಎಂಬುದಕ್ಕಿಂತ ಧ್ವನಿ ಇಲ್ಲದವರಿಗೆ ಕೆಲಸ ಮಾಡಿದ್ದೇನೆ. ನೇರ ನುಡಿಯ ಸಂಸ್ಕಾರವು ಸಿದ್ದಗಂಗಾ ಮಠದಿಂದ ಬಂದಿದೆ. ವರಿಷ್ಟರು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಹೇಳುತ್ತಾರೋ ತಿಳಿದಿಲ್ಲ. ಅರ್ಹತೆ ಗುರುತಿಸುವ ಮಾನದಂಡ ಈ ರೀತಿ ಆಗಿರಬಾರದು. ಅರ್ಹತೆ ಅವಕಾಶ ವಂಚಿತವಾಗಬಾರದು. ಅರ್ಹತೆಯು ಯಾರ ಮನೆಯ ಸ್ವತ್ತಲ್ಲ. ಹೈ ಕಮಾಂಡ್ ನವರು ಆಗಿರುವ ತಪ್ಪನ್ನು ಯಾವ ರೀತಿ ಸರಿ ಪಡಿಸುತ್ತಾರೆ ಎಂಬುದು ತಿಳಿದಿಲ್ಲ ಎಂದರು. ಸ್ವತಂತ್ರವಾಗಿ ಬೆಂಗಳೂರಿನಲ್ಲಿ ಗೆದ್ದು ಬಂದಿದ್ದೇನೆ. ಕೆಲವು ಸಂದರ್ಭದಲ್ಲಿ ನನ್ನ ದುರಂಹಕಾರ ನಮಗೆ ತೊಂದರೆ ಕೊಡುತ್ತೆ. ಆಕಾಶವಿದೆ ಎಂದು ಉಗುಳಿದೆ, ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು.
ಸೋಮಣ್ಣ ವಿಚಿತ್ರ ಮನುಷ್ಯ- ಸಚಿವ ಡಾ. ಜಿ.ಪರಮೇಶ್ವರ್
ನೂತನ ಗುರುಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಪರಮೇಶ್ವರ್, 40 ವರ್ಷಗಳ ಹಿಂದೆ ರಾಜಾಜಿನಗರದಲ್ಲಿ ಶಾಲೆಯೊಂದನ್ನು ಆರಂಭ ಮಾಡಿದಾಗ ನಮ್ಮ ತಂದೆಯವರು, ಸೋಮಣ್ಣ ಅವರನ್ನು ಪರಿಚಯ ಮಾಡಿಸಿಕೊಟ್ಟರು. ಅಂದಿನಿಂದ ಇವತ್ತಿನವರೆಗೆ ನಮ್ಮಿಬ್ಬರ ನಡುವೆ ಸಂಬಂಧ ತುಂಬಾ ಹತ್ತಿರವಾಗಿದೆ. ಸೋಮಣ್ಣ ಒಂದು ರೀತಿ ವಿಚಿತ್ರ ಮನುಷ್ಯ. ಯಾರ ಬಗ್ಗೆಯೂ ದೋಷಣೆ ಮಾಡಲು ಹೋಗುವುದಿಲ್ಲ. ದೊಡ್ಡ ಬುದ್ದಿಯವರ ಆಶೀರ್ವಾದವನ್ನು ಫಿಕ್ಸಿಡ್ ಡೆಪಾಸಿಟ್ ಮಾಡಿಕೊಂಡು ಬಿಟ್ಟಿದ್ದಾರೆ. ಅದು ಈಗ ಚಿಕ್ಕ ಬುದ್ದಿಯವರಿಂದ ಮುಂದುವರೆದಿದೆ ಎಂದರು.
