ಬೆಂಗಳೂರು: ಚೀನಾ ಸೈನಿಕರು ಭಾರತದೊಳಗೆ ನುಗ್ಗಿದಂತೆ ನಾವು ಕರ್ನಾಟಕದೊಳಗೆ ನುಗ್ಗುತ್ತೇವೆ ಎಂಬ ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿಕೆಗೆ ಸಚಿವ ವಿ. ಸುನಿಲ್ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಸ್ತಾರ ನ್ಯೂಸ್ ಜತೆ ಮಾತನಾಡಿರುವ ಅವರು ”ಸಂಜಯ್ ರಾವತ್ ಇಂಥ ಅಸಂಬದ್ಧ ಹೇಳಿಕೆ ನೀಡುತ್ತಲೇ ರಾಜಕಾರಣ ಮಾಡುತ್ತ ಬಂದಿದ್ದಾರೆ. ಅವರು ನೀಡುತ್ತಿರುವ ಹೇಳಿಕೆಗಳು ಅರ್ಥಹೀನ” ಎಂದು ಪ್ರತಿಕ್ರಿಯಿಸಿದ್ದಾರೆ.
”ಮಹಾರಾಷ್ಟ್ರ ಶಾಸಕರು, ಸಚಿವರು ಮತ್ತು ಶಿವಸೇನೆ ಮುಖಂಡರು ರಾಜಕೀಯ ಲಾಭಕ್ಕಾಗಿ ಗಡಿ ವಿವಾದ ಕೆದಕಿ ಹೇಳಿಕೆ ನೀಡುತ್ತಿದ್ದಾರೆ. ಗಡಿ ಕುರಿತು ಕರ್ನಾಟಕ ಸರ್ಕಾರ ಅಚಲ ನಿಲುವು ಹೊಂದಿದೆ. ಬೆಳಗಾವಿ ಎಂದಿಗೂ ನಮ್ಮದೇ” ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಗಡಿಯಲ್ಲಿ ಅಶಾಂತಿ ಸೃಷ್ಟಿಸಲು ಸರ್ಕಾರ ಅವಕಾಶ ಕೊಡಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿರುವವರು ಇಂತಹ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ. ಇಂತಹ ಹೇಳಿಕೆಗಳಿಂದ ರಾವತ್ ಅವ್ರಿಗೆ ಶೋಭೆ ತರುವುದಿಲ್ಲ. ಗಡಿ ಸಂಬಂಧ ಇಬ್ಬರೂ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ, ಬಗೆಹರಿಸುವ ಕೆಲಸವಾಗಲಿದೆ. ಆದರೆ, ಅಧಿಕಾರ ಕಳೆದುಕೊಂಡಿರುವ ರಾವತ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ರಾವತ್ ಹೇಳಿಕೆಯನ್ನು ಕಟುವಾಗಿ ಖಂಡಿಸುತ್ತೇವೆ” ಎಂದಿದ್ದಾರೆ.
ಈ ನಡುವೆ, ಮಹಾರಾಷ್ಟ್ರದ ಅಣೆಕಟ್ಟಿನ ಎತ್ತರ ಏರಿಸುವ ಮೂಲಕ ಕರ್ನಾಟಕಕ್ಕೆ ನೀರು ನಿಲ್ಲಿಸುತ್ತೇವೆ ಎಂಬ ಮಹಾರಾಷ್ಟ್ರ ಸಚಿವರ ಹೇಳಿಕೆಯನ್ನು ಸಚಿವ ಗೋವಿಂದ ಕಾರಜೋಳ ಗೇಲಿ ಮಾಡಿದ್ದಾರೆ.
ಎತ್ತರ ಏರಿಸಲು ಅಣೆಕಟ್ಟು ಮತ್ತು ನೀರು ಅವರ ತಾತನ ಆಸ್ತಿ ಅಲ್ಲ. ಮಹಾರಾಷ್ಟ್ರ ಸಂವಿಧಾನದ ಪ್ರಕಾರ ಕರ್ನಾಟಕಕ್ಕೆ ನೀರು ಬಿಡುತ್ತಿದೆ ಎಂದು ಕಾರಜೋಳ ಹೇಳಿದ್ದಾರೆ.
ಸಂಜಯ್ ರಾವತ್ ಹೇಳಿದ್ದೇನು?
“ಭಾರತ ಭೂಭಾಗವನ್ನು ಚೀನಾ ಅತಿಕ್ರಮಿಸಿದಂತೆ, ನಾವೂ ಕರ್ನಾಟಕಕ್ಕೆ ನುಗ್ಗುತ್ತೇವೆ. ಇದಕ್ಕಾಗಿ ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ನಾವು ಗಡಿ ಸಮಸ್ಯೆಯನ್ನು ಶಾಂತವಾಗಿಯೇ ಪರಿಹರಿಸಿಕೊಳ್ಳಲು ಇಚ್ಛಿಸಿದ್ದೆವು. ಆದರೆ ಕರ್ನಾಟಕ ಮುಖ್ಯಮಂತ್ರಿ ಬೆಂಕಿ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ದುರ್ಬಲವಾಗಿದೆ. ಒಂದು ಖಚಿತ ನಿಲುವನ್ನೇ ತೆಗೆದುಕೊಳ್ಳುತ್ತಿಲ್ಲ” ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಹೇಳಿದ್ದರು.
ಇದನ್ನೂ ಓದಿ | Border Dispute | ಭಾರತಕ್ಕೆ ಚೀನಾ ಪ್ರವೇಶಿಸಿದಂತೆ, ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ; ಗಡಿ ವಿವಾದದ ಉರಿ ಹೆಚ್ಚಿಸಿದ ಸಂಜಯ್ ರಾವತ್