ಒಂದು ಕಾಲದಲ್ಲಿ ನಾವಿಬ್ಬರು ಅಕ್ಕ-ಪಕ್ಕದಲ್ಲೇ ಕುಳಿತುಕೊಂಡಿದ್ದವರು. ನಾನು ಸೋನಿಯಾ ಗಾಂಧಿ ಬಳಿ ಸೋಮಣ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಹೇಳಿ ಬಂದಿದ್ದೆ. ಆದರೆ ಈ ಸೋಮಣ್ಣ ಒಂದು ದಿನ ಹೋಗಿ ಬಿಜೆಪಿಗೆ ಸೇರಿಬಿಟ್ಟಿದ್ದಾನೆ. ಏನು ಸೋಮಣ್ಣ ಹೀಗೆ ಮಾಡಿದ್ದೀಯಾ ಎಂದು ಕೇಳಿದ್ದಕ್ಕೆ ಬಸವರಾಜ್ ಕರೆದುಕೊಂಡು ಹೋಗಿದ್ದಾಗಿ ಹೇಳಿದ್ದರು. ಆದರೆ ಅಲ್ಲಿ ಕೂಡ ಅವರಿಗೆ ಒಳ್ಳೆಯದಾಗಿದೆ. ಬಿಜೆಪಿಯಲ್ಲಿಯೂ ಅವರು ಶಾಸಕರಾಗಿ, ಸಚಿವರಾಗಿದರು. ಮುಂದೆ ಕೂಡ ಒಳ್ಳೆಯ ಭವಿಷ್ಯ ಇದೆ ಎಂದು ನಾನು ನಂಬಿದ್ದೀನಿ ಎಂದು ತಿಳಿಸಿದರು.
ರಾಜಕಾರಣಕ್ಕೆ ಸುಳ್ಳೇ ಬಂಡವಾಳ- ಸಚಿವ ಕೆ.ಎನ್.ರಾಜಣ್ಣ!
ಬಳಿಕ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ರಾಜಕೀಯ ವಿಚಾರದ ಬಗ್ಗೆ ಸೋಮಣ್ಣ ಹೇಳಿದ್ದು ಅರ್ಧ ಸತ್ಯ, ಅರ್ಧ ಸುಳ್ಳಿದೆ. ಆದರೆ ನಾನು ಪೂರ್ತಿ ಸತ್ಯ ಹೇಳುತ್ತೇನೆ. ಅದಕ್ಕೆ ಅವರಿಗೆ ತೊಂದರೆ ಆಗುತ್ತೆ ಎಂದು ರಾಜಕೀಯ ಬೇಡ ಅಂತಿದ್ದಾರೆ. ಸೋಮಣ್ಣ ತುಂಬಾ ಕ್ರಿಯಾಶೀಲ ವ್ಯಕ್ತಿ, ಯಾವತ್ತೂ ಸ್ನೇಹಿತರಿಗೆ ಮೋಸ ಮಾಡುವಂತಹ ಮನುಷ್ಯ ಅಲ್ಲ. ಈಗ ಎಲ್ಲಾ ಅನುಕೂಲ ಸಿಂಧು ರಾಜಕಾರಣ ಮಾಡುತ್ತಿದ್ದಾರೆ.
ನನಗೆ ಕಾಂಗ್ರೆಸ್‌ನಲ್ಲಿ ಸೀಟ್ ಕೊಟ್ಟಿಲ್ಲ ಎಂದರೆ ಬೇರೆ ಪಕ್ಷಕ್ಕೆ ಹೋಗುತ್ತಿನಿ. ಆ ಪಕ್ಷದಲ್ಲೂ ಸಿಕ್ಕಿಲ್ಲ ಎಂದರೆ ಮತ್ತೊಂದು ಕಡೆ ಹೋಗುತ್ತೇನೆ. ಪಕ್ಷ, ಸಿದ್ಧಾಂತ ಎಂಬ ಕಾಲವೆಲ್ಲ ಈಗಿಲ್ಲ. ರಾಜಕಾರಣಕ್ಕೆ ಬಂಡವಾಳ ಎಂದರೆ ಅದು ಸುಳ್ಳು. ಆದರೆ ನಾನು ಇಲ್ಲಿವರೆಗೂ ನನ್ನ ಸ್ವಾರ್ಥಕ್ಕಾಗಿ ಸುಳ್ಳು ಹೇಳಿಲ್ಲ. ಬೇರೆಯವರಿಗೆ ಅನುಕೂಲ ಆಗುತ್ತೆ ಎಂದರೆ ಸುಳ್ಳು ಹೇಳಿದ್ದೇನೆ. ಮುಂದೆಯೂ ನನ್ನ ಸ್ವಾರ್ಥಕ್ಕಾಗಿ ಸುಳ್ಳು ಹೇಳಬಾರದು ಎಂದುಕೊಂಡಿದ್ದೇನೆ ಎಂದರು.
ಸಂಸದ ಜಿ.ಎಸ್.ಬಸವರಾಜ್ ಕೂಡ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಅವರು ಅಧಿವೇಶನ ತೊರೆದು ಈ ಪವಿತ್ರ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು. 21 ವರ್ಷ ನಾನೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಟಿಕೆಟ್ ಕೊಡುವ ವಿಚಾರಕ್ಕೆ ನಮ್ಮಗಳ ನಡುವೆ ಜಗಳ ನಡೆಯಿತು. ಪರಮೇಶ್ವರ್ ಅವರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆ. ಪರಮೇಶ್ವರ್ ಅವರು ಚುನಾವಣೆಯಲ್ಲಿ ಗೆದ್ದು ತಂದೆಗೆ ತಕ್ಕ ಮಗನಾಗಿ ಕೆಲಸ ಮಾಡಿದರು. ನಾನು ರಾಜಣ್ಣ ಸೈದ್ಧಾಂತಿಕವಾಗಿ ಮಾತನಾಡಿದ್ದೇವೆ. ಈಗಾಗಲೇ ನಾನು 56 ವರ್ಷ ರಾಜಕೀಯದಲ್ಲೆ ಮುಗಿಸಿದ್ದೀನಿ. ಸೋಮಣ್ಣ ಬಗ್ಗೆ ನನಗೇನು ಅನುಕಂಪ ಇಲ್ಲ. ಆದರೆ ಪ್ರೀತಿ, ವಿಶ್ವಾಸ ಇದೆ. ಅವರ ಹೋರಾಟ ನ್ಯಾಯದ ಪರವಾಗಿರುತ್ತದೆ. ಸೋಮಣ್ಣ ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅದೇ ರೀತಿ ಅವರ ಪತ್ನಿ ಶೈಲಜಾ ಅವರು ಕೂಡ ಮಠಕ್ಕೆ ಒಂದು ಕೊಡುಗೆ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: Assembly Session : ಗಾಂಧಿ ಮೇಲೋ, ಬಸವಣ್ಣ ಮೇಲೋ; ಅಧಿವೇಶನದಲ್ಲಿ ಫೋಟೊ ವಿವಾದ
ಸೋಮಣ್ಣರಿಗೆ ಸೋಲಾಗಿದೆ- ಸಿದ್ದಲಿಂಗ ಸ್ವಾಮೀಜಿ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ, ಶ್ರೀ ಮಠಕ್ಕೆ ಹಲವಾರು ಭಕ್ತರು ಹಲವು ರೀತಿಯ ದಾನ ಧರ್ಮ ಮಾಡಿದ್ದಾರೆ. ಹಲವು ನಿಲಯಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಹಾಗೆಯೇ ಸೋಮಣ್ಣನವರ ಕುಟುಂಬ ಕೂಡ ಇಲ್ಲಿ ಗುರುಭವನ ನಿರ್ಮಾಣ ಮಾಡಿದ್ದಾರೆ. ಸ್ವಾಮೀಜಿಗಳ ಪೂಜಾ ಕೈಂಕರ್ಯಕ್ಕೆ ಇಲ್ಲೊಂದು ಪೂಜಾ ಗೃಹ ಮತ್ತು ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಸೋಮಣ್ಣ ಮುಂದಾಗಿದ್ದರು. ಹಲವು ಬಾರಿ ಸ್ಥಳೀಯ ಕೆಲ ಮುಖಂಡರಿಗೆ ಹೇಳಿದ್ದರು. ಆದರೆ ಯಾರೂ ಈ ಕಡೆ ಗಮನ ಹರಿಸಿರಲಿಲ್ಲ. ಅವರ ಪತ್ನಿ ಶೈಲಜ ಅವರು ಕಳೆದ ಹತ್ತು ವರ್ಷಗಳಿಂದಲೂ ಇಲ್ಲೊಂದು ಸೇವೆ ಮಾಡಲು ಮನವಿ ಮಾಡುತ್ತಿದ್ದರು. ಹಾಗಾಗಿ ಗುರುಭವನ ನಿರ್ಮಾಣ ಮಾಡಿ, ಶ್ರೀ ಮಠಕ್ಕೆ ಅರ್ಪಿಸಿದ್ದಾರೆ ಎಂದರು.
ಇದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಇಲ್ಲಿ ಎಲ್ಲ ಕಾಂಗ್ರೆಸ್ ನಾಯಕರೇ ಸೇರಿದ್ದಾರೆ ಎಂದು ಅನ್ನಿಸಬಹುದು. ವಿಧಾನಸೌಧದಲ್ಲಿ ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳುತ್ತಾರೆ .ಆದರೆ ಹೊರಗೆ ಬರುವಾಗ ಹೆಗಲ ಮೇಲೆ ಕೈಹಾಕಿಕೊಂಡು ಬರುತ್ತಾರೆ. ಈ ಇಬ್ಬರು ಸಚಿವರು ಸೋಮಣ್ಣ ಮತ್ತು ಶ್ರೀ ಮಠದ ಮೇಲಿನ ಪ್ರೀತಿಯಿಂದ ಬಂದಿದ್ದಾರೆ. ಸೋಮಣ್ಣ ಹಳ್ಳಿಯಿಂದ ಬೆಳೆದು ಬಂದು, ಸಣ್ಣ ಉದ್ಯೋಗ ನಡೆಸಿಕೊಂಡು, ಯಾರ ಸಹಾಯ ಇಲ್ಲದೇ ಬೆಳೆದವರು. ಅವರಿಗೇ ಇವತ್ತು ಸೋಲಾಗಿದೆ. ರಾಜಕಾರಣ ಎಂದರೆ ಹಾಗೇನೇ, ಒಂದು ರೀತಿಯ ಚಕ್ರ ಇದ್ದಂತೆ. ಬಾರದು ಬಪ್ಪದು, ಬಪ್ಪದು ತಪ್ಪದು ಎಂದರು.
ಕಟ್ಟಡ ಉದ್ಘಾಟನೆ ಬಳಿಕ ಹಳೇ ಮಠದ ಆವರಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಶಿವಯೋಗಿ ಪುಸ್ತಕ ಬಿಡುಗಡೆ ಮಾಡಿದರು. ಇದೇ ವೇಳೆ ಸಿದ್ದಲಿಂಗ ಶ್ರೀಗಳಿಗೆ ಗುರುಭವನದ ಕಟ್ಟಡದ ಕೀಯನ್ನು ಸೋಮಣ್ಣ ಕುಟುಂಬದವರು ಹಸ್ತಾಂತರಿಸಿದರು. ಇದಕ್ಕೂ ಮೊದಲು ಸಿದ್ದಗಂಗಾ ಮಠದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಗುರುಭವನ ಆವರಣದಲ್ಲಿ ಬಿಲ್ವಪತ್ರೆ ಗಿಡಕ್ಕೆ ನೀರು ಹಾಕಿ ಉದ್ಘಾಟನೆ ಮಾಡಿದರು. ಉದ್ಘಾಟನೆಗೆ ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಸಂಸದ ಜಿ.ಎಸ್.ಬಸವರಾಜ್, ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ ಸೇರಿದಂತೆ ಸೋಮಣ್ಣ ಅವರ ಪತ್ನಿ ಶೈಲಜಾ, ಪುತ್ರ ಅರುಣ್ ಸೋಮಣ್ಣ ಉಪಸ್ಥಿತಿ ಇದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.